ಗುರುವಾರ , ಮೇ 19, 2022
24 °C
ತೋಟದಲ್ಲೇ ₹1 ಲಕ್ಷ ವೆಚ್ಚದಲ್ಲಿ 15 ಬಾಕ್ಸ್‌ಗಳ ಮಧುವನ

ತುಡವೆ ಜೇನು ಕೃಷಿಯಲ್ಲಿ ಖುಷಿ

ಪಾಂಡುರಂಗಯ್ಯ ಎ. Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಜೇನು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೆಚ್ಚು, ಹೆಚ್ಚು ಆದಾಯ ಗಳಿಸುವ ಮೂಲಕ ತಮ್ಮ ಬದುಕು ಕಟ್ಟಿಕೊಂಡು ಯುವಕರಿಗೆ ಮಾದರಿಯಾಗಿದ್ದಾರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಮೇಲಿನವಳಗೆರೆಹಳ್ಳಿ ಯುವ ರೈತ ರಂಗಸ್ವಾಮಿ.

ಪಿಯುಸಿ ಓದಿರುವ ರಂಗಸ್ವಾಮಿ ಬೆಂಗಳೂರಿನ ಜಿಕೆವಿಕೆಯ ತರಬೇತಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಶುದ್ಧ ಜೇನು ತುಪ್ಪಕ್ಕೆ ಇದ್ದ ಬಹು ಬೇಡಿಕೆ ಹಾಗೂ ಅದರ ಮಹತ್ವದಿಂದ ಪ್ರೇರಣೆಗೊಂಡು ಜೇನು ಕೃಷಿ ಮಾಡಲು ಆಸ್ಥೆ ತೋರಿದ್ದರು.

ಕೃಷಿ ಅನುವುಗಾರರಾಗಿರುವ ಇವರು, ತಮ್ಮ 5 ಎಕರೆ ಹೊಲ, ತೋಟದಲ್ಲೇ ₹1 ಲಕ್ಷ ವೆಚ್ಚದಲ್ಲಿ 15 ಬಾಕ್ಸ್‌ಗಳ ಮಧುವನ ನಿರ್ಮಿಸಿದ್ದಾರೆ.

ಸ್ಥಳೀಯವಾಗಿ ಸಿಗುವ ಹೂವುಗಳಿಂದಲೇ ಪರಾಗ ಸ್ಪರ್ಶ ಮಾಡುವ ತುಡುವ ಜೇನನ್ನು ಒಂದು ವರ್ಷದಿಂದ ಸಾಕುತ್ತಿದ್ದಾರೆ. ಈ ಜೇನು ಉಳಿದೆಲ್ಲಾ ಜೇನಿಗಿಂತ ಹೆಚ್ಚು ತುಪ್ಪ ನೀಡುತ್ತದೆ. ಜೊತೆಗೆ ರಾಣಿ ಜೇನು, ಗಂಡು ಹಾಗೂ ಕೆಲಸದ ಜೇನು ಹುಳುಗಳು ಪ್ರಧಾನವಾಗಿ ಇದ್ದು, ಸುಮಾರು 2 ಕಿ.ಮೀ ತನಕ ಹೋಗಿ ಪರಾಗ ಮಾಡಿಕೊಂಡು ಬರುವ ಸಾಮರ್ಥ್ಯ ಈ ಹುಳುಗಳಿಗಿದೆ. ಹಾಗಾಗಿ ಜೇನುಹುಳು ಬೆಳವಣಿಗೆ ಮತ್ತು ಉತ್ಪಾದನೆಗೆ ಸಹಕಾರಿಯಾಗುವುದು ಎಂದು ಈ ಜೇನು ಸಾಕಲಾಗುತ್ತಿದೆ ಎಂದರು.

ಮನೆಯ ಸಿಬ್ಬಂದಿಯೇ ನಿತ್ಯ ಜೇನುಹುಳನ್ನು ಆರೈಕೆ ಮಾಡುತ್ತಾರೆ. 15 ಪೆಟ್ಟಿಗೆಗಳ ಜೇನು ಸಾಕಾಣಿಕೆಗೆ ಬೇಕಾದ ಎಲ್ಲ ಪರಿಕರಗಳು ಹಾಗೂ ಜೇನುತುಪ್ಪ ಸಂಗ್ರಹಣೆಗೆ ಯಂತ್ರೋಪಕರಣ ಬಳಸಿ ವೃತ್ತಿಪರ ಜೇನು ಸಾಕಾಣಿಕೆದಾರ ಎನಿಸಿಕೊಂಡಿದ್ದಾರೆ.

ತುಡುವ ಜೇನು 3 ತಿಂಗಳಿಗೆ 1 ಬೆಳೆಯಂತೆ ವಾರ್ಷಿಕವಾಗಿ 3-4 ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಜೇನು ಗೂಡಿನಿಂದ  ಸುಮಾರು 2ರಿಂದ 3 ಕೆ.ಜಿ ತುಪ್ಪ ಸಂಗ್ರಹಿಸುತ್ತಾ ಒಂದು ಸಲಕ್ಕೆ 30ರಿಂದ 40 ಕೆ.ಜಿವರೆಗೆ ಜೇನುತುಪ್ಪ ತೆಗೆಯುತ್ತಾರೆ.

ಇಲ್ಲಿ ಉತ್ಪಾದನೆಯಾದ ಶುದ್ಧ ಜೇನುತುಪ್ಪಕ್ಕೆ ಸ್ಥಳೀಯವಾಗಿ ಹೆಚ್ಚು ಬೇಡಿಕೆ ಇದೆ. ಕೆ.ಜಿಗೆ ₹500 ತನಕ ಮಾರಾಟವಾಗುತ್ತದೆ. ಹಾಗಾಗಿ ಹೊರಗಿನ ವ್ಯಾಪಾರಿಗಳಿಗೆ ಜೇನು ತುಪ್ಪ ಮಾರಾಟ ಮಾಡಲು ಸಾಕಾಗುತ್ತಿಲ್ಲ ಎನ್ನುತ್ತಾರೆ ರಂಗಸ್ವಾಮಿ.

ಜೇನು ಕೃಷಿಯಿಂದ ತೆಂಗು, ಅಡಿಕೆ, ಬಾಳೆ ಹಾಗೂ ಇನ್ನಿತರ ಬೆಳೆಗಳ ಹೂವಿನಲ್ಲಿ ಪರಾಗ ಮಾಡುವುದರಿಂದ ಈ ವಾಣಿಜ್ಯ ಬೆಳೆಗಳ ಕಾಯಿಗಳು ಉದುರದೆ ಚೆನ್ನಾಗಿ ಕಟ್ಟುತ್ತದೆ.

ತಂದೆ ನಂಜಪ್ಪ, ಹೆಂಡತಿ ಶೋಭಾ ಅವರಿಗೂ ಜೇನು ಕೃಷಿ ನಿರ್ವಹಣೆಯ ತರಬೇತಿ ನೀಡಿದ್ದಾರೆ. ರೋಗ, ಕೀಟಬಾಧೆ ಕಾಡದಂತೆ ಎಚ್ಚರಿಕೆ ವಹಿಸುವುದು ಪೆಟ್ಟಿಗೆ ತಳದಲ್ಲಿ ವಾರಕ್ಕೊಮ್ಮೆ ಶುಚಿತ್ವ ಕಾಪಾಡಿ ನೀರು ಸಂಗ್ರಹಿಸುವುದರ ಬಗ್ಗೆ ನಿಗಾವಹಿಸುತ್ತಾರೆ.

ಜೇನು ಸಾಕಾಣಿಕೆ ಜೊತೆಗೆ ತೆಂಗು, ಅಡಿಕೆ, ಬಾಳೆ, ಖುಷ್ಕಿ ಕೃಷಿ ಮತ್ತು ಇದೀಗ ಹೊಸದಾಗಿ ಪುಷ್ಪ ಕೃಷಿಯನ್ನೂ ಆರಂಭಿಸಿದ್ದಾರೆ. ಕೊನೆಹಳ್ಳಿಯಲ್ಲಿ ವಾಣಿಜ್ಯ ಬೆಳೆಗಳು ಸೇರಿದಂತೆ ಹಣ್ಣು ಬೆಳೆಗಳ ತರಬೇತಿ ಪಡೆದಿದ್ದಾರೆ. ರಾಜೀವ್‌ಗಾಂಧಿ ಚೈತನ್ಯ ಯೋಜನೆಯಲ್ಲಿ ಕೃಷಿ ಉದ್ಯಮ ತರಬೇತಿ, ಹೈನುಗಾರಿಕೆ, ನರ್ಸರಿ ತರಬೇತಿಗಳೊಂದಿಗೆ ತಾಲ್ಲೂಕಿನ ಪ್ರಗತಿಪರ ಕೃಷಿ ಪ್ರಶಸ್ತಿ ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು