ಸೋಮವಾರ, ಜೂನ್ 14, 2021
26 °C
ಆಂಧ್ರಪ್ರದೇಶಕ್ಕೆ ಪೆಟ್ರೋಲ್ ಪೈಪ್‌ಲೈನ್‌ ಕಾಮಗಾರಿ; ರೈತರ ವಿರೋಧ

‘ಗೋಲಿಬಾರ್‌ ಮಾಡಿ ಸಾಯಿಸುತ್ತೇವೆ; ಎಚ್ಚರಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನ ದಂಡಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಮಾಹಿತಿ ನೀಡದೆ ಪೆಟ್ರೋಲ್ ಪೈಪ್‌ಲೈನ್ ಕಾಮಗಾರಿ ಮಾಡುತ್ತಿದ್ದು, ಅದನ್ನು ರೈತರು ವಿರೋಧಿಸಿದ ಕಾರಣ ಕಾಮಗಾರಿ ನಿಲ್ಲಿಸಲಾಗಿದೆ.

ಮಂಗಳೂರಿನಿಂದ ಆಂಧ್ರಪ್ರದೇಶದ ಚರ್ಲೆಪಲ್ಲಿ ಗ್ರಾಮಕ್ಕೆ ಪೈಪ್‌ಲೈನ್ ಕಾಮಗಾರಿ ಮಾಡಲಾಗುತ್ತಿದೆ. ಪರಿಹಾರ ನೀಡದೆ ಕಾಮಗಾರಿ ನಡೆಸಬಾರದು ಎಂದು ರೈತರು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿ ವಾಪಸ್‌ ಹೋದರು.

ರೈತರಿಗೆ ಮಾಹಿತಿ ಇಲ್ಲ: ‘ಕಾಮಗಾರಿ ಬಗ್ಗೆ ಯಾವುದೇ ಮಾಹಿತಿ ಇಲ್ಲ.  ಚಿತ್ರದುರ್ಗ ಜಿಲ್ಲೆಯ ಮಧ್ಯವರ್ತಿಯೊಬ್ಬರು ಪರಿಹಾರ ಕೊಡಿಸುವುದಾಗಿ ರೈತರಿಂದ ಪಹಣಿ ಮತ್ತು ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದರು. ರೈತರ ಸಭೆ ನಡೆಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ’ ಎಂದು ರೈತರು ಆರೋಪಿಸುತ್ತಾರೆ.

‘ಇದು ಕೇಂದ್ರ ಸರ್ಕಾರದ ಯೋಜನೆ. ಅಡ್ಡಿ ಮಾಡಿದರೆ ಗೋಲಿಬಾರ್ ನಡೆಸಿ ಕಾಮಗಾರಿ ಮುಂದುವರಿಸಲಾಗುವುದು’ ಎಂದು ಗುತ್ತಿಗೆದಾರರು ಬೆದರಿಸಿದ್ದಾರೆ. ಸುಮಾರು ಅರ್ಧ ಕಿ.ಮೀ ಜಮೀನಿನಲ್ಲಿದ್ದ ಶೇಂಗಾವನ್ನು ಜೆಸಿಬಿಯಿಂದ ಹಾಳು ಮಾಡಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ.

ಸ್ಥಳಕ್ಕೆ ಬಂದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ‘ಕಾಮಗಾರಿ ನಡೆಸಲು ಯಾರು ಅನುಮತಿ ನೀಡಿದ್ದಾರೆ. ದಾಖಲೆ ನೀಡಿ’ ಎಂದರು. ಗುತ್ತಿಗೆದಾರರು ನೀಡಿದ ದಾಖಲೆಯಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ರೈತರನ್ನು ಸಭೆಗೆ ಸ್ವಾಗತ ಕೋರಿರುವ ಪತ್ರ ಮಾತ್ರ ಇದ್ದಿತು. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಕರೆ ಮಾಡಿ ವಿಚಾರಿಸಿದರು. ‘ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಯಾವುದೇ ಸಭೆ ನಡೆಸಿಲ್ಲ’ ಎಂದು ತಹಶೀಲ್ದಾರ್‌ ಪ್ರತಿಕ್ರಿಸಿದರು.

***

ಪರಿಹಾರ ನೀಡಿ ಕಾಮಗಾರಿ ಮಾಡಿ

ತಾವರೆಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುಣಸೇಹಳ್ಳಿ, ದಂಡಿಕೆರೆ, ಡ್ಯಾಗೇರಹಳ್ಳಿ, ನಾರಾಯಣಪುರ, ಹೆರವರಹಳ್ಳಿ, ಹೇರೂರು, ಹೊಸೂರು, ಚಂಗಾವರ ಮಾರ್ಗವಾಗಿ ಪೈಪ್‌ಲೈನ್ ಹಾದುಹೋಗುವುದಾಗಿ ಗುತ್ತಿಗೆದಾರರು ಹೇಳುತ್ತಾರೆ.

‘ನನ್ನ ಜಮೀನಿನ ಮಾರ್ಗದಲ್ಲೂ ಕಾಮಗಾರಿಗೆ ನಡೆಯಲಿದೆ. ಆದರೆ ಇದುವರೆಗೂ ನೋಟಿಸ್ ಮತ್ತು ಪರಿಹಾರ ನೀಡಿಲ್ಲ’ ಎಂದು ಕಲ್ಕೆರೆ ರವಿಕುಮಾರ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.