ಭಾನುವಾರ, ಸೆಪ್ಟೆಂಬರ್ 22, 2019
27 °C

ಪರಿಸರ ಸ್ನೇಹಿ ಕಟ್ಟಡ ವಿನ್ಯಾಸಕ್ಕೆ ಒತ್ತು: ಹನುಮಂತರಾಯಪ್ಪ ಸಲಹೆ

Published:
Updated:
Prajavani

ತುಮಕೂರು: ’ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ಬೆಳಕು ಹೆಚ್ಚಿನ ರೀತಿ ದೊರಕುವಂತೆ ಹಾಗೂ ಮಳೆ ನೀರನ್ನು ರಕ್ಷಿಸುವ ನಿಟ್ಟಿನಲ್ಲಿ ಕಟ್ಟಡ ವಿನ್ಯಾಸ ಮಾಡಲು ವಾಸ್ತು ಶಿಲ್ಪಿಗಳು ಮುಂದಾಗಬೇಕು’ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ (ಕ್ರೆಡಲ್) ಸಹಾಯಕ ಪ್ರಧಾನ ವ್ಯವಸ್ಥಾಪಕ ಹನುಮಂತರಾಯಪ್ಪ ಹೇಳಿದರು.

ನಗರದ ಹೊರವಲಯದ ಎಚ್ಎಂಎಸ್ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ‘ಇಂಧನ ಉಳಿತಾಯ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ವಾಸ್ತು ಶಿಲ್ಪಿಗಳಿಗೆ ಹೆಚ್ಚಿನ ಬೇಡಿಕೆ ಹಾಗೂ ಮಾರುಕಟ್ಟೆ ಇದೆ. ಆಧುನಿಕ ವಿನ್ಯಾಸದ ಕಟ್ಟಡಗಳನ್ನು ಪಡೆಯುವುದು ಎಲ್ಲರ ಆಶಯ. ಆದರೆ, ವಾಸ್ತು ಶಿಲ್ಪಿಗಳು ಪರಿಸರಕ್ಕೆ ಪೂರಕ ವಿನ್ಯಾಸ ಅನುಸರಿಸಬೇಕು ಎಂದು ಹೇಳಿದರು.

ಪ್ರಾಚೀನ ಕಾಲದಲ್ಲಿ ಮನುಷ್ಯನ ಆರೋಗ್ಯಕ್ಕೆ ಅವಶ್ಯಕವಾಗಿದ್ದ ಶುದ್ಧ ಗಾಳಿ ಹಾಗೂ ಕಟ್ಟಡದಲ್ಲಿ ಉತ್ತಮ ಬೆಳಕಿಗೆ ಮಹತ್ವ ನೀಡುತ್ತಿದ್ದರು. ಆದರೆ, ಕಾಲ ಬದಲಾದಂತೆ ಗಾಳಿ ಮತ್ತು ಬೆಳಕಿಗಿಂತ ಹೆಚ್ಚಾಗಿ ನವೀನತೆಗೆ ಒತ್ತು ಕೊಡಲಾಯಿತು. ಇದರಿಂದ ಎಷ್ಟೊ ಒಳ್ಳೆಯ ಕಟ್ಟಡಗಳಿದ್ದರೂ ಗಾಳಿ ಮತ್ತು ಬೆಳಕಿನ ಕೊರತೆ ಎದ್ದು ಕಾಣುತ್ತದೆ ಎಂದು ವಿವರಿಸಿದರು.

ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ , ವಾಸ್ತುಶೈಲಿ ಎಂಬುದು ಎಲ್ಲ ಕಾಲದಲ್ಲಿಯೂ ಹೊಸದನ್ನು ಬಯಸುವ ವಿಷಯವಾಗಿದೆ. ಈಗಿನ ಕಾಲಮಾನಕ್ಕೆ  ಹಸಿರು ವಾಸ್ತು ಶೈಲಿ (ಗ್ರೀನ್ ಆರ್ಕಿಟೆಕ್‌) ಎಂಬುದು ಪ್ರಾಮುಖ್ಯ ಪಡೆದಿದೆ ಎಂದು ವಿವರಿಸಿದರು.

ಮಳೆ ನೀರು ಸಂಗ್ರಹಕ್ಕೆ ಅವಕಾಶವಾಗುವ ರೀತಿಯಲ್ಲಿ ವಾಸ್ತುವನ್ನು ರೂಪಿಸಲು ವಾಸ್ತು ತಜ್ಞರು ಒತ್ತುಕೊಡಬೇಕು. ಇದರಿಂದ ನೈಸರ್ಗಿಕ ಸಂಪನ್ಮೂಲ ಉಳಿಸಬಹುದು. ಕೃತಕ ಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿದರು.

 ಎಚ್‌ಎಂಎಸ್‌ಐಟಿಯ ಮುಖ್ಯಸ್ಥರಾದ ಶಫಿ ಅಹಮ್ಮದ್ ಮಾತನಾಡಿದರು. ಉತ್ತಮ ವಾಸ್ತುಶಿಲ್ಪಿ ಪ್ರಶಸ್ತಿ ಪಡೆದ ಕಾಲೇಜಿ ಸಿಬ್ಬಂದಿ ರಾಜ್‌ಕುಮಾರ್ ಗುಪ್ತಾ ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಡಾ.ಇರ್ಫಾನ್ ಜಿ.ಗುಲ್ಬರ್ಗ, ನಿರ್ದೇಶಕ ಪಿ.ಪ್ರೀತೀಶ್, ಕ್ರೆಡಿಲ್ ತಾಂತ್ರಿಕ ಅಧಿಕಾರಿ ಆರ್.ಮಹೇಶ್, ಸಿಬ್ಬಂದಿ ಜೋಥಮ್, ಆರ್.ಕೆ.ಪಂಡಿತ್, ಎಂ.ಮಹೇಶ್‌ಕುಮಾರ್, ಕುಲನ್‌ ದೇವನ್ ಮುತ್ತುಸ್ವಾಮಿ ಇದ್ದರು.

Post Comments (+)