ಶುಕ್ರವಾರ, ನವೆಂಬರ್ 15, 2019
22 °C

ವಾಹನ ಗುದ್ದಿ ನಾಯಿ ಸೊಂಟ ಮುರಿತ | ಮಾನವೀಯತೆ ಮೆರೆದ ಪಶು ಇಲಾಖೆ ಸಿಬ್ಬಂದಿ

Published:
Updated:
Prajavani

ಕೊರಟಗೆರೆ: ಇಲ್ಲಿನ ಮುಖ್ಯರಸ್ತೆಯ ಶಿವಗಂಗಾ ಚಿತ್ರಮಂದಿರದ ಮುಂಭಾಗ ನಾಯಿಯೊಂದು ಎರಡು ದಿನದ ಹಿಂದೆ ಅಪಘಾತಕ್ಕೀಡಾಗಿ ಚೀರುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಸೋಮವಾರ ತಡರಾತ್ರಿ ಬೀದಿ ನಾಯಿ ರಸ್ತೆ ದಾಟುವ ವೇಳೆ ಯಾವುದೋ ವಾಹನ ಗುದ್ದಿದ್ದರಿಂದ ನಾಯಿಯ ಸೊಂಟ ಮುರಿದು ಬಿದ್ದಲ್ಲೆ ಒದ್ದಾಡುತಿತ್ತು. ಸೋಮವಾರ ಸಂಜೆಯಿಂದ ಬುಧವಾರ ಮಧ್ಯಾಹ್ನದವರೆಗೂ ನಾಯಿ ಬಿದ್ದಲ್ಲೆ ಬಿದ್ದು ನೋವಿನಿಂದ ಚೀರಾಡುತ್ತಿತ್ತು. ದೃಶ್ಯ ಕಂಡ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಒಂದು ಕ್ಷಣ ನಿಂತು ನೋಡಿ ‘ಅಯ್ಯೋ ಪಾಪ’ ಮುಂದೆ ನಡೆಯುತ್ತಿದ್ದರು.

ದಾರಿಹೋಕರೊಬ್ಬರು ಬುಧವಾರ ಮಧ್ಯಾಹ್ನ ನಾಯಿ ಸ್ಥಿತಿ ಕಂಡು ಹತ್ತಿರದ ಪುಶು ಇಲಾಖೆಗೆ ಕರೆ ಮಾಡಿ ವೈದ್ಯರಿಗೆ ವಿಷಯ ಮುಟ್ಟಿಸಿದರು. ಕೂಡಲೆ ಕಾರ್ಯೋನ್ಮುಖರಾದ ಪಟ್ಟಣದ ಪಶು ಇಲಾಖೆ ಸಿಬ್ಬಂದಿ ನಾಯಿಯನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಪಾಲನೆ ಮಾಡುತ್ತಿದ್ದಾರೆ.

ಚಿಕಿತ್ಸೆ ನೀಡಿದ ನಂತರ ನಾಯಿ ಸ್ಥಿತಿ ಸುಧಾರಿಸಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶಶಿಕುಮಾರ್ ತಿಳಿಸಿದರು.

ಸಿಬ್ಬಂದಿ ಮಂಜುನಾಥ್, ವೆಂಕಟೇಶ್, ಬಾಲಕೃಷ್ಣ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ನಾಯಿಗೆ ಚಿಕಿತ್ಸೆ ನೀಡಿ ಪಾಲನೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪಶು ಇಲಾಖೆ ಸಿಬ್ಬಂದಿ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)