ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್ ಮಾಫಿಯಾ; ರೈತರಿಗೆ ಪುಡಿಗಾಸು: ಶಶಿಧರ್ ಆರೋಪ

ಮೇ 13ರಂದು ಎಸ್.ಆರ್.ಹಿರೇಮಠ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮುತ್ತಿಗೆ
Last Updated 8 ಮೇ 2019, 12:16 IST
ಅಕ್ಷರ ಗಾತ್ರ

ತುಮಕೂರು: ಟೋಲ್ ಮಾಫಿಯಾಕ್ಕೆ ಲಾಭ ಮಾಡಿಕೊಡುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಾಗಿದೆ. ರೈತರಿಗೆ ಪುಡಿಗಾಸು ಪರಿಹಾರ ನೀಡಿ ಅವಸರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿದೆ ಎಂದು ರೈತ–ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಶಿಧರ್ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘93 ಕಿಲೋ ಮೀಟರ್ ಉದ್ದದ ಕಾಮಗಾರಿಗೆ ₹ 2,700 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ₹ 700 ಕೋಟಿಯನ್ನು ರೈತರಿಗೆ ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ. ಉಳಿದ ₹ 2 ಸಾವಿರ ಕೋಟಿಯಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಅಂದರೆ ಒಂದು ಕಿಲೋ ಮೀಟರ್‌ಗೆ ಅಂದಾಜು ₹ 30 ಕೋಟಿ ವ್ಯಯಿಸಲಾಗುತ್ತಿದೆ. ಅಕ್ರಮಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ಇಷ್ಟೊಂದು ಹಣ ವ್ಯಯಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಸಂತ್ರಸ್ತರೊಂದಿಗೆ ಸಭೆ ನಡೆಸಿದ್ದರು. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಜನಪ್ರತಿನಿಧಿಗಳ ಮಾತಿಗೂ ಬೆಲೆ ನೀಡದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ನ್ಯಾಯಯುತ ಪರಿಹಾರ ದೊರೆಯದ ಹೊರತು ಯಾವುದೇ ಕಾರಣಕ್ಕೂ ಜಮೀನನ್ನು ಬಿಟ್ಟುಕೊಡುವುದಿಲ್ಲ. ಮೇ 13ರಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಜನಸಂಗ್ರಾಮ ಪರಿಷತ್‌ ಮುಖಂಡ ಎಸ್.ಆರ್.ಹಿರೇಮಠ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಿದ್ದೇವೆ. ಈ ಪ್ರತಿಭಟನೆಯಲ್ಲಿ ತುಮಕೂರು, ಗುಬ್ಬಿ, ತಿಪಟೂರು, ಬೀರೂರು, ಕಡೂರು, ತರೀಕೆರೆ ಭಾಗದ ರೈತರು ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೇಳಿದರು.

ರೈತ ಮನೋಹರ್ ಭೈರನಾಯಕನಹಳ್ಳಿ ಮಾತನಾಡಿ, ‘ತಿಪಟೂರು ಮತ್ತು ಕಳ್ಳಿಪಾಳ್ಯದ ಬಳಿ ಮಾಜಿ ಶಾಸಕರ ಹಾಗೂ ಲಂಚ ನೀಡಿದವರ ಭೂಮಿಗಳನ್ನು ಯೋಜನೆಯ ವ್ಯಾಪ್ತಿಯಿಂದ ಕೈ ಬಿಡಲಾಗಿದೆ. ಇತ್ತೀಚೆಗೆ ಕಾಮಗಾರಿಗೆ ಸಂಬಂಧಪಡದ ಸ್ಥಳೀಯ ಅಧಿಕಾರಿಗಳು ರೈತರಿಗೆ ದಾಖಲೆಗಳನ್ನು ನೀಡುವಂತೆ ಕಿರುಕುಳ ನೀಡಿದ್ದಾರೆ. ಜಿಲ್ಲಾಡಳಿತ ಇದರಲ್ಲಿ ನೇರವಾಗಿ ಶಾಮೀಲಾಗಿದೆ. ಲಂಚ ನೀಡಿದವರಿಗೆ ಮಾತ್ರ ಅವರು ಕೇಳಿದಷ್ಟು ಪರಿಹಾರ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

ಈ ಕೂಡಲೇ ಸರ್ಕಾರ ನೋಟಿಫೀಕೇಶ್ ಆದ ದಿನದಿಂದ ಇಲ್ಲಿಯವರೆಗೂ ಅಂದರೆ ಈ ಮೂರು ವರ್ಷದ ಆದಾಯ ನಷ್ಟವನ್ನು ರೈತರಿಗೆ ಸಂಪೂರ್ಣವಾಗಿ ತುಂಬಿ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರು ಹೋರಾಟ ತೀವ್ರಗೊಳಿಸುವರು ಎಂದು ಹೇಳಿದರು.

ರೈತ, ಕೃಷಿ ಕಾರ್ಮಿಕ ಸಂಘಟನೆಯ ಶ್ರೀಧರ್, ಪ್ರಕಾಶ್, ಹನುಮಂತರಾಯಪ್ಪ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT