ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಮಾಧ್ಯಮವೇ ಮಾಧ್ಯಮ ಕ್ಷೇತ್ರದ ಭವಿಷ್ಯ

ತುಮಕೂರು ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎಂ.ಶ್ರೀಶ
Last Updated 12 ಜುಲೈ 2019, 15:48 IST
ಅಕ್ಷರ ಗಾತ್ರ

ತುಮಕೂರು: ಮಾಧ್ಯಮ ಕ್ಷೇತ್ರದ ಒಟ್ಟಾರೆ ಭವಿಷ್ಯ ಡಿಜಿಟಲ್ ಮಾಧ್ಯಮಗಳಲ್ಲಿ ಅಡಗಿದೆ ಎಂದು ದುಬೈನ ಹೈಯರ್ ಕಾಲೇಜಿಸ್ ಆಫ್ ಟೆಕ್ನಾಲಜಿಯ ಅಪ್ಲೈಡ್ ಮೀಡಿಯಾ ವಿಭಾಗದ ಉಪನ್ಯಾಸಕ ಡಾ.ಎಂ.ಶ್ರೀಶ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ’ಮಾಧ್ಯಮರಂಗ: ಭವಿಷ್ಯದಲ್ಲೇನಿದೆ?’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಂಪ್ರದಾಯಿಕ ಮಾಧ್ಯಮಗಳ ಜಾಗವನ್ನು ಸಾಮಾಜಿಕ ಮಾಧ್ಯಮಗಳು ಆವರಿಸಿಕೊಳ್ಳುತ್ತಿವೆ. ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲ ಎಂದು ಇದರರ್ಥವಲ್ಲ. ಭವಿಷ್ಯದಲ್ಲಿ ಅದರ ಸ್ವರೂಪ ಬದಲಾಗಲಿದೆ. ವಾಸ್ತವವಾಗಿ ಸ್ಥಳೀಯ ಪತ್ರಿಕೆಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ’ ಎಂದರು.

‘ಕಾರ್ಪೋರೇಟ್ ಕಂಪನಿಗಳು ತಮ್ಮ ಜಾಹೀರಾತು ಮೊತ್ತದ ಶೇ 45ರಷ್ಟು ಪಾಲನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಬಳಸಲಿವೆ. ಸೋಷಿಯಲ್ ಮೀಡಿಯಾ ಮ್ಯಾನೇಜರ್ ಎಂಬುದು ಮುಂದಿನ ಕೆಲವೇ ವರ್ಷಗಳಲ್ಲಿ ಪ್ರತಿಷ್ಠಿತ ಹುದ್ದೆಯಾಗಲಿದೆ’ ಎಂದು ಪ್ರತಿಪಾದಿಸಿದರು.

‘2000 ಇಸ್ವಿಯಲ್ಲಿ ಭಾರತದಲ್ಲಿ ಅಂತರ್ಜಾಲ (ಇಂಟರ್‌ನೆಟ್‌) ಬಳಸುವವರ ಪ್ರಮಾಣ ಶೇ. 2 ಮಾತ್ರ ಇತ್ತು. ಆಗ ಅಮೇರಿಕದ ಶೇ 52ರಷ್ಟು ಜನರು ಅಂತರ್ಜಾಲ ಬಳಸುತ್ತಿದ್ದರು. ಈಗ ಭಾರತದ ಶೇ 60ರಷ್ಟು ಮಂದಿ ಅಂತರ್ಜಾಲ ಬಳಸುತ್ತಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತದ 90 ಕೋಟಿ ಜನರು ಅಂತರ್ಜಾಲ ಬಳಸಲಿದ್ದಾರೆ. ಇದರ ಅನುಕೂಲವನ್ನು ಮಾಧ್ಯಮರಂಗ ಬಳಸಿಕೊಳ್ಳಲಿದೆ’ ಎಂದರು.

‘ಬರವಣಿಗೆ ರೂಪದ ವಿಷಯಗಳಿಗಿಂತ ವಿಡಿಯೋ ನೋಡುವುದರಲ್ಲಿ ಹೊಸ ತಲೆಮಾರು ಹೆಚ್ಚು ಆಸಕ್ತಿ ಹೊಂದಿದೆ ಎಂಬುದನ್ನು ಸಾಮಾಜಿಕ ಮಾಧ್ಯಮಗಳು ಅರ್ಥ ಮಾಡಿಕೊಂಡಿವೆ. ಇದಕ್ಕೆ ತಕ್ಕಂತೆ ಮುದ್ರಣ ಮಾಧ್ಯಮಗಳೂ ತಮ್ಮ ಸ್ವರೂಪ ಹಾಗೂ ವಿಧಾನವನ್ನು ಬದಲಿಸಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದರು.

‘ಅನಿಮೇಶನ್ ಇಂದು ಬಹುಕೋಟಿ ಉದ್ಯಮವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊಸ ಸಾಧ್ಯತೆಗಳತ್ತ ತಮ್ಮನ್ನು ತೆರೆದುಕೊಳ್ಳಬೇಕು. ಕೌಶಲ ಇಲ್ಲದ ಕೇವಲ ಪದವಿಗೆ ಮುಂದಿನ ದಿನಗಳಲ್ಲಿ ಯಾವ ಮೌಲ್ಯವೂ ಇರುವುದಿಲ್ಲ’ ಎಂದು ಎಚ್ಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ‘ಭೂತ-ವರ್ತಮಾನ-ಭವಿಷ್ಯಗಳನ್ನು ಬೆಸೆಯುವ ಕೊಂಡಿಗಳಾಗಿರುವ ಮಾಧ್ಯಮಗಳು ಆಧುನಿಕ ಸಮಾಜದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ’ ಎಂದರು.

ಮಾಹಿತಿ ಸಂವಹನ ತಂತ್ರಜ್ಞಾನ ಈ ಕಾಲದ ದೊಡ್ಡ ವರ. ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದರಲ್ಲಿ ಅದರ ಪಾತ್ರ ದೊಡ್ಡದು. ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನಾರ್ಜನೆಗೆ ಅದನ್ನು ಬಳಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಮಚಂದ್ರಪ್ಪ ಮಾತನಾಡಿ, ಜಗತ್ತಿನ ಕಿಟಕಿಗಳಂತಿರುವ ಮಾಧ್ಯಮಗಳು ಅಭಿವೃದ್ಧಿಯ ಆಧಾರ ಸ್ತಂಭಗಳು’ ಎಂದರು.

ಉಪಪ್ರಾಂಶುಪಾಲ ಪ್ರೊ.ಟಿ.ಎನ್.ಹರಿಪ್ರಸಾದ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಕೆ.ವಿ.ಸಿಬಂತಿ ಪದ್ಮನಾಭ, ಉಪನ್ಯಾಸಕರಾದ ಸಿ.ದೇವರಾಜು, ಎಂ.ಎಸ್.ಕೋಕಿಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT