ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಪರಿಸರ ಕಾಳಜಿಯ ಬೀಜ ಬಿತ್ತಿ

ಶಾಲಾ ಮಕ್ಕಳೊಂದಿಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ ಸ್ನೇಹಿತರು
Last Updated 5 ಜೂನ್ 2020, 11:08 IST
ಅಕ್ಷರ ಗಾತ್ರ

ಗುಬ್ಬಿ: ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡುವ ಇಬ್ಬರು ಸ್ನೇಹಿತರು ಶ್ರಮದಾನದ ಮೂಲಕ ಮಕ್ಕಳಿಗೆ ಪರಿಸರ ಕಾಳಜಿಯ ಬೀಜ ಬಿತ್ತುತ್ತಿದ್ದಾರೆ. ಮರಗಳ ಪೋಷಣೆ, ಪ್ರಾಣಿ, ಪಕ್ಷಿ, ಇತರೆ ಜೀವವೈವಿಧ್ಯದ ಉಳಿವಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸ್ನೇಹಿತರ ಈ ಕಾರ್ಯಕ್ಕೆ ಈಗ ಐದು ವರ್ಷ.

ತಾಲ್ಲೂಕಿನ ಕಡಬ ಹೋಬಳಿ ಅಳ್ಳೇನಹಳ್ಳಿಯ ಜೆ.ಗೀತಾ, ಯಲಚಿಹಳ್ಳಿ ಗ್ರಾಮದ ವೈ.ಆರ್.ಯತೀಶ್ ಇಬ್ಬರು ಸೇರಿ ಸುತ್ತಮುತ್ತಲಿನ ಗ್ರಾಮಗಳಾದ ಕೆ.ಮತ್ತಿಘಟ್ಟ, ದಾಸರಕಲ್ಲಹಳ್ಳಿ ದ್ಯಾವಣ್ಣನಪಾಳ್ಯ, ಬೋಚಿಹಳ್ಳಿ, ಕಡೇಕೋಡಿ, ಕೋಡಿಹಟ್ಟಿ, ಜೀಗನಹಳ್ಳಿ ಗೊಲ್ಲರಹಟ್ಟಿ ಶಾಲೆಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಶ್ರಮದಾನದ ಪಾಠ ಹೇಳುತ್ತಿದ್ದಾರೆ.

10ನೇ ತರಗತಿ ಓದಿರುವ ಇಬ್ಬರು ಶಾಲೆಗಳ ಆವರಣದಲ್ಲಿ ವಿದ್ಯಾರ್ಥಿಗಳ ಸಹಕಾರದಿಂದ ಸುಮಾರು 300ರಿಂದ 400 ಸಸಿಗಳನ್ನು ನೆಟ್ಟಿದ್ದಾರೆ. ಆ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಿದ್ದಾರೆ. ಈ ಮೂಲಕ ಚಿಂಕ್ಕಂದಿನಲ್ಲೇ ಮಕ್ಕಳ ಮನಸಿನಲ್ಲಿ ಪರಸರ ಕಾಳಜಿಯ ಬೀಜ ಬಿತ್ತುತ್ತಿದ್ದಾರೆ.

ತಾಲ್ಲೂಕಿನ ಸಿ.ಎಸ್.ಪುರ ರಸ್ತೆಯ ಕಡಬಾ ಗೇಟ್‌ನ ಬಲ ಭಾಗಕ್ಕೆ ಹಾದು ಹೋಗಿರುವ 3 ಕಿ.ಮೀ ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆಯವರು ನೆಟ್ಟಿರುವ 600 ಗಿಡಗಳು ಮತ್ತು ಅದರಲ್ಲಿ ಒಣಗಿ ಹೋಗಿದ್ದ 150 ಸಸಿಗಳ ಜಾಗದಲ್ಲಿ ಬೇರೆ ಸಸಿಗಳನ್ನು ನೆಟ್ಟು 4 ವರ್ಷಗಳಿಂದ ಪೋಷಣೆ ಮಾಡುತ್ತಿದ್ದಾರೆ. ಮಳೆ ಬಿದ್ದು ರಸ್ತೆಯಲ್ಲಿ ಹರಿಯುವ ನೀರು ಗಿಡಗಳ ಬುಡಕ್ಕೆ ತುಂಬಿಕೊಳ್ಳಲು ಚಿಕ್ಕ ಚಿಕ್ಕ ಕಾಲುವೆಗಳನ್ನು ಮಾಡಿದ್ದಾರೆ. ಜತೆಗೆ ಮರದ ತರಗೆಲೆಯನ್ನು ಗಿಡದ ಬುಡಕ್ಕೆ ಹಾಕಿ ಸದಾ ಕಾಲ ತೇವಾಂಶ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನಶಿಸಿ ಹೋಗುತ್ತಿರುವ ಉರುಗ, ದೂಪ, ಗೊರವಿ, ಜಾನೆ, ಬಿಳಿಸುಲಿಗಿ ಮರದ ಬೀಜಗಳನ್ನು ಸುತ್ತಮುತ್ತಲಿನ ಕಾಡುಗಳಿಂದ ಹೆಕ್ಕಿ ತಂದು ನರ್ಸರಿ ಮಾಡಿ ಸಸಿಗಳನ್ನು ಶಾಲೆಗಳ ಆವರಣ, ರೈತರ ಜಮೀನು, ರಸ್ತೆ ಬದಿ ನೆಡುತ್ತಿದ್ದಾರೆ. ಈ ಮೂಲಕ ರೈತರಲ್ಲೂ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT