ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಸಮಸ್ಯೆ ಬಗೆಹರಿಸಲು ಮುಂದಾಗದ ಏಜೆನ್ಸಿಗಳು: ನೀರಿನ ಘಟಕ ಬಂದ್‌

Last Updated 29 ನವೆಂಬರ್ 2021, 7:19 IST
ಅಕ್ಷರ ಗಾತ್ರ

ಗುಬ್ಬಿ: ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಸುಮಾರು 138 ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ತಾಲ್ಲೂಕಿನಾದ್ಯಂತ 30ಕ್ಕೂ ಹೆಚ್ಚು ಘಟಕಗಳು ಕೆಟ್ಟು ಹೋಗಿವೆ.

ಸರ್ಕಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿ ಖಾಸಗಿ ಏಜೆನ್ಸಿ ಮೂಲಕ ನೀರಿನ ಘಟಕ ಸ್ಥಾಪಿಸಿತ್ತು. ಘಟಕ ಸ್ಥಾಪನೆಗೆ ಆಸಕ್ತಿ ತೋರಿದ್ದ ಏಜೆನ್ಸಿಯವರು, ಪ್ರಾರಂಭದಲ್ಲಿ ಉತ್ಸಾಹದಿಂದಲೇ ಘಟಕಗಳನ್ನು ನಿರ್ವಹಿಸುತ್ತಿದ್ದರು. ಆನಂತರ ವ್ಯವಸ್ಥಿತವಾಗಿ ನಿರ್ವಹಿಸದ ಕಾರಣ ಅನೇಕ ಘಟಕಗಳು ಕೆಟ್ಟಹೋದವು.

ಆರಂಭದಲ್ಲಿ ಕೆಟ್ಟುಹೋದ ತಕ್ಷಣವೇ ದುರಸ್ತಿ ಮಾಡುತ್ತಿದ್ದ ಏಜೆನ್ಸಿಯವರು ಆನಂತರ ದುರಸ್ತಿಯ ಗೋಜಿಗೆ ಹೋಗಲಿಲ್ಲ. ಶುದ್ಧ ನೀರಿಗಾಗಿ ಜನರು ಪರಿತಪಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಘಟಕಗಳ ದುರಸ್ತಿಯತ್ತ ಗ್ರಾಮ ಪಂಚಾಯಿತಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಅಧಿಕಾರಿಗಳ ಮಾತಿಗೆ ಏಜೆನ್ಸಿಯವರು ಸ್ಪಂದಿಸದ ಕಾರಣ ತಾಲ್ಲೂಕಿನ ಹಲವೆಡೆ ನೀರಿನ ಘಟಕಗಳು ದುರಸ್ತಿಯಾಗದೆ ಉಳಿಯುತ್ತಿವೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ಹಲವೆಡೆ ದೂರು ನೀಡಿದರೂ, ಪ್ರಯೋಜನವಾಗಿಲ್ಲ. ಅಧಿಕಾರಿಗಳು ಏಜೆನ್ಸಿಯವರ ಕಡೆ ಬೊಟ್ಟು ಮಾಡುತ್ತಾರೆ. ಘಟಕಗಳು ದುರಸ್ತಿಯಾಗದೆ ತುಕ್ಕು ಹಿಡಿಯುತ್ತಿವೆ. ಕೆಲವೆಡೆ ಗಿಡ, ಗಂಟಿಗಳು ಬೆಳೆದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಹಲವು ಬಾರಿ ಕೆಡಿಪಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಸಂಬಂಧಿಸಿದ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಈವರೆಗೆ ಪರಿಹಾರ ದೊರೆತಿಲ್ಲ. ಎಲ್ಲ ಕುಡಿಯುವ ನೀರಿನ ಘಟಕಗಳನ್ನು ಪಂಚಾಯತ್‌ ರಾಜ್‌ ಇಲಾಖೆ ವಹಿಸಿಕೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ತಿಳಿಸಿದ್ದರೂ ಕೆಟ್ಟು ನಿಂತಿರುವ ಘಟಕಗಳು ದುರಸ್ತಿಯಾಗದೆ ಪಂಚಾಯತ್‌ ರಾಜ್‌ ಇಲಾಖೆಯವರು ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿಲ್ಲ.

‘ಕೆಟ್ಟು ಹೋಗಿರುವ ಘಟಕಗಳನ್ನು ದುರಸ್ತಿ ಮಾಡಿಸಿ, ನಮಗೆ ಸಂಪೂರ್ಣ ಜವಾಬ್ದಾರಿ ನೀಡಿದರೆ, ನಾವು ವ್ಯವಸ್ಥಿತವಾಗಿ ಘಟಕಗಳನ್ನು ನೋಡಿಕೊಳ್ಳಲು ಕ್ರಮಕೈಗೊಳ್ಳುತ್ತೇವೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT