ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳುವುದೇ ಬಿಜೆಪಿ ಬಂಡವಾಳ: ಬಿ.ಎನ್.ಚಂದ್ರಪ್ಪ ವಾಗ್ದಾಳಿ

Last Updated 24 ಏಪ್ರಿಲ್ 2019, 10:02 IST
ಅಕ್ಷರ ಗಾತ್ರ

ಪಾವಗಡ: ಬಿಜೆಪಿ ಪಕ್ಷಕ್ಕೆ ಸುಳ್ಳೇ ಬಂಡವಾಳ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವುದೇ ಅವರ ಸಾಧನೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ₹ 72 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದರು. ಆದರೆ, ಬಿಜೆಪಿ ಸರ್ಕಾರ ಬಿಡಿಗಾಸನ್ನೂ ಮನ್ನಾ ಮಾಡಲಿಲ್ಲ. ಉದ್ಯೋಗ ಸೃಷ್ಟಿಸುವುದಾಗಿ ಆಶ್ವಾಸನೆ ನೀಡಿದರು. ಈ ಬಗ್ಗೆ ಪ್ರಶ್ನಿಸಿದ ಯುವಕರಿಗೆ ಪಕೋಡ ಮಾರುವಂತೆ ತಿಳಿಸುತ್ತಿದ್ದಾರೆ. ಸೈನಿಕರು ಮಾಡಿರುವ ದಾಳಿಯನ್ನು ತಮ್ಮ ಸಾಧನೆ ಎಂಬಂತೆ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ದೂರಿದರು.

‘ಸಂವಿಧಾನ ಬದಲಿಸುವ ಹುನ್ನಾರ ನಡೆಸಲಾಗುತ್ತಿದೆ. ಬದಲಿಸುವವರು ಬೇಕೋ, ಸಂವಿಧಾನ ರಕ್ಷಿಸುವವರು ಬೇಕೋ ಎಂಬ ನಿರ್ಧಾರ ಜನತೆ ತೆಗೆದುಕೊಳ್ಳಬೇಕಿದೆ. ಬಿಜೆಪಿಯವರದ್ದು ಒಡೆಯುವ, ಬಿರುಕು ಮೂಡಿಸುವ ಕೆಲಸ. ಆನೆಕಲ್ಲಿನಿಂದ ಇಲ್ಲಿ ಬಂದು ದಲಿತರ ನಡುವೆ ಬಿರುಕು ಮೂಡಿಸುತ್ತಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಹೆಸರು ಹೇಳದೆ ದೂರಿದರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ’ಅಧಿಕಾರಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಮ್ಮೆ ಜೈಲಿಗೆ ಹೋಗಲು ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಬೇಕೆ? ಅವರು ತಿರುಕನ ಕನಸು ಕಾಣುತ್ತಿದ್ದಾರೆ. ಅವರ ಜೀವನದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಿಲ್ಲ’ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಸೋಮ್ಲಾನಾಯ್ಕ, ಉಗ್ರ ನರಸಿಂಹಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಮಲ್ಲಯ್ಯ, ಪಾಪಣ್ಣ, ಎಚ್.ವಿ.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಕೆಪಿಸಿಸಿ ಸದಸ್ಯ ಕೋಟೆ ಪ್ರಭಾಕರ್, ಮುಖಂಡ ಫಜ್ಲುಸಾಬ್, ಶಂಕರರೆಡ್ಡಿ, ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ನರಸಿಂಹಯ್ಯ, ವೆಂಕಟರಾಮರೆಡ್ಡಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಸದಸ್ಯ ರಾಜೇಶ್, ಸುಧಾಕರರೆಡ್ಡಿ, ರಿಜ್ವಾನ್, ಎಂ.ಎಸ್.ವಿಶ್ವನಾಥ್, ಎಪಿಎಂಸಿ ಅಧ್ಯಕ್ಷ ಗೋಪಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT