ಪ್ರತಿಧ್ವನಿಸಿದ ಗ್ರಾಮ ಪಂಚಾಯಿತಿ ಅವ್ಯವಹಾರ

7
ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಕಾವೇರಿದ ಚರ್ಚೆ; ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸದಸ್ಯರ ಕಿಡಿ

ಪ್ರತಿಧ್ವನಿಸಿದ ಗ್ರಾಮ ಪಂಚಾಯಿತಿ ಅವ್ಯವಹಾರ

Published:
Updated:
Deccan Herald

ತುಮಕೂರು: ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ತೀವ್ರವಾಗಿ ಪ್ರತಿಧ್ವನಿಸಿದವು. ಸಭೆಯ ಆರಂಭದಿಂದ ಮಧ್ಯಾಹ್ನದ ಊಟದ ವೇಳೆಯವರೆಗೂ ಈ ವಿಷಯವನ್ನು ಸದಸ್ಯರು ಪೈಪೋಟಿಯಾಗಿ ಚರ್ಚಿಸಿದರು.

ಸದಸ್ಯ ಮಹಾಲಿಂಗಪ್ಪ, ‘2014–15ರಿಂದ ಇಲ್ಲಿಯವರೆಗೆ ಅವ್ಯವಹಾರ ನಡೆಸಿರುವ ಅಧಿಕಾರಿಗಳು ₹ 32 ಕೋಟಿಯನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಆ ಹಣವನ್ನು ವಾಪಸ್ ಕಟ್ಟಿಸಬೇಕು. ಇದನ್ನು ಅಭಿವೃದ್ಧಿಗೆ ಬಳಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಆಗ ಒಬ್ಬೊಬ್ಬ ಸದಸ್ಯರು ತಮ್ಮ ವ್ಯಾಪ್ತಿಯ ಪಂಚಾಯಿತಿಗಳ ಅವ್ಯವಹಾರಗಳ ಬಗ್ಗೆ ತಿಳಿಸುತ್ತಲೇ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಅನೀಸ್ ಕಣ್ಮಣಿ ಜಾಯ್ ಅವರನ್ನು ಒತ್ತಾಯಿಸಿದರು.

‘ತಿಪಟೂರು ತಾಲ್ಲೂಕು ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2011ರಿಂದಲೇ ಭಾರಿ ಅವ್ಯವಹಾರಗಳು ನಡೆದಿವೆ. ಸಮಗ್ರ ತನಿಖೆ ನಡೆಸುವಂತೆ ಸಿಇಒ ಅವರಿಗೆ ಮನವಿ ಕೊಟ್ಟಿದ್ದೆ. ಆದರೆ ಕೇವಲ ಎರಡು ವರ್ಷದ ಅವಧಿಯ ಕೆಲಸಗಳನ್ನು ಮಾತ್ರ ತನಿಖೆ ಮಾಡಿಸಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಆದರೆ 2011ರಿಂದ ತನಿಖೆ ನಡೆಸಿದರೆ ಮತ್ತಷ್ಟು ಅವ್ಯವಹಾರಗಳು ಬೆಳಕಿಗೆ ಬರುತ್ತವೆ’ ಎಂದು ಸದಸ್ಯ ಸುರೇಶ್ ನುಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

‘ಪಿಡಿಒಗಳಿಗೆ ಜವಾಬ್ದಾರಿ ಇಲ್ಲ. ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಎಸ್‌.ಆರ್.ಶಾಂತಲಾ, ‘ಇಲ್ಲಿ ಬರೀ ಗ್ರಾಮ ಪಂಚಾಯಿತಿ ಚರ್ಚೆ ನಡೆದರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸುವವರು ಯಾರು. ಮೊದಲು ಈ ಬಗ್ಗೆ ಮಾತನಾಡಿ’ ಎಂದರು.

‘ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಹಣ ದುರುಪಯೋಗವಾಗುತ್ತಿದೆ ಎನ್ನುವ ಆರೋಪ ಎಲ್ಲೆಡೆ ಕೇಳುತ್ತಿದೆ. ತಾಲ್ಲೂಕು ಪಂಚಾಯಿತಿ ಇಒ ಮತ್ತು ಎಒ ಅವ್ಯವಹಾರ ತಡೆಯದೆ ಏನು ಮಾಡುತ್ತಿದ್ದಾರೆ. ಇವರು ಸರಿಯಾಗಿ ಕೆಲಸ ಮಾಡಿದರೆ ಹಣ ದುರುಪಯೋಗ ತಡೆಗಟ್ಟಬಹುದು’ ಎಂದು ವೈ.ಎಚ್.ಹುಚ್ಚಯ್ಯ ಹೇಳಿದರು.

ಪಾವಗಡ ತಾಲ್ಲೂಕಿನ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಚನ್ನಮಲ್ಲಪ್ಪ, ‘ನಾವು ರಸ್ತೆ ಕೊಡಿ, ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಕೇಳುವುದಕ್ಕಿಂತ ಮುಖ್ಯವಾಗಿ ಕುಡಿಯಲು ನೀರು ಕೊಡಿ ಎಂದು ಕೇಳುತ್ತಿದ್ದೇವೆ’ ಎಂದರು.

ಆಗ ಸಿಇಒ, ‘ಪಾವಗಡ ಸೇರಿದಂತೆ ನೀರಿನ ಸಮಸ್ಯೆ ಉಂಟಾಗಿರುವ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

7 ತಿಂಗಳ ನಂತರ ಸಭೆ: ಸಭೆಯಲ್ಲಿ ತೀವ್ರವಾದ ಗದ್ದಲ ಉಂಟಾದಾಗ, ಸದಸ್ಯ ಜಿ.ಜೆ.ರಾಜಣ್ಣ, ‘7 ತಿಂಗಳ ನಂತರ ಸಭೆ ಕರೆದಿದ್ದೀರಿ. ಎರಡು ತಿಂಗಳಿಗೆ ಒಂದು ಸಭೆಯನ್ನು ಕರೆಯಬೇಕು. ವಿವಿಧ ಇಲಾಖೆಗಳ ವಿಷಯಗಳನ್ನು ಚರ್ಚಿಸಬೇಕು. ಸಭೆಯಲ್ಲಿ ಯಾವ ವಿಷಯದ ಬಗ್ಗೆ ಪ್ರಮುಖವಾಗಿ ಚರ್ಚಿಸಬೇಕು ಎಂಬುದನ್ನು ಈ ಮೊದಲೇ ಪೂರ್ವಭಾವಿ ಸಭೆ ಕರೆದು ತಿಳಿಸಬೇಕಿತ್ತು. ಆದರೆ ಇದ್ಯಾವುದನ್ನು ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕೆಂಚಮಾರಯ್ಯ, ‘ಮೊದಲು ಅಜೆಂಡಾದಲ್ಲಿರುವ ವಿಷಯಗಳ ಬಗ್ಗೆ ಚರ್ಚೆ ನಡೆಯಲಿ’ ಎಂದು ಆಗ್ರಹಿಸಿದರು.

ಅನುಮೋದನೆ: 2018, 19ನೇ ಸಾಲಿನ ಜಿಲ್ಲಾ ವಲಯ ಕಾರ್ಯಕ್ರಮಗಳಡಿ ವಿವಿಧ ಇಲಾಖೆಗಳಿಗೆ ನಿಗದಿಯಾದ ₹ 456 ಕೋಟಿ ಅನುದಾನಕ್ಕೆ ಅನುಮೋದ ಪಡೆಯಲಾಯಿತು. ಮುಖ್ಯಮಂತ್ರಿ ಗ್ರಾಮೀಣ ರಸ್ತೆಗಳ ನಿರ್ವಹಣೆ ಯೋಜನೆಯಡಿ 449 ಕಾಮಗಾರಿಗಳನ್ನು ನಡೆಸಲು ₹ 7.75 ಕೋಟಿ ಹಾಗೂ ಸಣ್ಣ ನೀರಾವರಿ ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಯೋಜನೆಯಡಿ 96 ಕಾಮಗಾರಿಗಳಿಗೆ ₹ 1.52 ಕೋಟಿ ಅನುಮೋದನೆಯನ್ನು ಪಡೆಯಲಾಯಿತು.

ರಾಮಚಂದ್ರಪ್ಪ, ಪಾಪಣ್ಣ, ಎಚ್‌.ಟಿ.ಕೃಷ್ಣಪ್ಪ, ನಾರಾಯಣಿ ಇತರರು ವಿವಿಧ ವಿಷಯಗಳ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಮಟ್ಟದ ವಿವಿಧ ಇಲಾಖೆಯಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸದಸ್ಯರ ಮೇಲೆ ಅಟ್ರಾಸಿಟಿ: ಚರ್ಚೆ

ಗ್ರಾಮಸಭೆ ನಡೆಸದೆ ಆಶ್ರಯ ಮನೆ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದನ್ನು ಕೇಳಿದ್ದಕ್ಕೆ ನನ್ನ ಮೇಲೆ ಶಾಸಕ ವೀರಭದ್ರಯ್ಯ ಅವರ ಕುಮ್ಮಕ್ಕಿನಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣ (ಅಟ್ರಾಸಿಟಿ) ದಾಖಲಿಸಲಾಗಿದೆ. ಇದನ್ನು ಸಭೆ ಖಂಡಿಸಬೇಕು. ಮುಂದಿನ ದಿನಗಳಲ್ಲಿ ಉಳಿದವರ ಮೇಲೂ ಇಂತಹ ಪ್ರಕರಣಗಳು ಜರುಗಬಹುದು ಎಂದು ಸದಸ್ಯ ಚೌಡಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಚೌಡಪ್ಪ ಅವರನ್ನು ಕೆಲವು ಸದಸ್ಯರು ಬೆಂಬಲಿಸಿದರು.

‘ಕೆ.ಎನ್.ರಾಜಣ್ಣ ಶಾಸಕರಾಗಿದ್ದಾಗ ಬಸವವಸತಿ ಯೋಜನೆಯಡಿ ಬಡವನಹಳ್ಳಿ ಪಂಚಾಯಿತಿಗೆ 47 ಮನೆಗಳು ಮಂಜೂರಾಗಿದ್ದವು. 17 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಚುನಾವಣೆ ಬಂದ ಕಾರಣ ಫಲಾನುಭವಿ ಆಯ್ಕೆ ನಡೆಯಲಿಲ್ಲ. ಶಾಸಕರಾದ ವೀರಭದ್ರಯ್ಯ ಉಳಿದ 30 ಫಲಾನುಭವಿಗಳನ್ನು ಒಂದೇ ಸಮುದಾಯದವರನ್ನು ಆಯ್ಕೆ ಮಾಡಿದ್ದಾರೆ. ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ದೂರಿದರು.

ಆಗ ಸಿಇಒ ಅನೀಸ್ ಕಣ್ಮಣಿ ಜಾಯ್, ‘ಯಾವುದೇ ಕಾರಣಕ್ಕೂ ಗ್ರಾಮಸಭೆಗಳನ್ನು ನಡೆಸದೆ ಫಲಾನುಭವಿಗಳನ್ನು ಆಯ್ಕೆ ಮಾಡಬಾರದು. ಈ ಬಗ್ಗೆ ಪರಿಶೀಲಿಸಿ 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !