ತುಮಕೂರು ಮಹಾನಗರ ಪಾಲಿಕೆಗೆ ಪ್ರಪ್ರಥಮ ಸದಸ್ಯರಾಗಿ ಆಯ್ಕೆಯಾದವರ ಸಂಭ್ರಮ

7
ಮುಗಿಲು ಮುಟ್ಟಿದ್ದ ಅಭ್ಯರ್ಥಿಗಳ ಬೆಂಬಲಿಗರ ವಿಜಯೋತ್ಸವ, ಮೂರು ಕಡೆ ಗೆಲುವು ಸಾಧಿಸಿದ ಪಕ್ಷೇತರರು

ತುಮಕೂರು ಮಹಾನಗರ ಪಾಲಿಕೆಗೆ ಪ್ರಪ್ರಥಮ ಸದಸ್ಯರಾಗಿ ಆಯ್ಕೆಯಾದವರ ಸಂಭ್ರಮ

Published:
Updated:
Deccan Herald

ತುಮಕೂರು: ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31ರಂದು ನಡೆದಿದ್ದ ಚುನಾವಣೆಯ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಬಿಜೆಪಿ 12, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ 10 ಸ್ಥಾನ ಹಾಗೂ ಪಕ್ಷೇತರ 3 ಅಭ್ಯರ್ಥಿಗಳು ವಿಜೇತರಾಗಿದ್ದಾರೆ.

ನಗರದ ಬಿ.ಎಚ್.ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ವಿಜೇತರಾದವರಿಗೆ ಹೆಸರನ್ನು ಚುನಾವಣಾಧಿಕಾರಿ ಘೋಷಿಸಿ ಪ್ರಮಾಣ ಪತ್ರ ವಿತರಿಸಿದರು.

ಕುಣಿದು ಕುಪ್ಪಳಿಸಿದ ಬೆಂಬಲಿಗರು

ಫಲಿತಾಂಶ ಬೆಳಿಗ್ಗೆ 10 ಗಂಟೆ ವೇಳೆಗೆ ಘೋಷಣೆಯಾಗುತ್ತಿದ್ದಂತೆಯೇ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಮತ ಎಣಿಕೆ ಕೇಂದ್ರದ ಮುಂದೆ ಕುಣಿದು ಕುಪ್ಪಳಿಸಿದರು.

ತರಹೇವಾರಿ ಬಣ್ಣ ಎರಚಿ ಸಂಭ್ರಮಿಸಿದರು. ಪಕ್ಷಗಳ ಬಾವುಟ ಹಿಡಿದು ಹರ್ಷ ವ್ಯಕ್ತಪಡಿಸಿದರು. ಎಣಿಕೆ ಕೇಂದ್ರದಿಂದ ಅಭ್ಯರ್ಥಿ ಹೊರ ಬರುತ್ತಿದ್ದಂತೆಯೇ ಬೆಂಬಲಿಗರು ಅವರನ್ನು ಹೆಗಲ ಮೇಲೆ ಹೊತ್ತರು. ಬಳಿಕ ವಾಹನದಲ್ಲಿ ಬಿ.ಎಚ್. ರಸ್ತೆಯ ಉದ್ದಕ್ಕೂ ಮೆರವಣಿಗೆಯಲ್ಲಿ ವಾರ್ಡ್‌ಗೆ ಕರೆದುಕೊಂಡು ಹೋದರು.

ಮತ ಎಣಿಕೆ ವಿಳಂಬ

ಬೆಳಿಗ್ಗೆ 9 ಗಂಟೆ ವೇಳೆಗೆ ಫಲಿತಾಂಶ ಘೋಷಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮತ ಎಣಿಕೆ ಸಿದ್ಧತೆ ಸಂದರ್ಭದಲ್ಲಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಎಣಿಕೆ ವೇಳೆ ಮಾತ್ರ ಸಾಕಷ್ಟು ವಿಳಂಬವಾಯಿತು. ಬೇರೆ ಜಿಲ್ಲೆಗಳಲ್ಲಿ 9 ಗಂಟೆ ವೇಳೆಗೆ ಫಲಿತಾಂಶ ಘೋಷಣೆ ಆಗುತ್ತಿದ್ದರೆ ತುಮಕೂರು ಮತ ಎಣಿಕೆ ಕೇಂದ್ರದಲ್ಲಿ ಆಮೆ ವೇಗದಲ್ಲಿ ಮತ ಎಣಿಕೆ ನಡೆದಿತ್ತು.

ಜಿಲ್ಲಾಧಿಕಾರಿ ಮತ ಎಣಿಕೆ ಕೇಂದ್ರದಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಎಣಿಕೆ ತ್ವರಿತಗೊಳಿಸಲು ಸೂಚಿಸಿದರು. ಬಳಿಕ ಮತ ಎಣಿಕೆ ಚುರುಕು ಪಡೆಯಿತು.
ಅಭ್ಯರ್ಥಿಗಳ ಏಜೆಂಟರ ಕಡೆಯವರು ವೀಕ್ಷಣೆ ವೇಳೆ ಪದೇ ಪದೇ ಪರಿಶೀಲನೆಗೆ ಕೋರಿದ್ದರಿಂದ ಅವರಿಗೆ ಖಾತರಿ ಪಡಿಸಿ ಎಣಿಕೆ ಮಾಡಿದ್ದರಿಂದ ಸ್ವಲ್ಪ ವಿಳಂಬ ಆಯಿತು ಎಂದು ಅಧಿಕಾರಿಗಳು ಹೇಳಿದರು.

ಪಲ್ಟಿ ಹೊಡೆದ ಘಟಾನುಘಟಿಗಳು

ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಮೇಯರ್ ಗೀತಾ ರುದ್ರೇಶ್, ಮಾಜಿ ಉಪಮೇಯರ್‌ಗಳಾದ ಟಿ.ಆರ್.ನಾಗರಾಜ್, ಧನಲಕ್ಷ್ಮಿ ರವಿ, ನಗರಸಭೆ ಮಾಜಿ ಅಧ್ಯಕ್ಷೆ ದೇವಿಕಾ ಸಿದ್ಧಲಿಂಗೇಗೌಡ, ಮಾಜಿ ಸದಸ್ಯರಾದ ಎನ್.ಮಹೇಶ್, ಬಾವಿಕಟ್ಟೆ ನಾಗಣ್ಣ, ಜಯಲಕ್ಷ್ಮಿ ನರಸಿಂಹರಾಜು ಅವರು ಪರಾಭವಗೊಂಡಿದ್ದಾರೆ.

ಹ್ಯಾಟ್ರಿಕ್ ಸಾಧಿಸಿದ ಸೈಯದ್ ನಯಾಜ್ !

8ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಯಾಜ್ ಅವರು ಸತತ ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಎರಡು ನಗರಸಭೆ ಹಾಗೂ 1 ಬಾರಿ ಪಾಲಿಕೆಯಲ್ಲಿ ವಿಜಯಶಾಲಿಗಳಾಗಿದ್ದಾರೆ. ಇದು ನನ್ನ ವಾರ್ಡಿನ ಜನರು ನನ್ನ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ಉದಾಹರಣೆ. ಪಕ್ಷದವರು ಇಟ್ಟ ವಿಶ್ವಾಸ ಉಳಿಸಿಕೊಂಡಿದ್ದೇನೆ ಎಂದು ನಯಾಜ್ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !