ಸ್ಥಳೀಯ ಸಂಸ್ಥೆ ಚುನಾವಣೆ: ತುದಿಗಾಲಲ್ಲಿ ಅಭ್ಯರ್ಥಿಗಳು

7
ಅಧಿಕಾರದ ಗದ್ದುಗೆ ಏರಲು ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದ ಪಕ್ಷಗಳ ಮುಖಂಡರು, ಇಂದು ಹೊರ ಬೀಳುವ ಫಲಿತಾಂಶ

ಸ್ಥಳೀಯ ಸಂಸ್ಥೆ ಚುನಾವಣೆ: ತುದಿಗಾಲಲ್ಲಿ ಅಭ್ಯರ್ಥಿಗಳು

Published:
Updated:
Deccan Herald

ತುಮಕೂರು: ತುಮಕೂರು ಮಹಾನಗರ ಪಾಲಿಕೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಪುರಸಭೆ, ಕೊರಟಗೆರೆ ಹಾಗೂ ಗುಬ್ಬಿ ಪಟ್ಟಣ ಪಂಚಾಯಿತಿ ಚುನಾವಣೆ ಮತ ಎಣಿಕೆ ಸೋಮವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.

ಫಲಿತಾಂಶ ತಿಳಿಯಲು ತುದಿಗಾಲ ಮೇಲೆ ನಿಂತಿರುವ 484 ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.

15 ದಿನಗಳಿಂದ ನಡೆದ ಚುನಾವಣಾ ಕಣದಲ್ಲಿ ವಾರ್ಡುಗಳಲ್ಲಿ ಮತಗಳಿಗಾಗಿ ಗಿರಕಿ ಹೊಡೆದಿದ್ದ ಅಭ್ಯರ್ಥಿಗಳು ಮತದಾನದ ಬಳಿಕ ಎರಡು ದಿನ ವಿಶ್ರಾಂತಿ ಪಡೆದಿದ್ದರು. ಸೋಮವಾರ ನಡೆಯುವ ಮತ ಎಣಿಕೆ ಮತದಾರ ಪ್ರಭು ಯಾರಿಗೆ ಗೆಲುವು ಕೊಡಿಸಿದ್ದಾನೆ ಎನ್ನುವುದು ತಿಳಿಯಲಿದೆ.

ತುಮಕೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಫಲಿತಾಂಶ ತಮ್ಮ ಪರವಾದರೆ ಏನು ಮಾಡಬೇಕು? ವ್ಯತಿರಿಕ್ತವಾದರೆ ಯಾವ ರೀತಿಯ ಹೆಜ್ಜೆ ಇರಿಸಬೇಕು? ಒಂದು ವೇಳೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿ ಉದ್ಭವಿಸಿದರೆ ಯಾರ ಜೊತೆ ಕೈ ಜೋಡಿಸಬೇಕು ಎಂಬುದರ ಬಗ್ಗೆ ಭಾನುವಾರ ಇಡೀ ದಿನ ಚರ್ಚೆಯಲ್ಲಿ ಮುಳುಗಿದ್ದರು.

ಮತದಾನದ ಬಳಿಕ ರಾಜಕೀಯ ಪಕ್ಷಗಳ ರೀತಿ ನೀತಿಗಳು ಒಂದೊಂದು ರೀತಿ ಬದಲಾಗಿದೆ. ಕಳೆದ ಬಾರಿ ಮೈತ್ರಿ ಮಾಡಿಕೊಂಡು 5 ವರ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ನಡೆಸಿತ್ತು. ಈ ಬಾರಿ ಎರಡೂ ‍ಪಕ್ಷಗಳ ಮುಖಂಡರು ತಮ್ಮ ಪಕ್ಷ ಹೆಚ್ಚಿನ ಸ್ಥಾನಗಳಿಸುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡ ಬಿಜೆಪಿಯೂ ‘ಯಾರ ಜೊತೆಗೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಹೆಚ್ಚಿನ ಸ್ಥಾನಗಳು ಬರಲಿವೆ. ವಿಧಾನ ಸಭೆ ಚುನಾವಣೆಯಲ್ಲಿ ಸ್ಪಂದಿಸಿದ ರೀತಿಯಲ್ಲಿಯೇ ಮತದಾರರು ಬೆಂಬಲಿಸಿದ್ದಾರೆ’ ಎನ್ನುವ ಭರವಸೆ ಹೊಂದಿದೆ.

ಎಲ್ಲ ರಾಜಕೀಯ ಪಕ್ಷಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಪೈಪೋಟಿ ನೀಡಿದ ಸಿಪಿಎಂ, ಬಿಎಸ್ಪಿ, ಸಿಪಿಐ, ಪಕ್ಷೇತರ ಅಭ್ಯರ್ಥಿಗಳು ಮತದಾರ ಪ್ರಭು ತಮ್ಮ ಕೈ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ‘ನಾವು ಇಲ್ಲಿಯವರೆಗೂ ನಡೆಸಿದ ಹೋರಾಟಗಳು ನಮ್ಮ ಕೈ ಹಿಡಿಯುತ್ತವೆ’ ಎನ್ನುವ ನಿರೀಕ್ಷೆ ಹೊಂದಿದ್ದಾರೆ.

ಅತಂತ್ರ ಲೆಕ್ಕ?: ರಾಜಕೀಯ ಪಕ್ಷಗಳ ಲೆಕ್ಕಾಚಾರ ಒಂದು ಕಡೆ ಇದ್ದರೆ ನಗರದ ಅಂಗಡಿ, ಹೋಟೆಲ್ ಬಡಾವಣೆಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಹೊಂದಿರುವ ನಾಗರಿಕರು ಈ ಬಾರಿಯೂ ಯಾರಿಗೂ ಸ್ಪಷ್ಟ ಬಹುಮತ ಬರುವುದಿಲ್ಲ. ಅತಂತ್ರ ಖಚಿತ ಎಂದು ನುಡಿಯುತ್ತಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !