ಹಾಲಿ ದೋಸ್ತಿಗಳಲ್ಲೇ ಸ್ವತಂತ್ರ ಅಧಿಕಾರ ಹಿಡಿಯಲು ಕಸರತ್ತು

7
ಪಾಲಿಕೆ ಚುನಾವಣೆ ಹಿಂದಿದೆ ಲೋಕಸಭೆ, ವಿಧಾನಸಭಾ ಚುನಾವಣೆ ಗೆಲುವಿನ ತಂತ್ರ

ಹಾಲಿ ದೋಸ್ತಿಗಳಲ್ಲೇ ಸ್ವತಂತ್ರ ಅಧಿಕಾರ ಹಿಡಿಯಲು ಕಸರತ್ತು

Published:
Updated:
Deccan Herald

 ತುಮಕೂರು: ತುಮಕೂರು ನಗರಸಭೆ ಇದ್ದಾಗ ಸತತ 23 ವರ್ಷಗಳಿಂದ ಸ್ವತಂತ್ರವಾಗಿ ಯಾವುದೇ ಪಕ್ಷವು ಅಧಿಕಾರದ ಗದ್ದುಗೆ ಹಿಡಿದಿರಲಿಲ್ಲ. ಬರೀ ಮೈತ್ರಿಯಲ್ಲಿಯೇ ಒಪ್ಪಂದದ ಪ್ರಕಾರ ಅಧಿಕಾರ ಹಂಚಿಕೊಂಡು ಮಾಡಿಕೊಂಡು ಆಡಳಿತ ನಡೆಸಿಕೊಂಡು ಬಂದಿವೆ.

ಈಗ ಮಹಾನಗರ ಪಾಲಿಕೆಯಾಗಿರುವುದರಿಂದ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತಂತ್ರ ರೂಪಿಸುತ್ತಿವೆ. ಪಾಲಿಕೆ ಚುನಾವಣೆಯಲ್ಲಿ ಗೆಲ್ಲುವುದನ್ನಷ್ಟೇ ಅಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ, ಅಕಸ್ಮಾತ್ ಮತ್ತೆ ಮಧ್ಯಂತರವಾಗಿ ವಿಧಾನಸಭೆಗೆ ಚುನಾವಣೆ ನಡೆದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತಹ ಅಭ್ಯರ್ಥಿಗಳಿಗೆ ಅಳೆದು ತೂಗಿ ಟಿಕೆಟ್ ಕೊಡಲು ಮುಂದಾಗಿವೆ.

ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರಷ್ಟೇ ಅಲ್ಲದೇ ಪಕ್ಷದವರಲ್ಲದವರೂ ವಿವಿಧ ಪಕ್ಷಗಳ ಬಾಗಿಲು ತಟ್ಟಿ ಟಿಕೆಟ್ ಕೇಳುತ್ತಿದ್ದಾರೆ. ಟಿಕೆಟ್ ಕೊಟ್ಟರೆ ಗೆದ್ದು ತೋರಿಸುತ್ತೇವೆ. ನಿಮ್ಮ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಪಕ್ಷದ ಜಿಲ್ಲಾ ಮುಖಂಡರನ್ನು ಒಲೈಸುವ ತಂತ್ರಕ್ಕೆ ಮುಂದಾಗಿದ್ದಾರೆ.

ಹಿಂದಿನ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿಯಾಗಿ ಅಧಿಕಾರ ನಡೆಸಿದ್ದು, ಈಗ ಪರಸ್ಪರ ವಿರುದ್ಧವಾಗಿ ಸೆಣಸಾಡಬೇಕಾಗಿದೆ. ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಅಲ್ಲಿ ಗೆಲ್ಲಬಾರದು ಎಂದು ಜೆಡಿಎಸ್‌ನವರು, ಜೆಡಿಎಸ್ ಅಭ್ಯರ್ಥಿ ಗೆಲ್ಲಲೇಬಾರದು ಎಂದು ಕಾಂಗ್ರೆಸ್‌ನವರು ತಮ್ಮದೇ ಆದ ಲೆಕ್ಕಾಚಾರ ಮಾಡಿದ್ದಾರೆ.

ಟಿಕೆಟ್‌ಗೆ ಅರ್ಜಿಗಳ ಮಹಾಪೂರ

ಟಿಕೆಟ್‌ಗಾಗಿ ಮೂರು ಪಕ್ಷಗಳಿಗೆ ಅರ್ಜಿಗಳ ಮಹಾಪೂರ ಹರಿದಿದೆ. ಇದರಲ್ಲಿ ಈ ಹಿಂದೆ ಸತತವಾಗಿ ಗೆದ್ದು ಬಂದವರು, ಪಕ್ಷದ ಸಂಘಟನೆಗೆ ಸಕ್ರಿಯವಾಗಿ ಕೆಲಸ ಮಾಡಿದವರು, ಮಹಿಳೆಯರು ಮತ್ತು ಯುವಕರಲ್ಲಿ ಸೂಕ್ತರಾದವರನ್ನು ಆಯ್ಕೆ ಮಾಡುವುದು ಪಕ್ಷದ ಮುಖಂಡರಿಗೆ ತಲೆ ನೋವಾಗಿದೆ.

ಈಗ ಅರ್ಹರನ್ನು ಗುರುತಿಸಿ ಟಿಕೆಟ್ ಹಂಚಿಕೆ ಮಾಡಿಬಿಡಬಹುದು. ನಂತರ ಅತೃಪ್ತರನ್ನು ಸಮಾಧಾನಪಡಿಸುವ, ಕಾಲೆಳೆಯುವವರನ್ನು ಒಲೈಸುವುದು ಮತ್ತೊಂದು ಸಮಸ್ಯೆ ಆಗುತ್ತದೆ. ಹೀಗಾಗಿ, ನಾಜೂಕಿನಿಂದ ಟಿಕೆಟ್ ಹಂಚಿಕೆ ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

ಯಾರಿಗೂ ಬಿ ಫಾರಂ ಕೊಟ್ಟಿಲ್ಲ

ಮೂರು ಪಕ್ಷದವರು ಇನ್ನೂ ಯಾರಿಗೂ ಬಿ ಫಾರಂ ಕೊಟ್ಟಿಲ್ಲ. ಆ ಪಕ್ಷದವರು ಮೊದಲು ಯಾರಿಗೆ ಕೊಡುತ್ತಾರೆ ನೋಡೋಣ. ನಂತರ ನಾವು ಕೊಡೋಣ ಎಂಬ ಕಾದು ನೋಡುತ್ತಿವೆ.

ಈ ಕಾರಣಕ್ಕಾಗಿಯೇ ಯಾರಿಗೂ ಇನ್ನೂ ಬಿ ಫಾರಂ ಸಿಕ್ಕಿಲ್ಲ. ಬೇಗ  ಕೊಟ್ಟರೆ ನಾಮಪತ್ರ ಸಲ್ಲಿಕೆ ಮಾಡಬಹುದು. ವಾರ್ಡ್‌ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಮತದಾರರಿಗೆ ಮತ ಕೇಳಬಹುದು. ಬಿಫಾರಂ ಸಿಗದೇ, ನಾಮಪತ್ರ ಸಲ್ಲಿಸದೆಯೇ ಖಂಡಿತ ನಾನೇ ಅಭ್ಯರ್ಥಿ. ನನಗೆ ಮತ ಕೊಡಿ ಎಂದು ವಾರ್ಡಿನಲ್ಲಿ ಸುತ್ತಾಡಿದರೆ ಯಾರಿಗೂ ನಂಬಿಕೆ ಬರುವುದಿಲ್ಲ ಎಂದು ಕೆಲ ಆಕಾಂಕ್ಷಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.

ವಾರ್ಡ್‌ವಾರು ಮೀಸಲಾತಿಯೂ ಬದಲಾವಣೆ ಆಗಿರುವುದರಿಂದ ಎಷ್ಟೇ ಪ್ರಭಾವಿಗಳಾಗಿದ್ದರೂ ಮತಕ್ಕಾಗಿ ಸರ್ಕಸ್ ಮಾಡಲೇಬೇಕಾಗಿದೆ ಎನ್ನುತ್ತಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !