ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ರೈತರ ವಿನೂತನ ಪ್ರತಿಭಟನೆ

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯ
Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ತಿರುಚಿನಾಪಳ್ಳಿ/ತಮಿಳುನಾಡು: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡು ರೈತರು ಶುಕ್ರವಾರ ವಿನೂತನ ರೀತಿಯ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದಾರೆ.

ಇದಕ್ಕಾಗಿ ಅವರು ಶ್ರೀರಂಗಂನ ಬರಿದಾದ ಕಾವೇರಿ ನದಿಯನ್ನು ಆಯ್ದುಕೊಂಡಿದ್ದರು. ನೀರು ಬತ್ತಿ ಹೋಗಿದ್ದ ನದಿಯ ದಡದಲ್ಲಿ 17 ರೈತರು ಕತ್ತಿನ ಕೆಳಗಿನ ದೇಹದ ಭಾಗವನ್ನು ಮರಳಲ್ಲಿ ಹೂತುಕೊಂಡು ಪ್ರತಿಭಟನೆ ನಡೆಸಿದರು.

ಸುಮಾರು ಎರಡು ತಾಸಿನ ನಂತರ ಸ್ಥಳೀಯರ ನೆರವಿನಿಂದ ಪೊಲೀಸರು ರೈತರನ್ನು ಅಲ್ಲಿಂದ ಮೇಲಕ್ಕೆ ಎತ್ತಿ ಕರೆದೊಯ್ದರು. ಎಲ್ಲರ ಗಮನ ಸೆಳೆಯುವ ವಿನೂತನ ಪ್ರತಿಭಟನೆಗಳಿಗೆ ಹೆಸರುವಾಸಿಯಾದ 73 ವರ್ಷದ ಅಯ್ಯಗನ್‌ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಈ ಹಿಂದೆ ಇಲಿ ತಿಂದು ಅಯ್ಯಗನ್‌ ಪ್ರತಿಭಟನೆ ಮಾಡಿದ್ದರು. ಹಾಗೆಯೇ ಮೈಮೇಲೆ ಮಲ ಸುರಿದುಕೊಂಡು ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಕೇಂದ್ರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ಏಪ್ರಿಲ್‌ 9ರ ಗಡುವು ನೀಡಿದರು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
**
ಕನ್ನಡಿಗ ಕುಲಪತಿ: ಭುಗಿಲೆದ್ದ ಆಕ್ರೋಶ
ಅಣ್ಣಾ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಡಾ. ಎಂ.ಕೆ. ಸೂರಪ್ಪ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಿರುವುದು ತಮಿಳುನಾಡಿನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಾವೇರಿ ವಿವಾದ ತೀವ್ರವಾಗಿರುವಾಗ ಕನ್ನಡಿಗರೊಬ್ಬರ ನೇಮಕ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿವೆ. ಆದರೆ, ಈ ವಿವಾದದಿಂದ ಅಂತರ ಕಾಯ್ದುಕೊಂಡಿರುವ ಸರ್ಕಾರ ಇದಕ್ಕೂ ತನಗೂ ಸಂಬಂಧ ಇಲ್ಲ ಎಂದು ಜಾರಿಕೊಂಡಿದೆ. ರಾಜ್ಯಪಾಲರ ನಿರ್ಧಾರವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

‘ಕುಲಪತಿ ಸ್ಥಾನಕ್ಕೆ ತಮಿಳುನಾಡಿನಲ್ಲಿ ಯಾರೂ ಸಿಗಲಿಲ್ಲವೇ? ಕರ್ನಾಟಕದವರೇ ಬೇಕಾಯಿತೇ‘ ಎಂದು ವಿರೋಧ ಪಕ್ಷಗಳಾದ ಡಿಎಂಕೆ, ಎಂಡಿಎಂಕೆ, ಪಿಎಂಕೆ ಮತ್ತು ನಟ ಮತ್ತು ರಾಜಕಾರಣಿ ಕಮಲ್‌ ಹಾಸನ್‌ ಪ್ರಶ್ನಿಸಿದ್ದಾರೆ.

ಸೂರಪ್ಪ ಅವರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಂಡು ತಮಿಳುನಾಡಿನವರನ್ನೇ ಈ ಹುದ್ದೆಗೆ ನೇಮಕ ಮಾಡುವಂತೆ ವಿರೋಧ ಪಕ್ಷಗಳು ಆಗ್ರಹಿಸಿವೆ.
**
ನಾವು ಕಾವೇರಿ ನೀರನ್ನು ಕೇಳಿದರೆ ಕರ್ನಾಟಕದವರು ಕುಲಪತಿಯನ್ನು ಕಳಿಸಿದ್ದಾರೆ.
– ಕಮಲ್‌ ಹಾಸನ್‌ , ನಟ, ರಾಜಕಾರಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT