ಶುಕ್ರವಾರ, ಜುಲೈ 1, 2022
23 °C

ಸಾಲ ಪಡೆಯಲು ರೈತರ ಪರದಾಟ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಪೂರ್ವ ಮುಂಗಾರು ಮಳೆ ಚೆನ್ನಾಗಿ ಬಿದ್ದಿದೆ. ಮುಂಗಾರು ಮಳೆ ಕಾಲಿಡುತ್ತಿದ್ದು, ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಬಿತ್ತನೆಗೆ ಸಿದ್ಧತೆ ನಡೆಸಿದ್ದು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ.

ಬಿತ್ತನೆ ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಖರೀದಿಸಬೇಕಿದ್ದು, ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿ ಇರುವ ವ್ಯವಸಾಯ ಸೇವಾ ಸಹಕಾರ ಸಂಘಗಳು ಕೋವಿಡ್–19, ಲಾಕ್‌ಡೌನ್ ಮುಂದಿಟ್ಟುಕೊಂಡು ಸಾಲ ವಿತರಣೆ ನಿಧಾನ ಮಾಡುತ್ತಿರುವುದು ರೈತರನ್ನು ಹೈರಾಣಾಗಿಸಿದೆ.

ಮಾರ್ಚ್ ನಂತರ ರೈತರು ಪಡೆದ ಬೆಳೆ ಸಾಲವನ್ನು ಮುಂದಿನ ವರ್ಷಕ್ಕೆ ಮರು ಹೊಂದಾಣಿಕೆ (ರಿನಿವಲ್) ಮಾಡಿಕೊಡಲಾಗುತ್ತದೆ. ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಬ್ಯಾಂಕ್‌ನಲ್ಲಿ ಚಟುವಟಿಕೆಗಳು ನಡೆದಿಲ್ಲ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಿಂದಿನ ವರ್ಷ ಸಾಲ ಪಡೆದಿರುವ ಅರ್ಧದಷ್ಟು ರೈತರಿಗೆ ಮರು ಹೊಂದಾಣಿಕೆ ಮಾಡಿಕೊಡಲಾಗಿದೆ. ಇನ್ನೂ ಅರ್ಧಷ್ಟು ಜನರಿಗೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೈಯಲ್ಲಿರುವ ಹಣವನ್ನು ಸಾಲದ ಕಂತಿಗೆ ಕಟ್ಟಿದ ನಂತರ ತಕ್ಷಣಕ್ಕೆ ರಿನಿವಲ್ ಆಗದಿದ್ದರೆ ಏನು ಮಾಡುವುದು ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

ಸಾಲ ಮರು ಹೊಂದಾಣಿಕೆ ಮಾಡಿಕೊಡುವುದು ತಡವಾದರೆ ಅಲ್ಲಿಯವರೆಗೂ ಏನೂ ಮಾಡಬೇಕು ಎಂದು ತೊಳಲಾಡುತ್ತಿದ್ದಾರೆ. ಇತ್ತ ಹಣವೂ ಇಲ್ಲದೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗದ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಬಿತ್ತನೆಗೆ ಸಿದ್ಧತೆ ನಡೆಸುವುದು ಕಷ್ಟಕರವಾಗಿದೆ. ಮಾರ್ಚ್ ತಿಂಗಳಲ್ಲಿ ರಿನಿವಲ್ ಮಾಡಲಾಗಿದೆ. ನಂತರ ನಿಧಾನವಾಗುತ್ತಿದೆ ಎಂದು ಪಾವಗಡದ ರೈತರ ಲಕ್ಷ್ಮಣನಾಯ್ಕ ಹೇಳುತ್ತಾರೆ.

ಹೊಸದಾಗಿ ಸಾಲ ನೀಡುವುದು ಬಹುತೇಕ ಸ್ಥಗಿತಗೊಂಡಿದೆ. ರೈತರು ತಾಲ್ಲೂಕು ಕಚೇರಿಗೆ ಬಂದು ಜಮೀನಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ. ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ದಾಖಲೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ದಾಖಲೆ ಸಲ್ಲಿಸಿದ ರೈತರಿಗೆ ಬ್ಯಾಂಕ್‌ಗಳಲ್ಲೂ ಸಾಲ ಮಂಜೂರು ಮಾಡುವುದು ತಡವಾಗುತ್ತಿದೆ. ಸಾಲಕ್ಕಾಗಿ ಎದುರು ನೋಡುತ್ತಿದ್ದವರು ಬ್ಯಾಂಕ್ ಬಾಗಿಲು ಕಾಯುವಂತಾಗಿದೆ.

ವಾಣಿಜ್ಯ ಬ್ಯಾಂಕ್‌ಗಳು ಲಾಕ್‌ಡೌನ್ ನೆಪಹೇಳಿ ಸಾಲ ನೀಡುತ್ತಿಲ್ಲ. ಮುಂದೆ ನೋಡೋಣ ಎಂದು ರೈತರನ್ನು ಸಾಗಹಾಕುತ್ತಿವೆ. ಕೆಲವು ಪ್ರಭಾವಿಗಳಿಗೆ ಮಾತ್ರ ಸಾಲ ಸಿಗುತ್ತಿದೆ. ಸಣ್ಣಪುಟ್ಟ ರೈತರ ಕಡೆಗೆ ತಿರುಗಿಯೂ ನೋಡುತ್ತಿಲ್ಲ ಎಂದು ತಿಪಟೂರು ತಾಲ್ಲೂಕು ನೊಣವಿನಕೆರೆ ಗ್ರಾಮದ ರೈತ ಬಸವರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ರಾಗಿ ಹಣ: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಿದ ಸಾಕಷ್ಟು ರೈತರಿಗೆ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಈ ಹಣವಾದರೂ ಬಂದಿದ್ದರೆ ಬೇಸಾಯಕ್ಕೆ ನೆರವಾಗುತಿತ್ತು. ಇಂದು, ನಾಳೆ ಬರಬಹುದು ಎಂದು ಕಾದುಕುಳಿತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ₹90 ಕೋಟಿ ಬಾಕಿ ಹಣ ತಲುಪಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣ ಇದ್ದರೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಲು ಸಹಕಾರಿಯಾಗುತಿತ್ತು. ಒಂದು ಕಡೆ ಸಾಲ ನೀಡುವಲ್ಲಿ ತಡವಾಗುತ್ತಿರುವುದು, ಮತ್ತೊಂದು ಕಡೆ ರಾಗಿ ಮಾರಾಟ ಮಾಡಿದ ಹಣವೂ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಲದ ಬೇಡಿಕೆ

ಕೋವಿಡ್‌ನಿಂದಾಗಿ ಕಳೆದ ವರ್ಷದ ಮಾರ್ಚ್ ನಂತರ ನಗರದಲ್ಲಿ ಉದ್ಯೋಗ ಕಳೆದುಕೊಂಡವರು, ಸ್ವಂತ ಉದ್ಯೋಗ ಮಾಡುತ್ತಿದ್ದವರು ಕೆಲಸವಿಲ್ಲದೆ ದೊಡ್ಡ ಸಂಖ್ಯೆಯಲ್ಲಿ ಹಳ್ಳಿ ಸೇರಿದ್ದಾರೆ. ಗ್ರಾಮಕ್ಕೆ ಬಂದವರು ಇದ್ದಷ್ಟು ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಮತ್ತಷ್ಟು ಕೃಷಿ ವಿಸ್ತರಿಸಲು ಹಣದ ನೆರವು ಸಿಗದಾಗಿದೆ. ಹಾಗಾಗಿ ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಬೇಡಿಕೆ ಅಧಿಕವಾಗಿದೆ. ಬ್ಯಾಂಕ್‌ಗಳು ಸಹಕರಿಸದಿರುವುದು ಕಂಡು ಕೃಷಿ ನಂಬಿ ಹಳ್ಳಿಗೆ ಬಂದವರಲ್ಲಿ ನಿರಾಶೆ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು