ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪರಿಷ್ಕರಣೆಗೆ ನೌಕರರ ಆಗ್ರಹ

ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಕುಟುಂಬದ ಸದಸ್ಯರ ಸೈಕಲ್ ಜಾಥಾ
Last Updated 21 ನವೆಂಬರ್ 2022, 16:34 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚಿಸುತ್ತಿದ್ದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನೌಕರರು ಸಹ ವೇತನ ಹೆಚ್ಚಳ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಆರಂಭಿಸಿದ್ದಾರೆ. ಸರ್ಕಾರ ನೀಡಿದ ಭರವಸೆಯಂತೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡುವಂತೆ ಸಿಬ್ಬಂದಿ ಆಗ್ರಹಿಸಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಹೋರಾಟದ ಸಲುವಾಗಿ ಬಳ್ಳಾರಿಯಿಂದ ಹಮ್ಮಿಕೊಂಡಿರುವ ಸೈಕಲ್ ಜಾಥಾ ಸೋಮವಾರ ನಗರಕ್ಕೆ ಬಂದಿತು. ಇಲ್ಲಿನ ನೌಕರರು ಹಾಗೂ ಕುಟುಂಬದವರು ಭಾಗವಹಿಸಿ, ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ನಡೆಸಿದರು.

ಸಂಸ್ಥೆಯ ನಾಲ್ಕು ನಿಗಮಗಳಲ್ಲೂ 1.7 ಲಕ್ಷ ನೌಕರರು, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೇತನ ಹೆಚ್ಚಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸವಲತ್ತು ಕೊಡುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಆದರೆ, ಈವರೆಗೂ ಈಡೇರಿಲ್ಲ. ಬದಲಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಶಿಕ್ಷಿಸಲಾಯಿತು. ಕೆಲವರನ್ನು ಸೇವೆಯಿಂದ ವಜಾ ಮಾಡಲಾಯಿತು ಎಂದು ಒಕ್ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಆರೋಪಿಸಿದರು.

ಮುಷ್ಕರದ ಸಮಯದಲ್ಲಿ ವಜಾ ಮಾಡಿರುವ ನೌಕರರನ್ನು ಮತ್ತೆ ನೇಮಕ ಮಾಡಬೇಕು. ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯ ಬೇಕು. ವರ್ಗಾವಣೆ ರದ್ದುಪಡಿಸಬೇಕು. ಅಮಾನತು ಆದೇಶ ವಾಪಸ್ ಪಡೆಯ ಬೇಕು. 1992ರಿಂದ ಈವರೆಗೆ ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆ ಸ್ಥಗಿತಗೊಂಡಿದ್ದು, ತಕ್ಷಣ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ನಿಗಮಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ನೇಮಿಸಿಕೊಂಡು, ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುತ್ತಿರುವುದು ಸರಿಯಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಚಾಲಕರನ್ನು ನೇಮಿಸಿಕೊಳ್ಳ ಬಾರದು ಎಂದು ಆಗ್ರಹಿಸಿ
ದರು.

ಕೆಲವು ಮಾರ್ಗಗಳನ್ನು ಖಾಸಗಿ ವಾಹನಗಳ ಚಾಲನೆಗೆ ಅನುಮತಿ ನೀಡಿ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಯತ್ನ ನಡೆದಿದೆ. ಇದರಿಂದ ರಾಜ್ಯದ ಯುವಕರಿಗೆ ಮತ್ತಷ್ಟು ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಲಿದೆ. ಕೂಡಲೇ ಇಂತಹ ಪ್ರಯತ್ನ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ. ಪುಟ್ಟಯ್ಯ, ವಿಭಾಗೀಯ ಉಸ್ತುವಾರಿ ಜಿ.ಬಿ. ನಾಗೇಶ್, ಪ್ರಧಾನ ಕಾರ್ಯದರ್ಶಿ ಕರಿಯಣ್ಣ, ಉಪಾಧ್ಯಕ್ಷ ಸೈಯದ್ ಸಾದಿಕ್, ಕಲಾವತಿ, ನೇತ್ರಾವತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT