ಬುಧವಾರ, ಡಿಸೆಂಬರ್ 8, 2021
28 °C
ರೈತ ಸಂಘದಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ

ಯೂರಿಯಾ ಸಮರ್ಪಕ ವಿತರಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ವಿತರಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಮಾರಾಟ ಕೇಂದ್ರಗಳ ಜೊತೆ ಸೇರಿ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ಸಿಗದಂತೆ ಮಾಡಿದ್ದಾರೆ. ಕಾಳಸಂತೆಕೋರರು ಇಷ್ಟ ಬಂದ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಅಗತ್ಯವಿಲ್ಲದ 19 ಆಲ್ ಎಂಬ ಮತ್ತೊಂದು ಗೊಬ್ಬರ ಖರೀದಿಸಬೇಕು ಎಂಬ ಷರತ್ತು ವಿಧಿಸುತ್ತಿದ್ದಾರೆ. ಇದರಿಂದ ಒಂದು ಚೀಲ ರಸಗೊಬ್ಬರಕ್ಕೆ ₹ 150ರಿಂದ ₹200 ಹೆಚ್ಚಿಗೆ ನೀಡಬೇಕಾದ ಅನಿವಾರ್ಯ ಇದೆ. ಇದಕ್ಕೆ ಅಧಿಕಾರಿಗಳೇ ನೇರ ಕಾರಣ ಎಂದು ದೂರಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್, ‘ಈಗ ರಾಗಿ ಸೇರಿದಂತೆ ಇತರೆ ಬೆಳೆಗಳಿಗೆ ಯೂರಿಯಾ ಅಗತ್ಯವಿದೆ. ಆದರೆ ಅಧಿಕಾರಿಗಳು ಯೂರಿಯಾ ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ. ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ನೀಡಬೇಕಾದ ಗೊಬ್ಬರವನ್ನು ಖಾಸಗಿ ಅಂಗಡಿಗಳಿಗೆ ನೀಡಿ, ಕೃತಕ ಅಭಾವ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ, ‘ಜಿಲ್ಲೆಗೆ ಹಿಂದಿನ ಸಾಲಿನ ಬೇಡಿಕೆಯಂತೆ 25 ಸಾವಿರ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿತ್ತು. ಆದರೆ ಈ ಸಾಲಿನಲ್ಲಿ ಉತ್ತಮ ಮಳೆ ಆಗಿರುವ ಕಾರಣ 30 ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇದೆ. ಆದರೆ ಸರಬರಾಜು ಆಗಿರುವುದು 25,344 ಮೆಟ್ರಿಕ್ ಟನ್ ಮಾತ್ರ. ಇನ್ನೂ 5,000 ಮೆಟ್ರಿಕ್ ಟನ್ ಅಗತ್ಯವಿದೆ. ಇಲಾಖೆಯಿಂದ ಈಗಾಗಲೇ ಎಲ್ಲ ರಸಗೊಬ್ಬರ ಕಾರ್ಖಾನೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಕಚೇರಿಗೂ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲ ದಿನಗಳಲ್ಲಿ ಯೂರಿಯಾ ಪೂರೈಕೆಯಾಗುವ ನಿರೀಕ್ಷೆ ಇದೆ. ಅಂಗಡಿಗಳಲ್ಲಿ ಹೆಚ್ಚಿನ ದರ ವಿಧಿಸುವ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘಟನೆ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸಿದ್ದರಾಜು ಕೊಡ್ಲಹಳ್ಳಿ, ಲೋಕೇಶ್ ಬಂಡಿಮನೆ, ಅನಿಲ್‍ಕುಮಾರ್, ಕೀರ್ತಿ ಹಳೇ ಸಂಪಿಗೆ, ಚಿಕ್ಕದ್ಯಾವಣ್ಣ, ಲಕ್ಷ್ಮಣಗೌಡ, ರುದ್ರೇಶ್‍ಗೌಡ, ವೆಂಕಟೇಶಗೌಡ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.