ಬುಧವಾರ, ಸೆಪ್ಟೆಂಬರ್ 18, 2019
23 °C
ಸಿಎಂ ಆದೇಶ ಉಲ್ಲಂಘಿಸಿದರೆ ಡಿಸಿ ವಿರುದ್ಧ ಉಗ್ರ ಹೋರಾಟ: ಮಾಜಿ ಶಾಸಕ ಸುರೇಶ್‌ಗೌಡ ಎಚ್ಚರಿಕೆ

ಕುಡಿಯುವ ನೀರಿನ ಕೆರೆಗೆ ಹೇಮಾವತಿ ನೀರು ಕೊಡಿ

Published:
Updated:
Prajavani

ತುಮಕೂರು: ಕಳೆದ 20 ದಿನಗಳಿಂದ ಜಿಲ್ಲೆಗೆ ಹೇಮಾವತಿ ನೀರು ಹರಿಸಲಾಗುತ್ತಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ 9 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೆರೆಗಳಿಗೆ ನೀರು ತುಂಬಿಸಬೇಕು. ಇಲ್ಲದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ಹೇಮಾವತಿ ನೀರನ್ನು ಮೊದಲು ಆದ್ಯತೆಯನುಸಾರ ಕುಡಿಯುವ ನೀರಿನ ಕೆರೆಗಳಿಗೆ ಹರಿಸಬೇಕು ಎಂದು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಆದರೆ, ಜಿಲ್ಲಾಧಿಕಾರಿ ಕುಡಿಯುವ ನೀರಿನ ಕೆರೆಗಳಿಗೆ ಆದ್ಯತೆಯನುಸಾರ ಹರಿಸದೇ ಕಾನೂನು ಬಾಹಿರವಾಗಿ ಇತರೆ ಕೆರೆಗಳನ್ನು ತುಂಬಿಸುತ್ತಿದ್ದಾರೆ ಎಂದು ದೂರಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹ 100 ಕೋಟಿ ವೆಚ್ಚದ 9 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಇವುಗಳಿಗೆ ನೀರು ಹರಿಸದೇ ಕುಣಿಗಲ್ ಕೆರೆಗೆ ನೀರು ಹರಿಸಲಾಗುತ್ತಿದೆ. ಈ ಭಾಗದ ನಾಲೆಯಲ್ಲಿ ನೀರು ಹರಿಯುವುದು ನಿಂತ ಮೇಲೆ ನೀರು ಹರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಬಹುಗ್ರಾಮ ಯೋಜನೆಗಳು: ಹೆಬ್ಬೂರು, ಬೆಳ್ಳಾವಿ, ಅರಿಯೂರು, ನಾಗವಲ್ಲಿ, ಬಳ್ಳಗೆರೆ, ದೊಡ್ಡನಾರವಂಗಲ, ಹೊಳಕಲ್ಲು, ಹೊನ್ನುಡಿಕೆ, ಗೂಳೂರು ಈ 9 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹರಿಸಿದರೆ ಇದರಿಂದ ಸುಮಾರು 194 ಹಳ್ಳಿಗಳ 1.12 ಲಕ್ಷ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಹೆಬ್ಬೂರು-ಗೂಳೂರು ಹೋಬಳಿಗಳ ಏತ ನೀರಾವರಿ ಯೋಜನೆಗೂ ನೀರು ಪಂಪ್ ಮಾಡಿಲ್ಲ. ಕಳೆದ ಬಾರಿಯೂ ಇದೇ ರೀತಿ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಹೋರಾಟ ಮಾಡಲಾಗಿತ್ತು. ಈಗಲೂ ಸಹ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ಹೋರಾಟದ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಎಸ್.ಶಿವಣ್ಣ ಮಾತನಾಡಿ, ‘ಜಲಾಶಯ ಭರ್ತಿಯಾಗಿ ನಾಲೆಗೆ ನೀರು ಹರಿದರೂ ಅದನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲು ಅಧಿಕಾರಿಗಳು ಬೇಜವಾಬ್ದಾರಿ ವಹಿಸುತ್ತಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮುಖಂಡರಾದ ಎಂ.ಬಿ.ನಂದೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ, ಉಪಾಧ್ಯಕ್ಷ ಶಾಂತಕುಮಾರ್, ರಾಮಸ್ವಾಮಿಗೌಡ, ಲಕ್ಷ್ಮೀಶ, ರಾಮಚಂದ್ರಯ್ಯ, ಸಿದ್ದೇಗೌಡ, ರಂಗ ನಾಯ್ಕ ಗೋಷ್ಠಿಯಲ್ಲಿದ್ದರು.

Post Comments (+)