ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಶಿಲಾ ಬೆಟ್ಟಕ್ಕೆ ಬೇಕು ರೋಪ್ ವೇ

ಮಳೆ, ಗಾಳಿ, ಬಿಸಿಲು, ನಿಧಿಗಳ್ಳರ ಕೃತ್ಯಗಳಿಗೆ ಶಿಥಿಲಗೊಳ್ಳುತ್ತಿವೆ ಬೆಟ್ಟ
Last Updated 21 ಫೆಬ್ರುವರಿ 2021, 16:26 IST
ಅಕ್ಷರ ಗಾತ್ರ

ಮಧುಗಿರಿ: ವಿಶ್ವದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ ಎಂದು ಕೀರ್ತಿ ಪಡೆದಿರುವ ಇಲ್ಲಿನ ಏಕಶಿಲಾ ಬೆಟ್ಟವು ದೇಶ- ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಬೆಟ್ಟದಲ್ಲಿರುವ ತಾಣಗಳ ರಕ್ಷಣೆಗೆ ಸರ್ಕಾರಗಳು ಸಂಪೂರ್ಣ ನಿರ್ಲಕ್ಷಿಸಿರುವುದರಿಂದ ಬೆಟ್ಟ ಅಭಿವೃದ್ಧಿ ವೇಗ ಕಳೆದುಕೊಂಡು ಸೊರಗುತ್ತಿರುವುದರಿಂದ ಪ್ರವಾಸಿಗರಿಗೆ ನೋವು ತಂದಿದೆ.

ಏಕಾಶಿಲಾ ಬೆಟ್ಟದ ಕೆಳ ಭಾಗದಲ್ಲಿ ನಾಲ್ಕು ಗುಹೆಗಳು, 11 ಸುಂದರವಾದ ಗೋಡೆಗಳು, ಭೀಮನ ದೊಣೆ, ನವಿಲು ದೊಣೆ, ಕುದುರೆ ಲಾಯ, ಶಸ್ತ್ರಾಸ್ತ್ರ ಸಂಗ್ರಹದ ಉಗ್ರಾಣ, ಅರಮನೆ, ಕಲ್ಲಿನ ಕೋಟೆಗಳು, ಗುಮ್ಮಟಗಳು, ಕಣಜಗಳು ಸೇರಿದಂತೆ ಅನೇಕ ತಾಣಗಳಿವೆ. ಈ ಬೆಟ್ಟಕ್ಕೆ ಚಾರಣ ಕೈಗೊಂಡ ಪ್ರವಾಸಿಗರು ತಮ್ಮ ಫೊಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿರುವುದರಿಂದ ಪ್ರವಾಸಿಗರು ದಂಡು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಏಕಾಶಿಲಾ ಬೆಟ್ಟ 3,385 ಅಡಿ ಎತ್ತರ, 232 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. 1,678ರಲ್ಲಿ ಪಾಳೆಗಾರ ರಾಜ ಹಿರೇಗೌಡ ಕೋಟೆಗಳ ನಿರ್ಮಾಣದ ಕೆಲಸಕ್ಕೆ ಕೈ ಹಾಕಿ 1,740ರಲ್ಲಿ ಪೂರ್ಣಗೊಳಿಸಿದ್ದರು. ನಂತರ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಏಕಾಶಿಲಾ ಬೆಟ್ಟದ ಪ್ರವೇಶದ್ವಾರ, ಗುಮ್ಮಟ ಹಾಗೂ ಕೋಟೆಗಳನ್ನು ಪುನರುಜ್ಜೀವನಗೊಳಿಸಿದ್ದರು ಎನ್ನುತ್ತದೆ ಇತಿಹಾಸ.

ರೋಪ್‌ ವೇ ಅಳವಡಿಸಿದ್ದರೆ, ಏಕಾಶಿಲಾ ಬೆಟ್ಟ ವಿಶ್ವ ಮಟ್ಟದಲ್ಲಿ ದೊಡ್ಡ ತಾಣವಾಗುತ್ತಿತ್ತು. ತಾಲ್ಲೂಕಿನಲ್ಲಿ ವ್ಯಾಪಾರ ವಹಿವಾಟು ದುಪ್ಪಟ್ಟವಾಗಿ ಸ್ಥಳೀಯರಿಗೆ ಉದ್ಯೋಗ ದೊರಕುತ್ತಿತ್ತು. ಆದರೆ ಇವೆಲ್ಲವೂ ಶೂನ್ಯವಾಗಿದೆ ಎಂದು ತಾಲ್ಲೂಕಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಟ್ಟದಲ್ಲಿ ಇತಿಹಾಸ ಹೇಳುವ ಕೋಟೆ ಹಾಗೂ ಸುಂದರವಾದ ತಾಣಗಳು ಮಳೆ, ಗಾಳಿ, ಬಿಸಿಲಿಗೆ ಹಾಗೂ ನಿಧಿಗಳ್ಳರ ಕೃತ್ಯಗಳಿಗೆ ಶಿಥಿಲಗೊಳ್ಳುತ್ತಿವೆ. ಅವುಗಳನ್ನು ಸಂರಕ್ಷಣೆ ಮಾಡಬೇಕೆಂದು ಹಲವಾರು ವರ್ಷಗಳಿಂದ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಮೂಲಸೌಕರ್ಯಗಳಿಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ಕುಡಿಯುವ ನೀರು ಹಾಗೂ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

2008ರಲ್ಲಿ ಡಿ.ಸಿ.ಗೌರಿಶಂಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದಾಗ ಅಂದಿನ ಬಿಜೆಪಿ ಸರ್ಕಾರ ಏಕಶಿಲಾ ಬೆಟ್ಟಕ್ಕೆ ರೋಪ್‌ ವೇ ಯೋಜನೆಗೆ ₹10 ಕೋಟಿ ಮಂಜೂರು ಮಾಡಿತ್ತು. ಆದರೆ ದಿನಗಳು ಕಳೆದಂತೆ ಕಾಮಗಾರಿಯ ಸರ್ವೆ ಕಾರ್ಯ ನಡೆಯಲಿಲ್ಲ. 2015-16ರಲ್ಲಿ ಕೆ.ಎನ್.ರಾಜಣ್ಣ ಶಾಸಕರಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿ ಆಯವ್ಯಯದಲ್ಲಿ ₹126 ಕೋಟಿ ಬಿಡುಗಡೆ ಮಾಡಿಸಿದ್ದಲ್ಲದೇ ಸರ್ವೆ ಅಧಿಕಾರಿಗಳೊಂದಿಗೆ ಬೆಟ್ಟಕ್ಕೆ ಚಾರಣ ಕೈಗೊಂಡು ಡ್ರೋನ್ ಮೂಲಕ ಸ್ಥಳಗಳನ್ನು ಪರಿಶೀಲಿಸಿದ್ದರು. ಆದಾಗ್ಯೂ ರೋಪ್‌ ವೇ ಕನಸು ನನಸಾಗಿಲ್ಲ.

ಈ ಬಾರಿಯ ಆಯವ್ಯಯದಲ್ಲಿ ಏಕಾಶಿಲಾ ಬೆಟ್ಟಕ್ಕೆ ರೋಪ್‌ ವೇ ಅಳವಡಿಸಲು ಹಣ ನಿಗದಿ ಮಾಡಿ ಕಾಮಗಾರಿಯ ಪ್ರಾರಂಭಿಸಬೇಕೆಂದು ಜನರು ಒತ್ತಾಯಿಸಿದ್ದಾರೆ. ಶಾಸಕ ಎಂ.ವಿ.ವೀರಭದ್ರಯ್ಯ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ಈ ಯೋಜನೆಗೆ ಚಾಲನೆ ನೀಡಿದರೆ, ತಾಲ್ಲೂಕಿನ ಹಲವಾರು ಮಂದಿಗೆ ಉದ್ಯೋಗ ನೀಡಿದಂತಾಗುತ್ತದೆ ಎನ್ನುವುದು ಸ್ಥಳೀಯರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT