ಜಿಲ್ಲೆಯಲ್ಲಿ ಡ್ರಗ್‌ ಮಾಫಿಯಾ

7
ನಗರದ ಹಲವು ಬಡಾವಣೆಗಳಲ್ಲಿ ಮಾಫಿಯಾ ಸಕ್ರಿಯ, ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿಕೆ

ಜಿಲ್ಲೆಯಲ್ಲಿ ಡ್ರಗ್‌ ಮಾಫಿಯಾ

Published:
Updated:

ತುಮಕೂರು: ಶೈಕ್ಷಣಿಕ ನಗರ ಎಂಬ ಹೆಗ್ಗಳಿಕೆ ಪಡೆದ ನಗರದಲ್ಲಿ ಈಚೆಗೆ ಡ್ರಗ್ ಮಾಫಿಯಾ ಹೆಚ್ಚಾಗಿದ್ದು, ಮಾದಕ ವಸ್ತುಗಳ ಸೇವನೆಗೆ ಯುವಕರು ಹಾಗೂ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇಂತಹ ಅನೈತಿಕ ಚಟುವಟಿಕೆಗಳಿಗೆ ಜಿಲ್ಲೆಯವರೇ ಆದ ಗೃಹ ಸಚಿವರು ಕಡಿವಾಣ ಹಾಕಬೇಕು ಎಂದು ಮಾಜಿ ಶಾಸಕ ಸೊಗಡು ಶಿವಣ್ಣ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀಮಂತರ ಮಕ್ಕಳು ಮಾದಕ ವಸ್ತುಗಳನ್ನು ಖರೀದಿಸುತ್ತಾರೆ. ಬಡವರ ಮಕ್ಕಳು ಪಂಕ್ಚರ್‌, ಸಲ್ಯೂಷನ್, ಶೂ ಪಾಲಿಸ್ ಹಾಗೂ ಸ್ನೇಕ್ ವೆನೋಮ್ ಇಂಜೆಕ್ಟ್‌ಗೆ ಒಳಗಾಗುತ್ತಿದ್ದಾರೆ. ಈಚೆಗೆ ಪ್ರೌಢಶಾಲಾ ವಿದ್ಯಾರ್ಥಿಗಳೂ ಡ್ರಗ್ ಮಾಫಿಯಾಗೆ ಬಲಿಯಾಗುತ್ತಿದ್ದಾರೆ’ ಎಂದು ಹೇಳಿದರು.

‘ಈ ಚಟುವಟಿಕೆಗಳಲ್ಲಿ ತೊಡಗಿದವರು ಹೊರರಾಜ್ಯದಿಂದ ವಿದ್ಯಾಭ್ಯಾಸಕ್ಕೆ ಬಂದಿರುವವರೇ ಹೆಚ್ಚು ಕಂಡು ಬರುತ್ತಿದ್ದಾರೆ. ಅದರಲ್ಲೂ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಸುತ್ತಮುತ್ತ ಹೆಚ್ಚಾಗಿ ನಡೆಯುತ್ತಿದೆ’ ಎಂದರು.

ಡ್ರಗ್ ದುಶ್ಚಟಕ್ಕೆ ಬಲಿಯಾದ ಯುವಕರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಶಾರೀರಿಕವಾಗಿ ದುರ್ಬಲಗೊಳ್ಳುತ್ತಾರೆ. ಹಣಕ್ಕಾಗಿ ಪರದಾಡುತ್ತಿದ್ದಾರೆ. ಕಳ್ಳತನ, ಸಾಲ ಮಾಡುವ ಚಟುವಟಿಕೆಗಳಿಗೆ ಬಲಿಯಾಗಿ ಸಮಾಜ ಘಾತುಕರಾಗುತ್ತಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ನಗರದ ನಿರ್ವಾಣಿ ಲೇಔಟ್, ಎಸ್.ಆರ್. ಕಾಲೋನಿ, ಹನುಮಂತಪುರ, ರಾಷ್ಟ್ರೀಯ ಹೆದ್ದಾರಿ–4, ಬೆಳಗುಂಬ, ಹೊಸ ಬಡಾವಣೆಗಳಲ್ಲಿ ಮಾತ್ರವಲ್ಲದೇ ನಗರದ ಸುತ್ತ ಇರುವ ಬೆಟ್ಟದ ಬುಡಗಳಲ್ಲಿ, ಟಿ.ಪಿ. ಕೈಲಾಸಂ ಬಡಾವಣೆ ಕೊನೆಯ ರಸ್ತೆ , ಗುಬ್ಬಿ ಗೇಟ್ ನಿಂದ ದಾನಾ ಪ್ಯಾಲೇಸ್‌ವರೆಗಿನ ಪ್ರದೇಶಗಳು, ಅಕ್ಕಪಕ್ಕದ ಕೆಲ ಡಾಬಾಗಳು, ಟೀ, ಕಾಫಿ ಅಂಗಡಿಗಳಲ್ಲಿ ಡ್ರಗ್ ಮಾಫಿಯಾ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ವಿವರಿಸಿದರು.

ಈ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ಇದ್ದರೂ ಸಹ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಅವರು ಇನ್ನು ಡ್ರಗ್‌ ಮಾಫಿಯಾದಿಂದ ಯುವಜನರು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಪೊಲೀಸ್‌ರೂ ಸಹ ದಂಧೆಕೋರರ ಜೊತೆ ಶಾಮೀಲಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಾಡೇಪುರ ವಾಸಿಗಳಾದ ಆಶಾ, ಜಾನ್ ಹಾಗೂ ನಗರದಲ್ಲಿದ್ದಾರೆನ್ನಲಾದ ಬಾಂಬೆ ಅಸಿಫ್, ನೈಯೂ ಸೇರಿದಂತೆ ಕೆಲವರನ್ನು ಹಿಡಿದು ತನಿಖೆಗೊಳಪಡಿಸಬೇಕಿತ್ತು.  ಹೀಗೆ ಮಾಡಿದ್ದರೆ ಡ್ರಗ್ ಮಾಫಿಯಾ ಮಾಹಿತಿ ದೊರೆಯುತ್ತಿತ್ತು. ಆದರೆ, ಪೊಲೀಸರು ಇದ್ಯಾವುದನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಗ್ರಾಮದ ಸುತ್ತಮುತ್ತ 72 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಯಿತು. ಆದರೆ, ಇದುವರೆಗೂ ಯಾರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲ. ಮಟ್ಕಾ ದಂಧೆ ಜಾಸ್ತಿಯಾಗಿದೆ ಎಂದರು.

ದನಗಳ ಕಳ್ಳತನ: ಹಲವು ದಿನಗಳಿಂದ ತಾಲ್ಲೂಕಿನ ಕಾಳಿಂಗಯ್ಯನಪಾಳ್ಯ, ಹೊನ್ನುಡಿಕೆ ಚೆಕ್‌ಪೋಸ್ಟ್‌, ನರುಗನಹಳ್ಳಿಯಲ್ಲಿ ದನ ಕರುಗಳ ಕಳ್ಳತನ ನಡೆಯುತ್ತಿದ್ದು, ಕಳ್ಳರು ಜಾನುವಾರುಗಳನ್ನು ಕದ್ದು ಕಸಾಯಿ ಖಾನೆಗಳಿಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಗೃಹ ಸಚಿವರು ಇಂತಹ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಹೇಶ್, ಶಾಂತರಾಜು, ಹರೀಶ್, ರಮೇಶ್ ಗೋಷ್ಠಿಯಲ್ಲಿದ್ದರು.
 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !