ಸರಳ ಬಹುಮತವಿದ್ದರೂ ಭಯದಲ್ಲಿ ಜೆಡಿಎಸ್!

7
ಕುತೂಹಲ ಕೆರಳಿಸಿರುವ ಪಟ್ಟಣ ಪಂಚಾಯಿತಿ ಅಧಿಕಾರ; ಪಕ್ಷೇತರ, ಬಿಜೆಪಿ ಅಭ್ಯರ್ಥಿಯತ್ತ ಎರಡೂ ಪಕ್ಷಗಳ ದೃಷ್ಟಿ

ಸರಳ ಬಹುಮತವಿದ್ದರೂ ಭಯದಲ್ಲಿ ಜೆಡಿಎಸ್!

Published:
Updated:

ಕೊರಟಗೆರೆ: ಬಹುಮತಗಳಿಸಿದ್ದರೂ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆಯೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಕಳೆದ 10 ವರ್ಷಗಳಿಂದಲೂ ಜೆಡಿಎಸ್ ಪಟ್ಟಣ ಪಂಚಾಯಿತಿ ಗದ್ದುಗೆ ಏರುವ ಸಂದರ್ಭ ಬಂದಾಗ ಕೊನೆ ಹಂತದಲ್ಲಿ ಅಧಿಕಾರ ಕೈ ತಪ್ಪುತ್ತಿತ್ತು.

ಈ ಬಾರಿ ಸರಳ ಬಹುಮತ ಪಡೆದಿರುವ ಕಾರಣ ಅಧಿಕಾರ ಹಿಡಯುವ ತವಕದಲ್ಲಿ ಪಕ್ಷ ಇದೆ. ಆದರೆ ಒಂದೆಡೆ ಭಯವೂ ಆ ಪಕ್ಷಕ್ಕೆ ಕಾಡುತ್ತಿದೆ. ಜೆಡಿಎಸ್‌ನಿಂದ 8 ಮಂದಿ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಾಂತರಾಜು ಅವರ ಮತ ಸೇರಿದರೆ ಒಟ್ಟು 9 ಸದಸ್ಯ ಬಲವಾಗುತ್ತದೆ. ಅಧಿಕಾರ ಹಿಡಿಯಲು ಈ ಬಲ ಸಾಕಾಗುತ್ತದೆ. ಆದರೆ ಅದು ಸುಲಭವಲ್ಲ ಎನ್ನುವ ಮಾತು ತಾಲ್ಲೂಕಿನ ರಾಜಕೀಯದಲ್ಲಿ ಹರಿದಾಡುತ್ತಿದೆ.

 ಕಾಂಗ್ರೆಸ್‌ 5 ಸದಸ್ಯರ ಜತೆ ಒಬ್ಬರು ಬಿಜೆಪಿ ಮತ್ತು ‌ಒಬ್ಬರು ಪಕ್ಷೇತರ ಸದಸ್ಯರ ಬೆಂಬಲ ಪಡೆದರೆ 7 ಸದಸ್ಯರ ಬಲವಾಗುತ್ತದೆ. ಇದರೊಂದಿಗೆ ಶಾಸಕ ಡಾ.ಜಿ.ಪರಮೇಶ್ವರ ಹಾಗೂ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರ ಮತ ಸೇರಿದರೆ 9 ಸದಸ್ಯ ಬಲವಾಗುತ್ತದೆ. ಹಾಗಾಗಿ ಅಧಿಕಾರ ಗದ್ದುಗೆಯ ಮೇಲೆ ಕಾಂಗ್ರೆಸ್ ಕೂಡ ಕಣ್ಣಿಟ್ಟಿದೆ. ಮೀಸಲಾತಿ ಪ್ರಕಟಗೊಂಡ ಮರುಗಳಿಗೆಯಿಂದಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಕಳೆದ ಚುನಾವಣೆಯಲ್ಲಿ 14 ಸದಸ್ಯರ ಬಲವಿದ್ದ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 5, ಜೆಡಿಎಸ್ 5, ಬಿಜೆಪಿ 2, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದರು. ಜೆಡಿಎಸ್ ಪಕ್ಷೇತರ ಹಾಗೂ ಒಬ್ಬರು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಗಾದಿ ಹಿಡಿಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡಿತ್ತು. ಆದರೆ ಬೆಳಗಾಗುವಷ್ಟರಲ್ಲಿ ಜೆಡಿಎಸ್‌ನ ಒಬ್ಬರಿಗೆ ಕಾಂಗ್ರೆಸ್ ಗಾಳ ಹಾಕಿತ್ತು. ಪಕ್ಷೇತರರ ಬೆಂಬಲ ಪಡೆದು ಜೆಡಿಎಸ್‌ ಸದಸ್ಯನನ್ನೆ ಅಧ್ಯಕ್ಷನ್ನಾಗಿ ಮಾಡಲಾಗಿತ್ತು. ಪಕ್ಷೇತರ ಸದಸ್ಯ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಆ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.

ಈ ಬಾರಿಯೂ ಕಾಂಗ್ರೆಸ್ ಜೆಡಿಎಸ್ ಸದಸ್ಯರಿಗೆ ಗಾಳ ಹಾಕುತ್ತದೆಯೇ ಎಂಬ ಭಯ ಜೆಡಿಎಸ್‌ಗೆ ಇದೆ. ಆದ ಕಾರಣ ಫಲಿತಾಂಶ ಬಂದ ತಕ್ಷಣವೇ ವಿಪ್ ಜಾರಿ ಮಾಡಿದೆ. ವಿಪ್ ಉಲ್ಲಂಘಿಸಿ ಜೆಡಿಎಸ್ ಸದಸ್ಯರು ಪಕ್ಷ ಬದಲಾವಣೆ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಅಧಿಕಾರ ಹಿಡಿಯಬಹುದು.

ಆದರೆ ಕಾನೂನು ಕ್ರಮಗಳಿಗೆ ಹೆದರುವ ಸದಸ್ಯರು ವಿಪ್ ಉಲ್ಲಂಘಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಬಹಳಷ್ಟು ಬಾರಿ ಇಂತಹ ಸಣ್ಣ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಯಾದರೂ ಯಾವುದೇ ಪಕ್ಷ ತನ್ನ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಇದು ತಾಲ್ಲೂಕು ರಾಜಕೀಯವನ್ನು ನಿದ್ದೆ ಗೆಡಿಸಿದೆ. ಜೆಡಿಎಸ್‌ಗೆ ಆತಂಕ ಕಾಡುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !