ಶುಕ್ರವಾರ, ನವೆಂಬರ್ 15, 2019
22 °C
ನೀನಾಸಂ ನಾಟಕೋತ್ಸವದಲ್ಲಿ ಶಾಸಕ ಜ್ಯೋತಿ ಗಣೇಶ್ ನುಡಿ

ರಂಗಾಯಣ ಸ್ಥಾಪನೆಗೆ ಯತ್ನ

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿ ಬಯಲು ಸೀಮೆ ರಂಗಾಯಣ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಭರವಸೆ ನೀಡಿದರು.

ನಗರದ ಬಾಲಭವನದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ನೀನಾಸಂ ನಾಟಕೋತ್ಸವದಲ್ಲಿ ಮಾತನಾಡಿದರು.

ಹಲವು ರಂಗ ದಿಗ್ಗಜರ ತವರು ತುಮಕೂರು. ಇಲ್ಲಿ ರಂಗಾಯಣದ ಅವಶ್ಯಕತೆ ಇದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಎಂದರು.

ತುಮಕೂರಿನಲ್ಲಿ ನಿರಂತರವಾಗಿ ರಂಗ ಪ್ರಯೋಗಗಳು ನಡೆಯುತ್ತಿರುವುದು ಶ್ಲಾಘನೀಯ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿರುವುದು ವಿಶೇಷ. ಸ್ಮಾರ್ಟ್ ಸಿಟಿಯಾಗಿರುವ ತುಮಕೂರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಶೀಘ್ರವೇ ಸಾಕಾರಗೊಳ್ಳಲಿವೆ ಎಂದರು.

ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ‘ಗಿರೀಶ್ ಕಾರ್ನಾಡ್ ರಚಿಸಿರುವ ವೆಂಕಟರಮಣ ಐತಾಳರು ನಿರ್ದೇಶಿಸಿರುವ ರಾಕ್ಷಸ-ತಂಗಡಿ ನಾಟಕ ವಿನೂತನ ಪ್ರಯೋಗವಾಗಿದೆ. ರಂಗ ತವರೂರಾದ ತುಮಕೂರಿನಲ್ಲಿ ಹೊಸ ಅಲೆಯ ನಾಟಕಗಳು ಹೆಚ್ಚು ಬರಲಿ’ ಎಂದು ಆಶಿಸಿದರು.

ರಂಗಕರ್ಮಿ ಗೋಮಾರದಹಳ್ಳಿ ಮಂಜುನಾಥ್, ಗುಬ್ಬಿ ವೀರಣ್ಣ ಅವರ ತವರೂರಾದ ತುಮಕೂರಿನಲ್ಲಿ ರಂಗಾಯಣ ಸ್ಥಾಪನೆ ಅಗತ್ಯವಾಗಿದೆ. ಬಯಲು ಸೀಮೆ ರಂಗಾಯಣವನ್ನು ಸ್ಥಾಪಿಸುವ ಮೂಲಕ ರಂಗ ಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದರು.

ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ಮುಕುಂದರಾವ್ ಇದ್ದರು. ಬಳಿಕ ‘ರಾಕ್ಷಸ-ತಂಗಡಿ’ ನಾಟಕ ಪ್ರದರ್ಶನಗೊಂಡಿತು.

ಪ್ರತಿಕ್ರಿಯಿಸಿ (+)