ರೈತರಿಗೆ ಏನು ಅನುಕೂಲ ಮಾಡಿದ್ದೀರಿ

ಬುಧವಾರ, ಏಪ್ರಿಲ್ 24, 2019
28 °C
ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಪ್ರಶ್ನೆ

ರೈತರಿಗೆ ಏನು ಅನುಕೂಲ ಮಾಡಿದ್ದೀರಿ

Published:
Updated:
Prajavani

ಕೋರ: ದೇಶದಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬಾರದು. ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬಾರದು ಎಂಬ ಉದ್ದೇಶಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯಾಗಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ವಾಗ್ದಾಳಿ ನಡೆಸಿದರು.

ಹೋಬಳಿ ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

‘ರೈತರ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿ ಮುಂದಿನ ಐದು ವರ್ಷಗಳಲ್ಲಿ ರೈತನ ಬದುಕು ಹಸನಾಗಿಸುತ್ತೇನೆ ಎಂದು 56 ಇಂಚಿನ ಎದೆ ಉಬ್ಬಿಸಿ ಹೇಳಿದ್ದರು. ರೈತರಿಗೆ ಇಲ್ಲಿಯವರೆಗೆ ಏನು ಅನುಕೂಲ ಮಾಡಿದ್ದೀರ’ ಎಂದು ಖಾರವಾಗಿ ಪ್ರಶ್ನಿಸಿದರು.

ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ರೈತರ ಸಾಲಮನ್ನಾ ಘೋಷಣೆ ಮಾಡಿದೆ. ಆದರೆ, ಇಲ್ಲಿಯವರೆಗೂ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಮಧ್ಯಪ್ರದೇಶದಲ್ಲಿ ₹ 36 ಸಾವಿರ ಕೋಟಿ, ಉತ್ತರಪ್ರದೇಶದಲ್ಲಿ ₹ 38 ಸಾವಿರ ಕೋಟಿ, ಗುಜರಾತ್‌ನಲ್ಲಿ ₹ 18ಸಾವಿರ ಕೋಟಿ, ಛತ್ತೀಸ್‌ಘಡದಲ್ಲಿ ₹ 6 ಸಾವಿರ ಕೋಟಿ ರೈತರ ಸಾಲಮನ್ನಾ ಹಣ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ₹ 46 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ನಮ್ಮದು ರೈತ ಪರ ಕಾಳಜಿ ಸರ್ಕಾರ. ನರೇಂದ್ರ ಮೋದಿಗೆ ಜನರ ಹಾಗೂ ರೈತರ ಬಳಿಗೆ ತೆರಳಿ ಮತ ಕೇಳಲು ಯಾವುದೇ ನೈತಿಕ ಹಕ್ಕಿಲ್ಲ‌ ಎಂದು ಜರಿದರು.

ಮಾಜಿ ಶಾಸಕ ಸುಧಾಕರ ಲಾಲ್ ಮಾತನಾಡಿ, ಭಾರತಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನ ಬದಲಾವಣೆ ಮಾಡಲು ಮುಂದಾಗುವ ಬಿಜೆಪಿ ಪಕ್ಷಕ್ಕೆ ಮತ ನೀಡಬೇಡಿ. ನಮ್ಮ ಹಕ್ಕು, ಕರ್ತವ್ಯ ಕಸಿಯುವ ಪಕ್ಷ ಹಾಗೂ ನಾಯಕರು ಬೇಡ. ನಾನು ಗೆದ್ದರೆ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ದೇವೇಗೌಡರು ಭರವಸೆ ನೀಡಿದ್ದಾರೆ. ಇಡೀ ದೇಶವೇ ತುಮಕೂರಿನ ಕಡೆ ನೋಡುತ್ತಿದೆ, ಒಮ್ಮತದಿಂದ ಗೆಲುವಿಗೆ ಶ್ರಮಿಸೋಣ ಎಂದರು.

ಸಭೆಯಲ್ಲಿ ಮಾಜಿ ಶಾಸಕ ನಾರಾಯಣ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಿ ನರಸಿಂಹೇಗೌಡ, ಶಿವರಾಮಯ್ಯ, ನಾರಾಯಣ ಮೂರ್ತಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಕಾಂಗ್ರೆಸ್ ಮುಖಂಡರಾದ ಗಂಗಾಧರಪ್ಪ, ನಜೀರ್ ಅಹಮದ್, ಯದುನಂದಕುಮಾರ್, ಗೊಲ್ಲಳಪ್ಪ, ಕೆಸ್ತೂರು ಕಿರಣ್, ಜೆಡಿಎಸ್ ಮುಖಂಡರಾದ ಮಹಾಲಿಂಗಪ್ಪ, ನರಸಿಂಹರಾಜು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !