ನೀರಿಲ್ಲದೆ ಒಣಗುತ್ತಿವೆ ತೆಂಗಿನ ತೋಟ

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಆರಂಭವಾಗಿ ತಿಂಗಳು ಮುಗಿಯುತ್ತಾ ಬಂದರೂ ಮಳೆ ಬಾರದೆ ರೈತರು ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನೀರಿನ ತೀವ್ರ ಕೊರತೆಯಿಂದ ತೆಂಗು ಬೆಳೆಗಾರರ ಬದುಕು ತಲ್ಲಣಕ್ಕೆ ಒಳಗಾಗಿದೆ.
ವರ್ಷದಿಂದ ವರ್ಷಕ್ಕೆ ಅಂತರ್ಜಲಮಟ್ಟ ಕುಸಿಯುತ್ತಿದ್ದು, ತಗ್ಗು ಪ್ರದೇಶದಲ್ಲಿದ್ದ ತೆಂಗಿಗೂ ಮಳೆಯ ಪ್ರಮಾಣ ಕಡಿಮೆಯಾಗಿ ಕೊಳವೆಬಾವಿ ಕೊರೆಯಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ 5 ವರ್ಷಗಳಲ್ಲಿ ತೀವ್ರ ಮಳೆ ಕೊರತೆಯಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಲಕ್ಷಾಂತರ ತೆಂಗಿನ ಮರಗಳು ನಾಶವಾಗಿವೆ. ಇನ್ನು ತೆಂಗು ಉಳಿಸಿಕೊಳ್ಳಲು ರೈತರು ಕೊಳವೆಬಾವಿ ಕೊರೆಯಿಸಿ ಸೋತು ಹೈರಾಣಾಗಿದ್ದಾರೆ.
ತೆರೆದ ಬಾವಿಗಳಲ್ಲಿ ಕಾಣಿಸುತ್ತಿದ್ದ ನೀರು ಸಾವಿರ ಅಡಿ ಪಾತಾಳ ಕಂಡಿದೆ. ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ಕೊಚ್ಚಿ ಬರುತ್ತಿದ್ದ ಮೆಕ್ಕಲು ಮಣ್ಣು ಮತ್ತು ತಗ್ಗು ಪ್ರದೇಶದಲ್ಲಿ ನಿಂತು ಇಂಗುತ್ತಿದ್ದ ನೀರಿನಿಂದ ಯಾವುದೇ ಖರ್ಚಿಲ್ಲದೆ ಆದಾಯ ಗಳಿಸುತ್ತಿದ್ದ ತೆಂಗು ಬೆಳೆಗಾರರು ಮಣ್ಣು ತರಲು ಹಾಗೂ ಸಾವಿರಾರು ಅಡಿ ಆಳದಿಂದ ನೀರು ತೆಗೆಯಲು ಅಧಿಕ ಖರ್ಚು ಮಾಡುತ್ತಿದ್ದಾರೆ.
ಶಾಶ್ವತ ನೀರಾವರಿ ಪರಿಹಾರ: ‘ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದಿದ್ದು, ಶಾಶ್ವತ ನೀರಾವರಿಯೊಂದೇ ಪರಿಹಾರವಾಗಿದೆ. ಈಗಾಗಲೇ ಹೇಮಾವತಿ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೇಮಾವತಿಯಿಂದ ಬೋರನಕಣಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಗಳು ತುಂಬಿದರೆ ಈ ಭಾಗದ ಅಂತರ್ಜಲಮಟ್ಟ ಏರುತ್ತದೆ. ಆಗ ಮಾತ್ರ ತೆಂಗು ಬೆಳೆಗಾರರ ಉಳಿಸಲು ಸಾಧ್ಯ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.