ಗುರುವಾರ , ಫೆಬ್ರವರಿ 27, 2020
19 °C

ಕೆಲ್ಸ ಮಾಡೋರು ಇರಿ, ಇಲ್ಲದಿದ್ದರೆ ಒಳ್ಳೆಯ ಜಿಲ್ಲೆ ನೋಡ್ಕಳಿ: ಸಚಿವ ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ತುಮಕೂರು: ‘ಕೆಲ್ಸ ಮಾಡೋರು ಇಲ್ಲಿಯೇ ಇರಿ. ಇಲ್ಲದಿದ್ದರೆ ಒಳ್ಳೆಯ ಜಿಲ್ಲೆ ನೋಡ್ಕಳಿ’ ಹೀಗೆ ಅಧಿಕಾರಿಗಳಿಗೆ ಶನಿವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿ‍ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದರು.

ಪರಿಶೀಲನೆ ವೇಳೆ ಕೆಲವು ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ನೀಡಿದ್ದ ಅಂಕಿ ಅಂಶಗಳು ತಾಳೆ ಆಗದಿದ್ದಾಗ ‘ಸೂಕ್ತ ಮಾಹಿತಿ ತೆಗೆದುಕೊಂಡು ಬರಲು ಹೇಳಿದ್ದರೂ ನೀವು ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರಂಭದಲ್ಲಿಯೇ ಕೃಷಿ ಇಲಾಖೆ ಅಧಿಕಾರಿ ಬೆಳೆ ಸಮೀಕ್ಷೆಯ ಮಾಹಿತಿ ನೀಡಲು ಮುಂದಾದರು. ಆಗ ಸಚಿವರು ಬೆಳೆ ಸಮೀಕ್ಷೆಯನ್ನು ಯಾರಿಂದ ಮಾಡಿಸಿದ್ದೀರಿ. ಒಂದು ಪಂಚಾಯಿತಿಯಲ್ಲಿಯೂ ಗ್ರಾಮ ಲೆಕ್ಕಿಗರು ರೈತರ ಜಮೀನುಗಳ ಬಳಿ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದರು.

ಆಗ ಅಧಿಕಾರಿ, ‘ಖಾಸಗಿಯವರನ್ನು ಬಳಸಿಕೊಂಡು ಬೆಳೆ ಸಮೀಕ್ಷೆ ನಡೆಸಲಾಗಿದೆ’ ಎಂದು ಹೇಳುತ್ತಿರುವಾಗಲೇ ಶಾಸಕರಾದ ಬಿ.ಸಿ.ನಾಗೇಶ್ ಮತ್ತು ಬಿ.ಸತ್ಯನಾರಾಯಣ, ‘ಸಮೀಕ್ಷೆ ಸಮರ್ಪಕವಾಗಿ ಆಗಿಲ್ಲ’ ಎಂದು ತಮ್ಮ ಜಮೀನುಗಳ ನಿದರ್ಶನವನ್ನೇ ಕೊಟ್ಟರು.

ಆಗ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲೆಯಲ್ಲಿ ಶೇ 99ರಷ್ಟು ಬೆಳೆ ಸಮೀಕ್ಷೆ ಆಗಿದೆ. ಜಮೀನುಗಳಲ್ಲಿ ಯಾವ ಬೆಳೆ ಬೆಳೆಯಲಾಗಿದೆ ಎನ್ನುವ ಮಾಹಿತಿ ಗಣಕೀಕೃತವಾಗಿದೆ ಎಂದು ಉತ್ತರಿಸಿದರು.

ಶಾಸಕ ನಾಗೇಶ್, ‘ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಕೇಂದ್ರ ಆರಂಭಿಸಲಾಗಿದೆ. ಆದರೆ ಅದರಲ್ಲಿ ಸಣ್ಣ, ಅತಿ ಸಣ್ಣ ರೈತರು ಎಂದು ನಿಗದಿಗೊಳಿಸಲಾಗಿದೆ. ಐದು ಎಕರೆಯೊಳಗೆ ಪಹಣಿ ಇದ್ದರೆ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ’ ಎಂದು ರಾಗಿ ಖರೀದಿಯ ಕುರಿತು ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ‌

ಆಗ ಅಧಿಕಾರಿಗಳು ನೀತಿ ನಿಯಮಗಳನ್ನು ಹೇಳಲು ಮುಂದಾದಾಗ, ‘ರೀ ಯಾವ ರೂಲ್ಸ್ ರ್ರಿ ಅದು. ಜನರಿಗೆ ಅನುಕೂಲವಾಗದಿದ್ದು. ಮೊದಲು ರೈತರಿಗೆ ಅನುಕೂಲ ಮಾಡಿಕೊಡಿ’ ಎಂದು ಮಾಧುಸ್ವಾಮಿ ಸೂಚಿಸಿದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಪ್ರಕಾಶ್, ತಾಲ್ಲೂಕುವಾರು ಮೇವಿನ ಲಭ್ಯತೆಯ ಕುರಿತು ಮಾಹಿತಿ ನೀಡಿದರು. ಆಗ ‘ಬೆಳೆ, ಮಳೆ, ಮೇವು ಇವೆಲ್ಲವೂ ಒಂದಕ್ಕೊಂದು ಸಂಬಂಧ ಇರುವಂತಹವು. ಆದರೆ ನಮ್ಮ ಜಿಲ್ಲೆಯಲ್ಲಿ ಒಂದಕ್ಕೊಂದು ತಾಳ ಮೇಳವೇ ಇಲ್ಲ. ಚಿಕ್ಕನಾಯಕಹಳ್ಳಿ, ತುರುವೇಕೆರೆ ಸಮೃದ್ಧವಾಗಿದೆ ಎಂದು ವರದಿ ಕೊಟ್ಟಿದ್ದೀರಿ. ಆದರೆ ಇಲ್ಲಿ ಮೇವೇ ಇಲ್ಲ’ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಬರದ ವಿಚಾರವಾಗಿ ಚರ್ಚಿಸಲು ಮುಂದಿನ ತಿಂಗಳು ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

‘ತುಮಕೂರು ಆಸುಪಾಸಿನಲ್ಲಿ ತರಕಾರಿ ಬೆಳೆ ಉತ್ತೇಜನಕ್ಕೆ ತೋಟಗಾರಿಕಾ ಇಲಾಖೆ ಆದ್ಯತೆ ನೀಡಬೇಕು’ ಎಂದರು. ಹನಿನೀರಾವರಿ ಮತ್ತು ಪಾಲಿಹೌಸ್‌ಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಅವರಿಂದ ಮಾಹಿತಿ ಪಡೆದರು.

ಶಿಕ್ಷಕಿಯರ ಗಲಾಟೆ: ತುಮಕೂರು ನಗರದ ಮೆಳೆಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯರೇ ಇದ್ದಾರೆ. ಇವರ ನಡುವೆ ಎರಡು ಗುಂಪುಗಳಾಗಿ ಗಲಾಟೆಗಳು ನಡೆಯುತ್ತಿವೆ. ಸರಿಯಾಗಿ ಪಾಠಗಳನ್ನು ಮಾಡುತ್ತಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಡಿಡಿಪಿಐ ಕಾಮಾಕ್ಷಿ ಈ ಬಗ್ಗೆ ಗಮನವಹಿಸುವುದಾಗಿ ಭರವಸೆ ನೀಡಿದರು.

ಅಕ್ಷರ ದಾಸೋಹ ಅಧಿಕಾರಿ ನೀಡಿದ ತಾಲ್ಲೂಕುವಾರು ಅಂಕಿ ಅಂಶಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಡುಗೆ ಸಿಬ್ಬಂದಿಯ ನಡುವೆ ಹೆಚ್ಚಿನ ವ್ಯತ್ಯಾಸ ಕಂಡು ಬಂದಿತು. 

‘ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 1ರಿಂದ 10ನೇ ತರಗತಿಯವರೆಗೆ 20,109 ಮಕ್ಕಳು ಇದ್ದಾರೆ. ಇವರಿಗೆ 632 ಮಂದಿ ಅಡುಗೆ ಸಿಬ್ಬಂದಿ ಇದ್ದಾರೆ. ತಿಪಟೂರು  ತಾಲ್ಲೂಕಿನಲ್ಲಿ 15,950 ಮಕ್ಕಳಿಗೆ 723 ಅಡುಗೆ ಸಿಬ್ಬಂದಿ ಇದ್ದಾರೆ. ಇದು ಯಾವ ಲೆಕ್ಕಾಚಾರ’ ಎಂದ ಮಾಧುಸ್ವಾಮಿ ಪ್ರತಿ ತಾಲ್ಲೂಕಿನಲ್ಲಿನ ವ್ಯತ್ಯಾಸವನ್ನು ಓದಿ ಹೇಳಿ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯರಿಂದ ಬೇರೆಡೆ ಶಿಫಾರಸು: ಆಯಾ ತಾಲ್ಲೂಕುಗಳಲ್ಲಿ ಆಗುತ್ತಿರುವ ಹೆರಿಗೆ ಮತ್ತು ಮಕ್ಕಳ ಸಾವಿನ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಮಾಹಿತಿ ನೀಡಿದರು.

‘ಜಿಲ್ಲೆಯ ಬಹುತೇಕ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳು ಬಾಗಿಲು ಹಾಕಿವೆಯಾ? ಎಲ್ಲರೂ ಹೆರಿಗೆಗಾಗಿ ತುಮಕೂರು ಆಸ್ಪತ್ರೆಗೆ ಬರುತ್ತಾರೆ. ಸರ್ಕಾರಿ ವೈದ್ಯರು ಯಾವ ಆಸ್ಪತ್ರೆಗಳಿಗೆ ಹೋಗುವಂತೆ ಶಿಫಾರಸು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ತಿಳಿದು ವರದಿ ನೀಡಿ’ ಎಂದು ಮಾಧುಸ್ವಾಮಿ ಸೂಚಿಸಿದರು.

ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ 9 ಜನರು ವೈದ್ಯರಿದ್ದಾರೆ. ಆದರೆ ಯಾವುದೇ ಚಿಕಿತ್ಸೆ ದೊರೆಯುತ್ತಿಲ್ಲ. ಗುಬ್ಬಿ ವೈದ್ಯರು ತುಮಕೂರಿನಲ್ಲಿ ವಾಸಿಸುವರು. ಇಲ್ಲಿಂದ ಅಲ್ಲಿಗೆ ಅಡ್ಡಾಡಿಕೊಂಡು ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾರ್ಚ್ ಅಂತ್ಯದೊಳಗೆ ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಹೇಮಾವತಿ ಎಂಜಿನಿಯರ್‌ಗಳಿಗೆ ಸೂಚಿಸಿದರು. ನರಹಂತಕ ಚಿರತೆ ಸೆರೆ, ಆಯುಷ್ಮಾನ್ ಕಾರ್ಡ್ ವಿತರಣೆ, ಸಮಾಜ ಕಲ್ಯಾಣ ಇಲಾಖೆಯ ಅನುದಾನ ಬಳಕೆ ಹೀಗೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ವೇದಿಕೆಯಲ್ಲಿ ಇದ್ದರು.

ಶಾಸಕ ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಶಾಸಕರಿಗೂ ದಂಡ ಹಾಕಿ!

ಶಾಸಕ ಬಿ.ಜಿ.ಜ್ಯೋತಿಗಣೇಶ್ ಸಭೆಗೆ ಸ್ವಲ್ಪ ತಡವಾಗಿ ಬಂದರು. ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಶಾಸಕರನ್ನು ಸ್ವಾಗತಿಸಿದರು. ಆಗ ಲೋಕಾಭಿರಾಮವಾಗಿ ಮಾಧುಸ್ವಾಮಿ, ತಡವಾಗಿ ಬಂದವರಿಗೆ ಸ್ವಾಗತ ಕೋರುತ್ತೀರಾ ಎಂದು ಮುಗುಳ್ನಕ್ಕರು. ಪಕ್ಕದಲ್ಲಿಯೇ ಇದ್ದ ಶಾಸಕರ ತಂದೆಯೂ ಆದ ಸಂಸದ ಬಸವರಾಜು, ‘ಅವರಿಗೆ ದಂಡವನ್ನೂ ಹಾಕಬೇಕು’ ಎಂದಾಗ ನಗು ಹೆಚ್ಚಿತು.

ಪಿಆರ್‌ಒ ರಾಜಶೇಖರ್!

ನಿರ್ಮಿತಿ ಕೇಂದ್ರದ ಕಾಮಗಾರಿಗಳ ಕುರಿತು ಪ್ರಸ್ತಾಪವಾದಾಗ, ನಿರ್ಮಿತಿ ಕೇಂದ್ರದ ಅಧಿಕಾರಿ ರಾಜಶೇಖರ್ ಮಾಹಿತಿ ನೀಡಲು ಮುಂದಾದರು. ಆಗ ಸಚಿವರು, ಕಳೆದ 10,15 ವರ್ಷದಿಂದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ನಡುವೆ ರಾಜಶೇಖರ್ ಪಿಆರ್‌ಒ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಲೆಳೆದರು.

ಅಕ್ಕಡಿ ಸಾಲು; ಮಾಹಿತಿ ಪಡೆಯಿರಿ

ಈ ಹಿಂದೆ ಹುಚ್ಚೆಳ್ಳು, ಸಾಸುವೆ ಸೇರಿದಂತೆ ಹಲವು ಬೆಳೆಗಳನ್ನು ಅಕ್ಕಡಿ ಸಾಲುಗಳಲ್ಲು ಬೆಳೆಯಲಾಗುತ್ತಿತ್ತು. ಈ ಎಣ್ಣೆ ಕಾಳುಗಳು ರೈತರ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು. ಆದರೆ ಈಗ ರೈತರು ಅಕ್ಕಡಿ ಸಾಲಿನ ಬೆಳೆಗಳನ್ನು ಕೈ ಬಿಟ್ಟಿರುವ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿ. ಅವರಲ್ಲಿ ಅರಿವು ಮುಡಿಸಿ ಎಂದು ಮಾಧುಸ್ವಾಮಿ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬಿಸಿಯೂಟ ಟೆಂಡರ್‌ದಾರರಿಗೆ ದಂಡ

15 ದಿನಗಳಿಂದ ಬಿಸಿಯೂಟದ ಬೇಳೆ ಮತ್ತು ಎಣ್ಣೆ ಪೂರೈಕೆ ಆಗಿಲ್ಲ ಎಂದು ಬಿ.ಸಿ.ನಾಗೇಶ್ ಗಮನ ಸೆಳೆದರು. ಇನ್ನು ಮೂರು ದಿನಗಳಲ್ಲಿ ಪೂರೈಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಆಗ ಸಮರ್ಪಕವಾಗಿ ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ವಸ್ತು ಪೂರೈಸದಿರುವ ಟೆಂಡರ್‌ದಾರರನ್ನು ಕಪ್ಪುಪಟ್ಟಿಗೆ ಸೇರಿಸಿ. ಅವರಿಗೆ ದಂಡ ವಿಧಿಸಿ ಎಂದು ಸಚಿವರು ಮತ್ತು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು