ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಛಿದ್ರಗೊಂಡ ಆನೆ ಕಾರಿಡಾರ್

ಎರಡು ವರ್ಷಗಳ ನಂತರ ಜಿಲ್ಲೆಯಲ್ಲಿ ಆನೆ ದಾಳಿಗೆ ಬಲಿ
Last Updated 11 ಮಾರ್ಚ್ 2020, 14:15 IST
ಅಕ್ಷರ ಗಾತ್ರ

ತುಮಕೂರು: ಕೋಳಿಹಳ್ಳಿಯ ವೆಂಕಟಾಚಲಮೂರ್ತಿ ಆನೆ ದಾಳಿಗೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷದ ಮತ್ತೊಂದು ಅಧ್ಯಾಯ ಆರಂಭವಾಗಿದೆ. ಎರಡು ವರ್ಷಗಳ ನಂತರ ಆನೆ ದಾಳಿಗೆ ಜಿಲ್ಲೆಯಲ್ಲಿ ನೆತ್ತರು ಚೆಲ್ಲಿದೆ.

ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಆನೆ ಕಾರಿಡಾರ್ ಪ್ರಮುಖವಾಗಿ ಸಾಗುತ್ತದೆ. ಜಿಲ್ಲೆಯಲ್ಲಿ ಆನೆಗಳ ಹೆಜ್ಜೆ ಗುರುತುಗಳನ್ನು ನೋಡಿದರೆ, ಆನೆ ಕಾರಿಡಾರ್‌ ಮೇಲೆ ಮನುಷ್ಯನ ಹಸ್ತಕ್ಷೇಪ ಎದ್ದು ಕಾಣುತ್ತದೆ. ಒಂದು ಕಾಲದಲ್ಲಿ ತುಮಕೂರು ಆನೆಗಳಿಗೆ ವಿಹಾರದ ನೆಲೆ ಎನ್ನುವಂತೆ ಇತ್ತು.

2017ರಲ್ಲಿ ತುಮಕೂರು ತಾಲ್ಲೂಕಿನ ಜೋಲುಮಾರನಹಳ್ಳಿಯಲ್ಲಿ ಘಟಿಸಿದ ಆನೆ ದಾಳಿಗೆ ಚನ್ನಬಸವಯ್ಯ, ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯಲ್ಲಿ ಮೂಡ್ಲಗಿರಿಯಪ್ಪ, ನಾಗರಾಜ್ ಮೃತಪಟ್ಟಿದ್ದರು. 2018ರಲ್ಲಿ ಗುಬ್ಬಿ ತಾಲ್ಲೂಕಿನ ಉದ್ದೆಹೊಸಹಳ್ಳಿ ರಂಗಯ್ಯ, ಸೋರೆಕಾಯಿಪೇಟೆ ನಾಗರಾಜ್ ಬಲಿಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಆನೆ ದಾಳಿಗೆ ಸಿಲುಕಿ ಸತ್ತ ಪ್ರಕರಣಗಳು ಜಿಲ್ಲೆಯಲ್ಲಿ ಘಟಿಸಿರಲಿಲ್ಲ.

2012ರಿಂದ 2015ರ ವರೆಗೂ ಜಿಲ್ಲೆಗೆ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿವೆ. ನಂತರದ ದಿನಗಳಲ್ಲಿ ‘ಆನೆ ಕಾರಿಡಾರ್‌’ನಲ್ಲಿ ಹಸ್ತಕ್ಷೇಪಗಳು ಹೆಚ್ಚಿದಂತೆ ಈ ಮಾರ್ಗದಲ್ಲಿ ಆನೆಗಳ ಸಂಚಾರ ತಗ್ಗಿತ್ತು.

ಒಂದು ಮರಿಯಾನೆ ತನ್ನ ಬಳಗದ ಜತೆ ಒಮ್ಮೆ ಸಂಚರಿಸಿದರೆ ಆ ಹಾದಿಯ ನೆನಪು ಸಾಯುವವರೆಗೂ ಅದಕ್ಕೆ ಇರುತ್ತದೆ. ಈ ಹಿಂದೆ ಜಿಲ್ಲೆಗೆ ಆನೆಗಳು ಪ್ರವೇಶಿಸುತ್ತಿದ್ದ ಹಾದಿ ಈಗ ಬಯಲಾಗಿದೆ. ಆನೆಗಳು ನಡೆಯುವ ಹಾದಿಯಲ್ಲಿ ಹಸ್ತಕ್ಷೇಪಗಳು ತೀವ್ರವಾಗಿಯೇ ಹೆಚ್ಚಾಗಿವೆ ಎನ್ನುತ್ತಾರೆ ವನ್ಯಜೀವಿ ತಜ್ಞರು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು.

ಆನೆ ಕಾರಿಡಾರ್‌ನಲ್ಲಿದ್ದ ನೀರು ಹರಿಯುವ ಕಾಲುವೆಗಳು ಮರಳು ಗಣಿಗಾರಿಕೆ, ಒತ್ತುವರಿಗೆ ಬಲಿಯಾಗಿವೆ. ಹೆದ್ದಾರಿಯ ಆಸುಪಾಸಿನ ಕಾಲುವೆಗಳು ಕಾಮಗಾರಿಯ ಕಾರಣಕ್ಕೆ ಬಂದ್ ಆಗಿವೆ. ಹೀಗೆ ನಾನಾ ಕಾರಣಗಳಿಂದ ನೈಸರ್ಗಿಕವಾಗಿದ್ದ ಆನೆಪಥದಲ್ಲಿ ಹೆಚ್ಚಿನ ಬದಲಾವಣೆಗಳಾಗಿವೆ.

ಆನೆ ಪ್ರವೇಶ ಮಾರ್ಗ: ನೆಲಮಂಗಲ, ಶಿವಗಂಗೆ ಮೂಲಕ ಜಿಲ್ಲೆಗೆ ಆನೆಗಳು ಪ್ರವೇಶಿಸುವ ಪಥ ಇದೆ. ದೇವರಹೊಸಹಳ್ಳಿ, ಸಂಗಾಪುರ, ಹರಳೂರು, ಬೈರಸಂದ್ರ, ಜೋಲುಮಾರನಹಳ್ಳಿ, ಕೌತಮಾರನಹಳ್ಳಿ, ಕಿತ್ತಾಗನಹಳ್ಳಿ, ಹೊಳಕಲ್ಲು, ಕೆ.ಪಾಲಸಂದ್ರ, ಗೂಳರವೆ, ಗೂಳೂರು, ಹೆತ್ತೇನಹಳ್ಳಿ, ಕಂಬತ್ತನಹಳ್ಳಿ, ಗಂಗಸಂದ್ರ, ಲಕ್ಷ್ಮಣಸಂದ್ರ, ಭೀಮಸಂದ್ರ, ಕುಂಕುಮನಹಳ್ಳಿ, ಮಲ್ಲಸಂದ್ರ, ಪೆರಮನಹಳ್ಳಿ, ಬಳ್ಳಾಪುರ, ಅದಲಾಪುರದ ಮೂಲಕ ಗುಬ್ಬಿ ತಾಲ್ಲೂಕಿಗೆ ಈ ಹಾದಿ ಸಾಗುತ್ತದೆ. ಅಡಗೂರು, ಗುಬ್ಬಿ, ಎಂ.ಎಚ್.ಪಟ್ಟಣ, ಕಾಗ್ಗೆರೆ, ಮಂಚಲದೊರೆ, ಬುಕ್ಕಾಪಟ್ಟಣ, ಗಂಟೇನಹಳ್ಳಿ, ಬೆಳ್ಳಾರ, ಬೋರನಕಣಿವೆ, ಗಾಯತ್ರಿ ಜಲಾಶಯದ ಮೂಲಕ ಆನೆ ಕಾರಿಡಾರ್ ಚಿತ್ರದುರ್ಗ ಜಿಲ್ಲೆ ಸೇರುತ್ತದೆ.

ಮತ್ತೊಂದು ಕಡೆ ಕುಣಿಗಲ್ ತಾಲ್ಲೂಕಿನ ಬೆಸ್ತರಪಾಳ್ಯದಲ್ಲಿ ಆನೆ ಹೆಜ್ಜೆಗುರುತುಗಳನ್ನು ಕಾಣಬಹುದು. ಪಾಳ್ಯದ ಮೂಲಕ ಜಿಲ್ಲೆ ಪ್ರವೇಶಿ, ಅಂದಲಕುಪ್ಪೆ, ಮಾರ್ಕೋನಹಳ್ಳಿ, ತುರುವೇಕೆರೆ, ಸಂಪಿಗೆ ಮೂಲಕ ಗುಬ್ಬಿಯನ್ನು ಕೂಡುತ್ತವೆ. ಹೊಸದುರ್ಗ ಮತ್ತು ಹಿರಿಯೂರು ಕಡೆಯಿಂದ ಜಿಲ್ಲೆ ಪ್ರವೇಶಿಸಿಸುವ ಆನೆಗಳಿಗೂ ಇದೇ ಹಾದಿ. ಹಿರಿಯೂರು, ಬುಕ್ಕಾಪಟ್ಟಣ, ಶಿರಾ, ಲಕ್ಷ್ಮಿಸಾಗರದ ಮೂಲಕವೂ ಜಿಲ್ಲೆ ಪ್ರವೇಶಿಸುತ್ತವೆ.

ಈಗ ಆನೆಗಳು ಜಿಲ್ಲೆ ಪ್ರವೇಶಿಸಿದ ತಕ್ಷಣವೇ ಅವುಗಳ ಮೇಲೆ ಅರಣ್ಯ ಇಲಾಖೆ ನಿಗಾ ಇಡುತ್ತದೆ. ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸುತ್ತದೆ. ಆದರೆ

2012ರ ನವೆಂಬರ್‌ 7ರಿಂದ 20ರ ಸಮಯದಲ್ಲಿ ದೇವರಹೊಸಹಳ್ಳಿ, ಮಲ್ಲಸಂದ್ರ, ಹೊಳಕಲ್ಲು ಕೆರೆಗಳಲ್ಲಿ ಆನೆಗಳು ಸ್ವಚ್ಛಂದವಾಗಿ ವಿಹರಿಸಿದ್ದವು. ನಂತರ 2013–15ನೇ ಸಾಲಿನಲ್ಲಿ ತುಮಕೂರು ತಾಲ್ಲೂಕಿನ ಕೆರೆಗಳನ್ನು ವಿಹಾರದ ತಾಣಗಳು ಎನ್ನುವ ರೀತಿಯಲ್ಲಿ ಆನೆಗಳು ಬಳಸಿವೆ. ಈ ಅವಧಿಯಲ್ಲಿ ಜನರ ಮೇಲೆ ದಾಳಿ ನಡೆಸಿದ್ದು ಕಡಿಮೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಇನ್ನೂ ಅಚ್ಚರಿ ಎಂದರೆ 2014ರ ಫೆಬ್ರುವರಿ 2ರಂದು ಬೆಳಿಗ್ಗೆ ತುಮಕೂರು ನಗರವನ್ನು ಆನೆಗಳ ಹಿಂಡು ಪ್ರವೇಶಿಸಿತ್ತು. ಇದು ಜನರಲ್ಲಿ ಭಯ ಮತ್ತು ಅಚ್ಚರಿಗೆ ಕಾರಣವಾಗಿದ್ದರೆ, ಇದು ‘ತಮ್ಮ ಹಾದಿ’ ಎನ್ನುವ ಗಾಂಭೀರ್ಯದಲ್ಲಿ ಮುನ್ನಡೆದಿದ್ದವು.

ಹೀಗೆ ಆನೆಗಳ ವಿಹಾರದ ತಾಣವಾಗಿದ್ದ ಜಿಲ್ಲೆ ನಂತರದ ದಿನಗಳಲ್ಲಿ ಅವುಗಳ ಪಾಲಿಗೆ ದುರ್ಬರ ಎನ್ನುವಂತೆ ಆಯಿತು. ಆನೆ ಕಾರಿಡಾರ್‌ನಲ್ಲಿ ಮನುಷ್ಯನ ಹಸ್ತಕ್ಷೇಪ ಹೆಚ್ಚಿದಂತೆ ಅವು ಆ ಹಾದಿಯಲ್ಲಿ ಸಿಗುವ ಮನುಷ್ಯರ ಮೇಲೂ ದಾಳಿ ನಡೆಸಿದವು. ಗುಬ್ಬಿ ತಾಲ್ಲೂಕಿನಲ್ಲಿ ಇಬ್ಬರು ಮೃತಪಟ್ಟ ನಂತರ ಜಿಲ್ಲೆಗೆ ಆನೆಗಳು ಪ್ರವೇಶಿಸುತ್ತಿವೆ ಎನ್ನುವ ಸುಳಿವು ಸಿಕ್ಕ ತಕ್ಷಣವೇ ಅರಣ್ಯ ಇಲಾಖೆ ಸಕಲ ರೀತಿಯಲ್ಲಿಯೂ ಸಜ್ಜಾಗುತ್ತಿದೆ. ಒಂದು ಸಮಯದಲ್ಲಿ ತಮ್ಮದೇ ವಿಹಾರ ತಾಣ ಎಂದು ಬಗೆದಿದ್ದ ನೆಲದಲ್ಲಿ ಈಗ ಅವುಗಳ ಮೇಲೆ ಕಣ್ಗಾವಲು!

ಬೆಳೆನಾಶ: ಆನೆ ದಾಳಿಗಳಿಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯೂ ಆಗಿದೆ. 2016–17ನೇ ಸಾಲಿನಲ್ಲಿ ತುಮಕೂರು ತಾಲ್ಲೂಕಿನಲ್ಲಿ 516, ಗುಬ್ಬಿಯ 20 ಕಡೆಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. 2017–18ರಲ್ಲಿ ತುಮಕೂರಿನ 88, ಗುಬ್ಬಿ ತಾಲ್ಲೂಕಿನ 69 ಕಡೆಗಳಲ್ಲಿ ಆನೆ ಹಾವಳಿಗೆ ಬೆಳೆಗಳು ನಾಶವಾಗಿವೆ.

ಆನೆ ತಂಗುವ ಕೆರೆಗಳು

ಹೊಳಕಲ್ಲು, ಗೂಳೂರು, ಹೆತ್ತೇನಹಳ್ಳಿ, ಗಂಗಸಂದ್ರ, ಲಕ್ಷ್ಮಣಸಂದ್ರ, ಮಲ್ಲಸಂದ್ರ, ಅದಲಾಪುರ, ಎಂ.ಎಚ್.ಪಟ್ಟಣ, ಗುಬ್ಬಿ, ಕಾಗ್ಗೆರೆ, ಲಕ್ಷ್ಮಣಕೆರೆ, ಗಂಟೇನಹಳ್ಳಿ, ಬೋರನಕಣಿವೆ, ಗಾಯತ್ರಿ ಜಲಾಶಯ.

ಅರಣ್ಯ ಪ್ರದೇಶ

ಕಿತ್ತಾಗನಹಳ್ಳಿ ನೆಡುತೋಪು, ಅಡಗೂರು, ಬಳ್ಳಾಪುರ, ದೊಡ್ಡಗುಣಿ, ತೀರ್ಥರಾಂಪುರ, ಅಂಕಸಂದ್ರ, ಮಂಚಲದೊರೆ, ಬುಕ್ಕಾಪಟ್ಟಣ, ಬೆಳ್ಳಾರ, ಸುವರ್ಣಮುಖಿ.

ಸಂಚರಿಸಿರುವ ಸಾಧ್ಯತೆ

‘ಆನೆ ಕಾರಿಡಾರ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕೋಳಿಹಳ್ಳಿ ಸುತ್ತಮುತ್ತ ಸಹ ಆನೆ ಕಾರಿಡಾರ್ ಇದೆ. ಸೋಮವಾರ ದಾಳಿ ನಡೆಸಿದ ಆನೆಗೆ ಬಹುಶಃ 50ರ ಪ್ರಾಯ. ಅದು ಈ ಹಿಂದೆ ಇದೆ ಹಾದಿಯಲ್ಲಿ ಓಡಾಡಿರುವ ಸಾಧ್ಯತೆ ಇದೆ. ಆ ಕಾರಣದಿಂದಲೂ ಇತ್ತ ಬಂದಿರಬಹುದು’ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT