ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಕಲಹ!

Last Updated 19 ಏಪ್ರಿಲ್ 2022, 10:45 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿ ಜಿಲ್ಲಾ ಘಟಕದಲ್ಲಿ ಆಂತರಿಕ ಕಲಹ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಗೆ ಭೇಟಿಯ ನಂತರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀಶ ಅವರು ರಾಜೀನಾಮೆ ನೀಡುವ ಹಂತಕ್ಕೆ ಬಂದು ತಲುಪಿದೆ.

ಲಕ್ಷ್ಮೀಶ
ಲಕ್ಷ್ಮೀಶ

ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಿಂದಲೂ ಅಧ್ಯಕ್ಷರು ದೂರವೇ ಉಳಿದಿದ್ದರು. ದಾವಣಗೆರೆಯಲ್ಲಿ ಮಂಗಳವಾರ ನಡೆಯಲಿರುವ ವಿಭಾಗೀಯ ಪಟ್ಟದ ಸಭೆಗೂ ಹೋಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಸ್ವಾಗತಕ್ಕೆ ಟೊಂಕ ಕಟ್ಟಿ ನಿಂತಿದ್ದ ಲಕ್ಷ್ಮೀಶ ಅವರು ನಂತರ ಯಾರ ಕೈಗೂ ಸಿಗುತ್ತಿಲ್ಲ. ಕಳೆದ ಎಂಟತ್ತು ದಿನಗಳಿಂದ ಪಕ್ಷದ ಕಚೇರಿಯತ್ತ ತಲೆ ಹಾಕಿಲ್ಲ. ದೂರವಾಣಿ ಸಂಪರ್ಕಕ್ಕೂ ಲಭ್ಯವಾಗುತ್ತಿಲ್ಲ. ಸಂಸದರು, ಶಾಸಕರು, ಮಾಜಿ ಶಾಸಕರಿಂದ ಪಕ್ಷದ ಕಚೇರಿಯಲ್ಲಿ ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸಲಾಯಿತು. ಆ ಸಮಯದಲ್ಲೂ ಅಧ್ಯಕ್ಷರ ಸುಳಿವು ಕಾಣಲಿಲ್ಲ. ಅಂಬೇಡ್ಕರ್ ಜಯಂತಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಅವರ ಅನುಪಸ್ಥಿತಿಯಲ್ಲಿ ಮಾಡಲಾಯಿತು.

‘ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯಿಸಿ, ಅಪಮಾನ ಮಾಡುತ್ತಿದ್ದಾರೆ. ನನ್ನ ಮಾತಿಗೆ ಬೆಲೆ ಇಲ್ಲವಾಗಿದೆ. ಪಕ್ಷ ಸಂಘಟನೆ ಸೇರಿದಂತೆ ಯಾವ ನಿರ್ಧಾರ ಕೈಗೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಆಂತರಿಕವಾಗಿ ಗುಂಪುಗಾರಿಕೆ ತೀವ್ರವಾಗಿದ್ದು, ಯಾರೂ ಸ್ಪಂದಿಸುತ್ತಿಲ್ಲ. ತಮಗೆಬೇಕಾದವರನ್ನು ಮುಂಚೂಣಿ ಘಟಕಗಳು ಹಾಗೂ ಇತರೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನನ್ನ ಸಹಿಯನ್ನೇ ದುರುಪಯೋಗ ಪಡಿಸಿಕೊಳ್ಳ ಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳು ತುಂಬುವ ಮುನ್ನವೇ ಭಿನ್ನಮತದಿಂದಾಗಿ ಪಕ್ಷ ಮುನ್ನಡೆಸಲು ಸಾಧ್ಯವಾಗದೆ ಹೈರಾಣಾಗಿದ್ದಾರೆ. ಹಿಂದೆ ಬಿ.ಸುರೇಶ್‌ಗೌಡ ಅಧ್ಯಕ್ಷರಾಗಿದ್ದ ಸಮಯದಲ್ಲೂ ಇಂತಹುದೇ ಗೊಂದಲಗಳು ಮೂಡಿದ್ದವು. ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಯಿತು. ಆಂತರಿಕ ಕಚ್ಚಾಟ ಶಮನಗೊಳಿಸುವ ಸಲುವಾಗಿ ಜಿಲ್ಲೆಯನ್ನು ಎರಡು ವಿಭಾಗ ಮಾಡಿ, ಇಬ್ಬರು ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ನಂತರ ಸ್ವಲ್ಪ ಮಟ್ಟಿಗೆ ಶಾಂತವಾದಂತೆ ಕಂಡುಬಂದರೂ ಮತ್ತೆ ಅದೇ ದಾರಿಗೆ ಮರಳಿದ್ದು, ಜಿಲ್ಲೆಯ ನಾಯಕರಿಗೆ ತಲೆಬಿಸಿ ತಂದೊಡ್ಡಿದೆ.

ಆರಂಭ ಎಲ್ಲೆ?: ಲಕ್ಷ್ಮೀಶ ಅಧ್ಯಕ್ಷರಾದ ನಂತರ ಸಂಘಟನೆ ದೃಷ್ಟಿಯಿಂದ ಕೆಲವು ಬದಲಾವಣೆ ಮಾಡಿದರು. ಪದಾಧಿಕಾರಿಗಳ ನೇಮಕಕ್ಕೂ ಚಾಲನೆ ನೀಡಿದರು. ಆದರೆ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪಡಿವಾಳ (ದಾವಣಗೆರೆ ವಿಭಾಗ) ಎಲ್ಲದಕ್ಕೂ ಮಧ್ಯೆ ಪ್ರವೇಶ ಮಾಡಿದ್ದರಿಂದಾಗಿ ಆಂತರಿಕ ಕಲಹ ಹೆಚ್ಚಾಗಲು ಕಾರಣವಾಯಿತು. ಪರೋಕ್ಷವಾಗಿ ಲಕ್ಷ್ಮೀಶ ಅವರ ಅಧಿಕಾರವನ್ನು ಕಿತ್ತುಕೊಂಡು, ಜಿಲ್ಲೆಯ ಆಂತರಿಕ ವಿಚಾರದಲ್ಲೂ ಪಡಿವಾಳ ಅವರೇ ಅಧಿಕಾರ ಚಲಾಯಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲು ಮುಂದಾದರು ಎನ್ನಲಾಗಿದೆ.

ವಿರೋಧದ ನಡುವೆ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿದ್ದ ವೈ.ಎಚ್.ಹುಚ್ಚಯ್ಯ ಅವರನ್ನು ಬದಲಾವಣೆ ಮಾಡಲಾಯಿತು. ಯುವ ಘಟಕದ ಅಧ್ಯಕ್ಷರಾಗಿದ್ದ ರವೀಶ್, ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿದ್ದ ಸುಮಿತ್ರ ಸೇರಿದಂತೆ ಹಲವರ ಸ್ಥಾನ ಪಲ್ಲಟವಾಯಿತು. ಇದೆಲ್ಲವೂ ಹಿರೀಕರಿಗೆ ಸಿಟ್ಟು ತರಿಸಿದ್ದು, ಲಕ್ಷ್ಮೀಶ ಅವರನ್ನು ಪ್ರಶ್ನಿಸಲು ಆರಂಭಿಸಿದರು. ಈ ವಿಚಾರಗಳು ಅಧ್ಯಕ್ಷರ ಗಮನಕ್ಕೆ ಬಂದಿರಲಿಲ್ಲ. ಇಂತಹ ಒಂದೊಂದೇ ಬೆಳವಣಿಗೆಗಳು, ಕೊನೆಗೆ ಅಧ್ಯಕ್ಷರನ್ನು ಅಸಹಾಯಕ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಇದರಿಂದ ಬೇಸತ್ತು ಕೆಳಗಿಳಿಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಟಿಕೆಟ್ ಲೆಕ್ಕಾಚಾರ: ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷವಿದ್ದು, ಈಗಲೇ ಟಿಕೆಟ್ ಹಂಚಿಕೆಯ ಪ್ರಸ್ತಾಪವಾಗಿರುವುದು ಆಂತರಿಕ ಕಲಹ ಹೆಚ್ಚಳಕ್ಕೆ ತುಪ್ಪ ಸುರಿದಿದೆ. ತುಮಕೂರು ನಗರಕ್ಕೆ ಹೆಬ್ಬಾಕ ರವಿ ಹೆಸರು ಪ್ರಸ್ತಾಪಿ ಸಲಾಗಿದೆ. ಕುಣಿಗಲ್ ಕ್ಷೇತ್ರದಲ್ಲಿ ಕೃಷ್ಣಕುಮಾರ್ ಬದಲಿಗೆ ಕಾಂಗ್ರೆಸ್‌ನ ಎಸ್.ಪಿ.ಮುದ್ದಹನುಮೇಗೌಡ, ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಮಾಜಿ ಶಾಸಕ ಕಿರಣ್ ಕುಮಾರ್ ಹೆಸರು ಪ್ರಸ್ತಾಪಿಸಿರುವುದು, ಗುಬ್ಬಿಯಲ್ಲಿ ಜಿ.ಎನ್‌.ಬೆಟ್ಟಸ್ವಾಮಿ ಬದಲು ಪರ್ಯಾಯ ಅಭ್ಯರ್ಥಿಗೆ ಹುಡುಕಾಟ ನಡೆಸಿರುವುದು ಹಿರಿಯರ ತಲೆ ಬಿಸಿ ಮಾಡಿದೆ.

‘ಪಕ್ಷದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಸಣ್ಣ ಪುಟ್ಟ ಗೊಂದಲಗಳು ಇರುತ್ತವೆ. ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಲಕ್ಷ್ಮೀಶ ಅವರು ಮಗಳ ವಿವಾಹ ಸಿದ್ಧತೆಯಲ್ಲಿ ತೊಡಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT