ಸೋಮವಾರ, ಜುಲೈ 4, 2022
22 °C
ವಾಡಿಕೆಗಿಂತ ಕಡಿಮೆ ಮಳೆ: ಟ್ಯಾಂಕರ್‌ ಮೂಲಕ ನಗರಕ್ಕೆ ಕುಡಿಯುವ ನೀರು ಪೂರೈಕೆ

ರಾಜ್ಯದ ಹಲವೆಡೆ ನೆರೆ ತುಮಕೂರಿನಲ್ಲಿ ಬರ

ಅಭಿಲಾಷ ಬಿ.ಸಿ. Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಜ್ಯದ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಿಟ್ಟು ಬಿಡದಂಡೆ ಮಳೆ ಸುರಿಯುತ್ತಿದೆ. ವರುಣನ ಆರ್ಭಕ್ಕೆ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ತುಮಕೂರು ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಬಹುತೇಕ ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.

ಮುಂಗಾರು ಆರಂಭದಿಂದಲೂ ಕಪ್ಪುಗಟ್ಟುವ ಮೋಡಗಳು ಮಳೆಯಾಗಿ ಸುರಿದು ಧರೆಯ ದಾಹ ತಣಿಸಲೇ ಇಲ್ಲ. ನಾಲ್ಕು ಹನಿ ಚೆಲ್ಲುವ ಮೋಡಗಳು ನಿಲ್ಲದೆ ಓಡುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ.

ಮಳೆಗಾಲ ಮುಗಿಯುವ ಮುನ್ನವೇ ನಗರ ವ್ಯಾಪ್ತಿಯ 35 ವಾರ್ಡ್‌ಗಳಿಗೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಪಾವಗಡ ತಾಲ್ಲೂಕಿನಲ್ಲಿ ನೀರಿನ ಹಾಹಾಕಾರದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಐದು ವರ್ಷಗಳಿಂದ ನಿರಂತರ ಬರಗಾಲ: ಜಿಲ್ಲೆ ಕಳೆದ ಐದು ವರ್ಷಗಳಿಂದ ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 697.30 ಮಿ.ಮೀ. ಜನವರಿಯಿಂದ ಆಗಸ್ಟ್‌ ಮೊದಲ ವಾರದವರೆಗೆ ವಾಡಿಕೆಯಂತೆ 284 ಮಿ.ಮೀಟರ್‌ ಮಳೆಯಾಗಬೇಕಿತ್ತು. ಆದರೆ ಇದುವರೆಗೆ 255 ಮಿ.ಮೀ ಮಾತ್ರ ಮಳೆ ಬಿದ್ದಿದೆ. ಶೇ 10ರಷ್ಟು ಮಳೆ ಕೊರತೆಯಾಗಿದೆ. ಪಾವಗಡ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ 103 ಮಿ.ಮೀ ಮಳೆಯಾಗಿದೆ.

ಬರಿದಾದ ಬುಗುಡನಹಳ್ಳಿ ಕೆರೆ: ನಗರದ ಜನರ ಕುಡಿಯುವ ನೀರು ಪೂರೈಕೆಗೆ ಪ್ರಮುಖ ಜಲಮೂಲವಾದ ಹೇಮಾವತಿ ನಾಲೆ ನೀರನ್ನು ಸಂಗ್ರಹಿಸುವ ಬುಗುಡನಹಳ್ಳಿ ಕೆರೆ ಸಂಪೂರ್ಣವಾಗಿ ಬರಿದಾಗಿದೆ. ಹೇಮಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ನಾಲೆಯ ನೀರನ್ನು ಕೆರೆಗೆ ಹರಿಸುವಂತೆ ಪಾಲಿಕೆ ಮೇಯರ್ ಲಲಿತಾ ರವೀಶ್‌ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಹೇಮಾವತಿ ನೀರು ಹರಿದರೆ ಮಾತ್ರ ನಗರದ ನೀರಿನ ಬವಣೆ ಸ್ವಲ್ಪಮಟ್ಟಿಗೆ ತಗ್ಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಗರಕ್ಕೀಗ ಮೈದಾಳ ಕೆರೆ ನೀರು: ನಗರದ ಮನೆ ಮನೆಗೆ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ.  ಮೈದಾಳ ಕೆರೆ ನೀರು ವಿದ್ಯಾನಗರ ವಾಟರ್‌ ಟ್ಯಾಂಕ್‌ಗೆ ತಲುಪುತ್ತಿದೆ. ಅಲ್ಲಿಂದ ಎಲ್ಲ ವಾರ್ಡ್‌ಗಳಿಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜಾಗುತ್ತಿದೆ. ಪ್ರತಿ ವಾರ್ಡ್‌ಗೂ ಒಂದು ವಾಟರ್ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ.

‘ವಾರ್ಡ್‌ಗಳಲ್ಲಿ ಅಲ್ಲಲ್ಲಿ ವಾಟರ್‌ ಟ್ಯಾಂಕರ್‌ ನಿಲ್ಲಿಸಲಾಗುತ್ತಿದೆ. ಪ್ರತಿ ಮನೆಯವರು ನಿತ್ಯ 10ರಿಂದ 15 ಬಿಂದಿಗೆ ನೀರು ಹಿಡಿದುಕೊಳ್ಳುತ್ತಾರೆ. ಪ್ರತಿ ವಾರ್ಡ್‌ಗೂ ಒಂದೊಂದು ಬೋರ್‌ವೆಲ್‌ ಕೊರೆಸುವ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವಾರದೊಳಗೆ ಕೊಳವೆ ಬಾವಿಗಳು ಸಿದ್ಧವಾಗಲಿವೆ ಎನ್ನುತ್ತಾರೆ’ ಲಲಿತಾ ರವೀಶ್‌.

ಕೃಷಿ ಚಟುವಟಿಕೆ ಕುಂಠಿತ: ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಕುಂಠಿತವಾಗಿದ. ಮುಂಗಾರು ಕೊರತೆಯಿಂದಾಗಿ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಹೆಸರು, ಉದ್ದು, ಅಲಸಂದೆ ಬಿತ್ತನೆ ಪ್ರಮಾಣದಲ್ಲಿ ಕೊರತೆಯಾಗಿತ್ತು. ಬಿತ್ತನೆಯಾದ ಅಲ್ಪಪ್ರಮಾಣದ ಬೆಳೆಯು ನೀರಿನ ಕೊರತೆಯಿಂದ ಒಣಗುತ್ತಿದೆ.

*

ನಾಲ್ಕೈದು ದಿನಗಳಲ್ಲಿ ಮಳೆ ಸಾಧ್ಯತೆ
ಮುಂಗಾರ ಮಳೆ ಹಂಚಿಕೆಯೇ ಮಳೆ ಪ್ರಮಾಣ ವ್ಯತ್ಯಯಕ್ಕೆ ಕಾರಣ. ಈ  ವರ್ಷ ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆ ಇದೆ. ಮುಂಗಾರು ಹಂಚಿಕೆಯ ಭಿನ್ನತೆ ವಾತಾವರಣವನ್ನು ಅವಲಂಬಿಸಿರುತ್ತದೆ. ಕರಾವಳಿಯಿಂದ ಒಳನಾಡಿನತ್ತ ಚಲಿಸುವ ಮೋಡಗಳು ದಕ್ಷಿಣ ಒಳನಾಡು ಪ್ರವೇಶಿಸುವಾಗ ತೇವಾಂಶ ಕಳೆದುಕೊಳ್ಳುತ್ತವೆ ಹಾಗಾಗಿಯೇ ಕಪ್ಪುಗಟ್ಟುವ ಮೋಡಗಳು ಮಳೆ ಸುರಿಸಲಾರವು. ಇದೊಂದು ನೈಸರ್ಗಿಕ ಪ್ರಕ್ರಿಯೆಯಷ್ಟೇ. ಇದಕ್ಕೆ ನಿರ್ದಿಷ್ಟ ಅಂಶ ಕಾರಣವಾಗುತ್ತದೆ ಎಂದು ಹೇಳಲಾಗದು ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಸಿ.ಎನ್‌ ಪ್ರಭು.

ತುಮಕೂರು ಜಿಲ್ಲೆಯಲ್ಲಿ ಕೃಷಿಗೆ ಸಾಕಾಗುವಷ್ಟು ಮಳೆ ಆಗುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು. 

*

ಅಂಕಿ– ಅಂಶ

697 ಮಿ.ಮೀ. ವಾರ್ಷಿಕ ವಾಡಿಕೆ ಮಳೆ

284 ಮಿ.ಮೀ. ಜನವರಿಯಿಂದ ಆಗಸ್ಟ್‌ವರೆಗಿನ ವಾಡಿಕೆ ಮಳೆ

255 ಮಿ.ಮೀ. ವಾಸ್ತವ ಮಳೆ

**

ತಾಲ್ಲೂಕುವಾರು ಮಳೆ ಪ್ರಮಾಣ

ತಾಲ್ಲೂಕು: ವಾಡಿಕೆ ಮಳೆ; ವಾಸ್ತವ ಮಳೆ

ಗುಬ್ಬಿ; 315; 157

ಕುಣಿಗಲ್‌; 349; 150

ತಿಪಟೂರು; 275; 261

ಚಿಕ್ಕನಾಯಕನಹಳ್ಳಿ; 296; 163

ತುರುವೇಕೆರೆ;288; 212

ಮಧುಗಿರಿ; 254; 192

ಶಿರಾ; 221; 192

ಕೊರಟಗೆರೆ; 281; 264

ಪಾವಗಡ; 204; 130

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು