ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ವಾಲ್ಮೀಕಿ ಜಯಂತಿಗೆ ಅಡ್ಡಿ; ಪ್ರತಿಭಟನೆ

Last Updated 19 ಅಕ್ಟೋಬರ್ 2021, 4:13 IST
ಅಕ್ಷರ ಗಾತ್ರ

ತುಮಕೂರು: ವಾಲ್ಮೀಕಿ ಜಯಂತಿ ಆಚರಣೆ ಮಾಡದಂತೆ ತಡೆಯುವುದು, ಪರಿಶಿಷ್ಟರು ಜಯಂತಿ ಆಚರಿಸದಂತೆ ಅಡ್ಡಿಪಡಿಸುವ ಸಲುವಾಗಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಚುನಾವಣೆ ರ‍್ಯಾಲಿ, ದಸರಾ ಹಬ್ಬಗಳ ಮೆರವಣಿಗೆಗೆ ಇಲ್ಲದ ಕೋವಿಡ್ ನಿಯಮಗಳನ್ನು ವಾಲ್ಮೀಕಿ ಜಯಂತಿಗೆ ರೂಪಿಸುವ ಮೂಲಕ ದಲಿತರ ಜಯಂತಿಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಸಾವಿರಾರು ಜನರು ಸೇರುವ ಸಿನಿಮಾ, ನಾಟಕ, ಉತ್ಸವ, ಮಾಲ್‌ಗಳಿಗೆ ಅವಕಾಶ ನೀಡಲಾಗಿದೆ. ಕೋವಿಡ್ ಹೆಸರಿನಲ್ಲಿ ವಾಲ್ಮೀಕಿ, ಅಂಬೇಡ್ಕರ್ ಜಯಂತಿ ಆಚರಣೆಗೆ ಅಡ್ಡಿಪಡಿಸಿ, ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.

ವಾಲ್ಮೀಕಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತ ಕರೆದಿದ್ದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿತ್ತು. ಆದರೆ ಈಗ ಏಕಾಏಕಿ ಮೆರವಣಿಗೆ ನಡೆಸುವಂತಿಲ್ಲ, 100ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂಬ ನಿಯಮಗಳನ್ನು ರೂಪಿಸಲಾಗಿದೆ. ಇದು ಪರಿಶಿಷ್ಟರಿಗೆ ಮಾಡಿದ ಅಪಮಾನ. ಕೇವಲ ವಾಲ್ಮೀಕಿ ಜಯಂತಿಯಿಂದ ಕೋವಿಡ್ ಉಲ್ಬಣಿಸುವುದೆ. ಚುನಾವಣಾ ರ‍್ಯಾಲಿ, ದಸರಾ ಉತ್ಸವಗಳಿಂದ ಕೋವಿಡ್ ಬರುವುದಿಲ್ಲವೆ ಎಂದು
ಪ್ರಶ್ನಿಸಿದರು.

ಅಂಬೇಡ್ಕರ್, ಬಾಬು ಜಗಜೀವನ್ ರಾಂ, ವಾಲ್ಮೀಕಿ ಜಯಂತಿಗೆ ಮಾತ್ರ ವಿಶೇಷ ಕಟ್ಟುನಿಟ್ಟಿನ ನಿಯಮಗಳನ್ನು ರಾಜ್ಯ ಸರ್ಕಾರ ರೂಪಿಸುವ ಮೂಲಕ ಆರ್‌ಎಸ್ಎಸ್ ಅಜೆಂಡಾ ಜಾರಿ ತರಲು ಮುಂದಾಗಿದೆ ಎಂದು ಟೀಕಿಸಿದರು.

ಮಹಾಸಭಾ ಅಧ್ಯಕ್ಷ ಅರ್ಜುನ್ ಪಾಳೇಗಾರ್, ವಾಲ್ಮೀಕಿ ಯುವ ಕ್ರಾಂತಿ ಸೇನೆ ಅಧ್ಯಕ್ಷ ಕುಪ್ಪೂರು ಶ್ರೀಧರ ನಾಯಕ್, ಮುಖಂಡರಾದ ಬಂಡೆ ಶಿವಕುಮಾರ್, ಬಿಟ್ಟನಕುರಿಕೆ ಜಯಣ್ಣ, ನಾಗೇಶ್, ಪುನೀತ್, ಕುಮಾರ್, ನಾಗಣ್ಣ ಮರಳೂರು, ಎಚ್.ಜಿ.ರಂಗನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT