ಶನಿವಾರ, ಆಗಸ್ಟ್ 13, 2022
25 °C
ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ಲಾಟ್‌ಗಳಿರುವ ಜಿಲ್ಲೆ ತುಮಕೂರು

ತುಮಕೂರು: ಬೆಳೆ ಸಮೀಕ್ಷೆಗೆ ರೈತರ ಸ್ಪಂದನೆ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮೊಬೈಲ್ ಆ್ಯಪ್‌ ಮೂಲಕ ರೈತರು ತಮ್ಮ ಜಮೀನಿನಲ್ಲಿರುವ ಬೆಳೆಯನ್ನು ದಾಖಲಿಸುವ ‘ಬೆಳೆ ಸಮೀಕ್ಷೆ’ಗೆ ಜಿಲ್ಲೆಯ ರೈತರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಶೇ 30ರಷ್ಟು ರೈತರು ಆ್ಯಪ್‌ನಲ್ಲಿ ಬೆಳೆ ವಿವರಗಳನ್ನು ದಾಖಲಿಸಿದ್ದಾರೆ. ಈ ಬೆಳೆ ಸಮೀಕ್ಷೆ ಕ್ಷಣ ಕ್ಷಣಕ್ಕೂ ವೇಗವಾಗಿ ಏರುಗತಿಯಲ್ಲಿ ಸಾಗುತ್ತಿದೆ.

ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ‘ರೈತರ ಬೆಳೆ ಸಮೀಕ್ಷೆ ಆ್ಯಪ್‌ 2020–21’ ಅಳವಡಿಸಿಕೊಳ್ಳುವ ಮೂಲಕ ತಮ್ಮ ಜಮೀನಿನಲ್ಲಿರುವ ಬೆಳೆಯನ್ನು ದಾಖಲಿಸಬಹುದು. ಆಗಸ್ಟ್ 10ರಿಂದ ರಾಜ್ಯದಾದ್ಯಂತ ಈ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿತು. ಆದರೆ ಇದು ವೇಗ ಪಡೆದಿದ್ದು ಆ.15ರ ಸುಮಾರಿನಲ್ಲಿ. ಹೀಗೆ ಈ 20 ದಿನಗಳಲ್ಲಿ ಜಿಲ್ಲೆಯ ಶೇ 30ರಷ್ಟು ರೈತರು ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ 17,15,183 ಬೆಳೆ ಸಮೀಕ್ಷೆ ಮಾಡುವ ಪ್ಲಾಟ್‌ಗಳಿವೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ಲಾಟ್‌ಗಳನ್ನು ಜಿಲ್ಲೆ ಹೊಂದಿದೆ. ಇಲ್ಲಿಯವರೆಗೆ 4,91,132 ಪ್ಲಾಟ್‌ಗಳಲ್ಲಿನ ಬೆಳೆಗಳನ್ನು ರೈತರು ಸಮೀಕ್ಷೆ ನಡೆಸಿ ಮೊಬೈಲ್ ಆ್ಯಪ್‌ ಮೂಲಕ ನೋಂದಾಯಿಸಿದ್ದಾರೆ. ರಾಜ್ಯದಲ್ಲಿಯೇ ತುಮಕೂರು ಜಿಲ್ಲೆ ಈ ಬೆಳೆ ಸಮೀಕ್ಷೆಯಲ್ಲಿ 14ನೇ ಸ್ಥಾನದಲ್ಲಿ
ಇದೆ.

ಪಾವಗಡ ತಾಲ್ಲೂಕಿನಲ್ಲಿ ಶೇ 42ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ತಿಪಟೂರು, ಮಧುಗಿರಿ, ತುರುವೇಕೆರೆ, ಕುಣಿಗಲ್‌ನಲ್ಲಿ ಶೇ 25ರಷ್ಟು ಸಮೀಕ್ಷೆ ಮುಗಿದಿದೆ. ಪಾವಗಡದಲ್ಲಿ ಕಡಿಮೆ ಪ್ಲಾಟ್‌ಗಳಿದ್ದು ಅಲ್ಲಿ ಶೇಕಡಾವಾರು ಪ್ರಮಾಣ ಜಿಲ್ಲೆಯಲ್ಲಿಯೇ ಹೆಚ್ಚಿದೆ. ಒಂದು ಲಕ್ಷ, ಎರಡು ಲಕ್ಷ ಪ್ಲಾಟ್‌ಗಳನ್ನು ಹೊಂದಿರುವ ತಾಲ್ಲೂಕುಗಳಲ್ಲಿ ಈಗ ಸಮೀಕ್ಷೆ ವೇಗ ಪಡೆಯುತ್ತಿದೆ.

ಪ್ರಕೃತಿ ವಿಕೋಪ, ಪ್ರವಾಹ, ಬರಗಾಲದ ಸಂದರ್ಭಗಳಲ್ಲಿ ಪರಿಹಾರ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಯೋಜನ, ಸರ್ಕಾರದಿಂದ ಸಿಗುವ ನೆರವು ಪಡೆಯಲು ಬೆಳೆ ಸಮೀಕ್ಷೆ ಮಹತ್ವದ ನೋಂದಣಿ
ಯಾಗಿದೆ.

ಕಡಿಮೆ ಪ್ಲಾಟ್‌ಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ನಮಗಿಂತಲೂ ವೇಗವಾಗಿ ಸಮೀಕ್ಷೆ ಆಗುತ್ತಿದೆ. ನಮ್ಮಲ್ಲಿ ಹೆಚ್ಚು ಪ್ಲಾಟ್‌ಗಳು ಮತ್ತು ವೈವಿಧ್ಯಮಯ ಬೆಳೆಗಳು ಇರುವುದರಿಂದ ಆ ಎಲ್ಲ ಬೆಳೆಗಳನ್ನು ದಾಖಲಿಸಬೇಕಾಗಿದೆ. ಹೀಗಿದ್ದರೂ ಸಮೀಕ್ಷೆ ಉತ್ತಮವಾಗಿ ನಡೆದಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಬೆಳೆ ಸಮೀಕ್ಷೆ ನೋಂದಣಿಗೆ ಸೆಪ್ಟೆಂಬರ್ 23ರ ವರೆಗೆ ಅವಕಾಶವಿದೆ. ಒಂದು ವೇಳೆ ಈ ಅವಧಿ ಪೂರ್ಣವಾದರೂ ಸಮೀಕ್ಷೆ ನಡೆಸದ ರೈತರ ಜಮೀನುಗಳಿಗೆ ಕೃಷಿ ಇಲಾಖೆ ನೇಮಿಸಿರುವ ಸ್ಥಳೀಯ ಪ್ರತಿನಿಧಿಗಳು ತೆರಳಿ ಸಮೀಕ್ಷೆ ಮಾಡುತ್ತಾರೆ.

ಗಣನೀಯ ಹೆಚ್ಚಳ

‘ಈಗಾಗಲೇ ಬಸ್‌ ನಿಲ್ದಾಣ, ವ್ಯವಸಾಯ ಸಹಕಾರ ಸಂಘಗಳು, ಹಾಲಿನ ಡೇರಿಗಳು– ಹೀಗೆ ಎಲ್ಲೆಡೆ ಬೆಳೆ ಸಮೀಕ್ಷೆಯ ಕುರಿತು ಮಾಹಿತಿ ನೀಡುವ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಗಣನೀಯವಾಗಿ ಸಮೀಕ್ಷೆಯ ಪ್ರಮಾಣ ಹೆಚ್ಚುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದರು.

ಈಗ ಆಟೊಗಳ ಮೂಲಕವೂ ಪ್ರಚಾರ ಮಾಡಬೇಕು ಎಂದುಕೊಂಡಿದ್ದೇವೆ. ರೈತರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಮಗೆ ನಿಗದಿಗೊಳಿಸಿರುವ ಕಾಲಮಿತಿಯೊಳಗೆ ಗುರಿ ತಲುಪುತ್ತೇವೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು