ದೇಶದ ಹಿತಕ್ಕಾಗಿ ಮೋದಿ ಪ್ರಧಾನಿಯಾಗುವುದು ಅನಿವಾರ್ಯ: ಚಿದಾನಂದ ಎಂ.ಗೌಡ

ಶುಕ್ರವಾರ, ಏಪ್ರಿಲ್ 19, 2019
27 °C

ದೇಶದ ಹಿತಕ್ಕಾಗಿ ಮೋದಿ ಪ್ರಧಾನಿಯಾಗುವುದು ಅನಿವಾರ್ಯ: ಚಿದಾನಂದ ಎಂ.ಗೌಡ

Published:
Updated:
Prajavani

ಶಿರಾ: ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗುವುದು ಅನಿವಾರ್ಯವಾಗಿದೆ ಎಂದು ಬಿಜೆಪಿ ಮುಖಂಡ ಚಿದಾನಂದ ಎಂ.ಗೌಡ ಹೇಳಿದರು.

ದೇಶದಲ್ಲಿ ಯುವಜನತೆ, ವಿದ್ಯಾವಂತರು, ಕಾರ್ಮಿಕರು ಹಾಗೂ ರೈತರು ಸೇರಿದಂತೆ ಪ್ರತಿಯೊಬ್ಬರು 5 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತದಿಂದ ಪ್ರೇರೇಪಿತರಾಗಿ ಬಿಜೆಪಿ ಪರ ಒಲವು ತೋರುತ್ತಿದ್ದಾರೆ ಎಂದು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಸ್ಥಳೀಯ ನಾಯಕರ ಆಹ್ವಾನ ಮತ್ತು ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತದಿಂದ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಲಾಗುವುದು ಎಂದರು.

‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿ ಗೆಲುವು ಖಚಿತ. ಶಿರಾ ಕ್ಷೇತ್ರದಿಂದ ಸಹ ಅವರಿಗೆ ಹೆಚ್ಚಿನ ಬಹುಮತ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ತಾಲ್ಲೂಕಿನಲ್ಲಿ ಇದುವರೆಗೂ ಆಡಳಿತ ನಡೆಸಿದವರು ಜನತೆಯ ನೋವಿಗೆ ಸ್ಪಂದಿಸಲು ವಿಫಲರಾಗಿದ್ದಾರೆ. ಮತಯಾಚನೆಗೆ ಹೋದ ಸಮಯದಲ್ಲಿ ಜನತೆ ಅವರಿಗೆ ಘೇರಾವ್ ಮಾಡುತ್ತಿದ್ದಾರೆ’ ಎಂದು ಹಾಲಿ ಮತ್ತು ಮಾಜಿ ಶಾಸಕರ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲದೆ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೇಮಾವತಿ ನೀರನ್ನು ಶಿರಾ ತಾಲ್ಲೂಕಿನ ಮದಲೂರು, ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ಹರಿಸಲು, ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಒತ್ತಾಯಿಸಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಒಬಿಸಿಗೆ ಸೇರಿಸಿ: ಒಕ್ಕಲಿಗ ಜನಾಂಗ ಹಾಗೂ ಅದರಲ್ಲಿ ಬರುವ ಪಂಗಡಗಳನ್ನು ಕೇಂದ್ರದಲ್ಲಿ ಒಬಿಸಿಗೆ ಸೇರಿಸಲಾಗಿದೆ. ಆದರೆ, ಕುಂಚಿಟಿಗರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿರುವುದರಿಂದ ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಇದುವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಿರ್ಲಕ್ಷ್ಯದಿಂದಾಗಿ ಕುಂಚಿಟಿಗ ಜನಾಂಗದವರಿಗೆ ಉನ್ನತ ಹುದ್ದೆಗಳು ದೊರೆಯದಂತಾಗಿ ಜನಾಂಗಕ್ಕೆ ಅನ್ಯಾಯವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಕುಂಚಿಟಿಗರನ್ನು ಒಬಿಸಿಗೆ ಸೇರಿಸಲು ಪ್ರಯತ್ನ ನಡೆಸಲಾಗುವುದು ಎಂದರು.

ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಬಿಜೆಪಿ ನಗರಮೋರ್ಚಾ ಅಧ್ಯಕ್ಷ ಬಿ.ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥ ಗೌಡ, ಮಾಜಿ ಅಧ್ಯಕ್ಷ ನಿಡಗಟ್ಟೆ ಚಂದ್ರಶೇಖರ್, ಶ್ರೀಧರ್, ಲಕ್ಷ್ಮಿನಾರಾಯಣ, ಗಿರಿಧರ್, ರಾಜಶೇಖರ್, ಕುಮಾರ್, ಉಮೇಶ್, ಆರ್.ಜಯರಾಮಯ್ಯ ಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !