ತುಮಕೂರು: ಜಿಲ್ಲೆಯ ಐದು ಠಾಣೆಗಳಲ್ಲಿ ‘ಇ–ಬೀಟ್’ಗೆ ಚಾಲನೆ

7
ಬೀಟ್ ಸಿಬ್ಬಂದಿಗಳಲ್ಲಿ ಕರ್ತವ್ಯ ಪ್ರಜ್ಞೆ, ಜನರಿಗೆ ಹೆಚ್ಚಿನ ಸುರಕ್ಷಾ ಭಾವನೆ ಮೂಡಿಸಲು ಸಹಕಾರಿ ವ್ಯವಸ್ಥೆ

ತುಮಕೂರು: ಜಿಲ್ಲೆಯ ಐದು ಠಾಣೆಗಳಲ್ಲಿ ‘ಇ–ಬೀಟ್’ಗೆ ಚಾಲನೆ

Published:
Updated:
Deccan Herald

ತುಮಕೂರು: ಜಿಲ್ಲೆಯ ಐದು ಪೊಲೀಸ್ ಠಾಣೆಗಳಲ್ಲಿ ‘ಇ–ಬೀಟ್’ ವ್ಯವಸ್ಥೆಗೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನೂತನ ಇ–ಬೀಟ್ ವ್ಯವಸ್ಥೆಯ ಕ್ಯೂ ಆರ್‌.ಕೋಡ್ ಸ್ಕ್ಯಾನ್ ಮಾಡುವ ಮೂಲಕ ಚಾಲನೆ ನೀಡಿದರು.

ಐದೂ ಠಾಣೆಗಳ ಬೀಟ್ ಸಿಬ್ಬಂದಿಗೆ ಪೊಲೀಸ್ ಇಲಾಖೆಯ ನೂತನ ಇ–ಬೀಟ್ ವ್ಯವಸ್ಥೆ ಆ್ಯಪ್ ಹೊಂದಿದ ಮೊಬೈಲ್‌ಗಳನ್ನು ಹಸ್ತಾಂತರಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್,’  ತುಮಕೂರು ಜಿಲ್ಲೆಯ ಪೊಲೀಸ್ ವ್ಯವಸ್ಥೆಯು ಇನ್ನಷ್ಟು ಜನಸ್ನೇಹಿ ಆಗಿಸುವ ನಿಟ್ಟಿನಲ್ಲಿ ಕಾಗದ ರಹಿತ ಸರಳ ‘ಇ–ಬೀಟ್’ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

’ಪ್ರಸ್ತುತ ನೂತನ ಬೀಟ್ ವ್ಯವಸ್ಥೆಯನ್ನು ತುಮಕೂರು ನಗರ, ತುಮಕೂರು ಗ್ರಾಮಾಂತರ, ತಿಲಕ್‌ ಪಾರ್ಕ್, ಹೊಸ ಬಡಾವಣೆ ಠಾಣೆ, ಕ್ಯಾತ್ಸಂದ್ರ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸುವ ಉದ್ದೇಶವಿದೆ’ ಎಂದು ತಿಳಿಸಿದರು.

ನೂತನ ಬೀಟ್ ಉದ್ದೇಶಗಳು: ‘ಸಿಬ್ಬಂದಿ ನಿಖರವಾಗಿ ಬೀಟ್ ಕಾರ್ಯನಿರ್ವಹಣೆ ಮಾಡಲು ಸಹಕಾರಿಯಾಗುವುದು, ಜಿ.ಪಿ.ಎಸ್ ತಂತ್ರಜ್ಞಾನ ಹೊಂದಿರುವುದರಿಂದ ಸಿಬ್ಬಂದಿ ಚಲನೆಯ ಸಮಯ, ಸ್ಥಳದ ಡಿಜಿಟಲ್ ದಾಖಲಾತಿ ಲಭ್ಯವಿರುತ್ತದೆ.ಠಾಣಾಧಿಕಾರಿಗಳು, ಮೇಲಧಿಕಾರಿಗಳು, ಕಂಟ್ರೋಲ್ ರೂಂನವರು ಅವಶ್ಯವೆನಿಸಿದಾಗ ಆ್ಯಪ್ ಮೂಲಕ ಪರೀಕ್ಷಿಸಬಹುದು, ಮೇಲ್ವಿಚಾರಣೆಯನ್ನೂ ಮಾಡಬಹುದು’ ಎಂದು ತಿಳಿಸಿದರು.

’ಸಿಬ್ಬಂದಿಯಲ್ಲಿ ಹೆಚ್ಚಿನ ಕರ್ತವ್ಯ ಪ್ರಜ್ಞೆ ಮತ್ತು ಕರ್ತವ್ಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಜನರಿಗೆ ಹೆಚ್ಚಿನ ಸುರಕ್ಞತಾ ಭಾವನೆ ಮೂಡುತ್ತದೆ ಪಾರದರ್ಶಕ ಬೀಟ್ ವ್ಯವಸ್ಥೆ ಜಾರಿಯಾಗಲು ಹಾಗೂ ಸರಳ ಮೇಲ್ವಿಚಾರಣೆಗೆ ಸಹಕಾರಿಯಾಗಿದೆ’ ಎಂದು ಹೇಳಿದರು.

’ಬೀಟ್ ಸಿಬ್ಬಂದಿಗೆ ಇ–ಬೀಟ್ ವ್ಯವಸ್ಥೆ ಯೋಜನೆಯಡಿ ಇಲಾಖೆಯು ಕಲ್ಪಿಸಿದ ಮೊಬೈಲ್‌ನಲ್ಲಿಯೇ ಚಿತ್ರ ಮತ್ತು ವಿಡಿಯೋಗಳನ್ನು ತೆಗೆಯುವ ಸೌಲಭ್ಯಗಳಿದ್ದು, ಗುಮಾನಿ ಆಸಾಮಿಗಳ ವಿಚಾರಣೆ, ಘಟನೆಗಳ ವಾಸ್ತವ ದಾಖಲಾತಿ, ವಾಹನ ತಪಾಸಣೆ ಮತ್ತು ಇನ್ನಿತರ ಅಪರಾಧ ನಿಗ್ರಹ ಕಾರ್ಯಗಳಲ್ಲಿ ಇದು ಯಶಸ್ವಿಯಾಗಿ ನಿರ್ವಹಿಸಲು ಸಹಕಾರಿಯಾಗಲಿದೆ’ ಎಂದು ವಿವರಿಸಿದರು.

‘ಈ ನೂತನ ಇ–ಬೀಟ್ ವ್ಯವಸ್ಥೆಯನ್ನು ಬೆಂಗಳೂರಿನ ‘ರೆಜ್ಲರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌’ ತಾಂತ್ರಿಕ ಸಂಸ್ಥೆಯ ಸಹಕಾರದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತುಮಕೂರು ನಗರ ಡಿಎಸ್ಪಿ ಕೆ.ಎಸ್.ನಾಗರಾಜ್, ಸಿಪಿಐ ಹಾಗೂ ಸಬ್ ಇನ್‌ಸ್ಪೆಕ್ಟರ್‌ಗಳು, ರೆಜ್ಲರ್ ಸಿಸ್ಟಮ್ಸ್‌ನ  ನಿರ್ದೇಶಕ ಅಮಿತ್ ಗೋಷ್ಠಿಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !