ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಒಡೆಯುವ ಕೆಲಸ ಮಾಡದಿರಿ: ಡಾ.ಸಿದ್ದಲಿಂಗ ಸ್ವಾಮೀಜಿ ಸಂದೇಶ

ರಂಜಾನ್ ಈದ್ ಸೌಹಾರ್ದ ಸಮಾರಂಭ
Last Updated 17 ಜೂನ್ 2019, 16:08 IST
ಅಕ್ಷರ ಗಾತ್ರ

ತುಮಕೂರು: ಮನುಷ್ಯನ ಹೃದಯ ಒಡೆಯುವಂತಹ ಕೆಲಸವನ್ನು ಯಾರೂ ಮಾಡಬಾರದು. ಯಾಕೆಂದರೆ ಹೃದಯವೇ ಭಗವಂತನ ವಾಸಸ್ಥಾನ ಎಂದು ಸಿದ್ಧಗಂಗಾಮಠದ ಅಧ್ಯಕ್ಷ ಡಾ.ಸಿದ್ದಲಿಂಗ ಸ್ವಾಮೀಜಿ ನುಡಿದರು.

ಜಮಾತೆ ಇಸ್ಲಾಮೀ ಹಿಂದ್ ತುಮಕೂರು ಘಟಕವು ಆಯೋಜಿಸಿದ್ಧ ರಂಜಾನ್ ಈದ್ ಸೌಹಾರ್ದ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಮಹಮ್ಮದ್ ಪೈಗಂಬರ್, ಬಸವಣ್ಣ, ಸಂತರು ಮನುಷ್ಯನಾಗಿ ಬದುಕು ಎಂದು ಹೇಳಿದ್ದಾರೆ. ಆದರೆ, ಈಗ ಉತ್ತಮ ಮನುಷ್ಯನಾಗಿ ಬದುಕುವುದೇ ಕಷ್ಟವಾಗಿದೆ. ಮನುಷ್ಯನಾಗಿ ಬದುಕುವುದೇ ಅತ್ಯಂತ ಮುಖ್ಯವಾದುದು. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ಆಚರಣೆಯಲ್ಲಿ ಮಾನವನಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಪ್ರೀತಿ ಹಂಚುವ, ಸಹಬಾಳ್ವೆ ಮೂಡಿಸುವ ಕಾರ್ಯ ನಡೆಯಬೇಕು. ಯಾವ ಧರ್ಮದಲ್ಲೂ ಹಿಂಸೆ ಹೇಳಿಲ್ಲ. ಶಾಂತಿ ಸಂದೇಶ ಸಾರಿವೆ. ಒಳ್ಳೆಯದನ್ನೇ ಬೇರೆಯವರಿಗೆ ಮಾಡು ಎಂದು ಪ್ರತಿಪಾದಿಸಿವೆ. ನಿನ್ನ ಧರ್ಮವನ್ನೇ ಅನುಸರಿಸು, ಪರಹಿತ ಚಿಂತನೆ ಮಾಡು ಎಂದು ಹೇಳಿವೆ ಎಂದು ನುಡಿದರು.

ಉಪನ್ಯಾಸ ನೀಡಿದ ಜಮಾತೇ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಉಡುಪಿಯ ಅಕ್ಬರ್ ಅಲಿ, ‘ಮನುಷ್ಯನನ್ನು ಸೃಷ್ಟಿಸಿದ ದೇವರಿಗೆ ಆತನಿಗೆ ಒಂದು ಹೆಸರು ಇಡುವುದು ಕಷ್ಟವಾಗಿರಲಿಲ್ಲ. ಆದರೆ, ಅಂತಹ ಕೆಲಸಕ್ಕೆ ಆತ ಕೈ ಹಾಕಲಿಲ್ಲ. ನೀನು ಮನುಷ್ಯ. ಮನುಷ್ಯನಾಗಿಯೇ ಬದುಕು ಎಂದು ಲೋಕಕ್ಕೆ ಕಳುಹಿಸಿದ. ಅದನ್ನು ಅರ್ಥ ಮಾಡಿಕೊಂಡು ಬದುಕಬೇಕು’ ಎಂದರು.

‘ಹಿಂದೂಗಳಿಗೆ ನೋವಾದರೆ ನನಗೆ ನೋವಲ್ಲ ಎಂದು ಮುಸ್ಲಿಮರು ಭಾವಿಸಿದರೆ, ಮುಸ್ಲಿಮನಿಗೆ ನೋವಾದರೆ ಕ್ರಿಶ್ಚಿಯನ್ ತನಗೆ ನೋವಲ್ಲ ಎಂದು ಹೀಗೆ ಒಬ್ಬರಿಗೊಬ್ಬರು ಭಾವಿಸಿದರೆ ಜಗತ್ತಿನಲ್ಲಿಯೇ ಬದುಕುವುದು ಕಷ್ಟ. ಸೌಹಾರ್ದ, ಪ್ರೀತಿ, ವಿಶ್ವಾದಿಂದ ಬದುಕಬೇಕು’ ಎಂದು ನುಡಿದರು.

ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯೂಸೂಫ್ ಕನ್ನಿ ವಹಿಸಿದ್ದರು. ಪತ್ರಕರ್ತ ಎಸ್. ನಾಗಣ್ಣ, ಲೂರ್ದ ಮಾತಾ ಚರ್ಚ್‌ನ ರೆವರೆಂಡ್ ಫಾದರ್ ಜೇಮ್ಸ್ ಪ್ರಭು, ಡಾ.ಲಕ್ಷ್ಮಣದಾಸ್, ಜಮಾಎ ಇಸ್ಲಾಮೀ ಹಿಂದ್ ಸಂಘಟನೆ ತುಮಕೂರು– ಚಿತ್ರದುರ್ಗ ಘಟಕದ ಸಂಚಾಲಕ ಲಈಬುಲ್ಲಾ ಖಾನ್ ಮನ್ಸೂರಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT