ಸೋಮವಾರ, ನವೆಂಬರ್ 23, 2020
22 °C

ಪಾವಗಡ: ಕೆಲಸ ನೀಡಲು ಆಗ್ರಹಿಸಿ ಅನ್ನದಾತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಸೋಲಾರ್ ಕಂಪನಿಯೇ ನೇರವಾಗಿ ರೈತರಿಗೆ ಸೋಲಾರ್ ಮಾಡ್ಯುಲ್ ಸ್ವಚ್ಛತೆ, ಹುಲ್ಲು ಕಟಾವು ಕೆಲಸ ನೀಡಬೇಕು ಎಂದು ಒತ್ತಾಯಿಸಿ 21ನೇ ಬ್ಲಾಕ್‌ಗೆ ಜಮೀನು ನೀಡಿರುವ ರೈತರು ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸೋಲಾರ್ ಪಾರ್ಕ್‌  21ನೇ ಬ್ಲಾಕ್‌ನ ಟಾಟಾ ಪವರ್ ಸೋಲಾರ್ ಕಂಪನಿಯು ಸಿದ್ಧಾರ್ಥ ಕಂಪನಿಗೆ ನಿರ್ವಹಣೆಯ ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ರೈತರಿಗೆ ಸ್ವಚ್ಛತೆ, ಹುಲ್ಲು ಕಟಾವು ಕೆಲಸ ಕೊಡದೆ ಸತಾಯಿಸುತ್ತಿದೆ. ಕೆಲಸ ಕೇಳಲು ಹೋದ ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ರೈತರು ಆರೋಪಿಸಿದರು.

ಆರಂಭದಲ್ಲಿ ಜಮೀನು ಪಡೆಯುವಾಗ ರೈತರಿಗೆ ಕೆಲಸ ನೀಡುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದರು. ಆದರೆ, ಕಂಪನಿ ನೇರವಾಗಿ ಕೆಲಸ ನೀಡುತ್ತಿಲ್ಲ. ಕೆಲಸ ಕೊಡುವಂತೆ ಕೇಳಲು ಹೋಗುವ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ರೈತರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ಅನ್ನದಾತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಟಾಟಾ ಕಂಪನಿಯವರೆ ನೇರವಾಗಿ ರೈತರಿಗೆ ಸ್ವಚ್ಛತೆ, ಹುಲ್ಲು ಕಟಾವು ಕೆಲಸ ನೀಡಬೇಕು. ರೈತರ ಮೇಲೆ ದಬ್ಬಾಳಿಕೆ ನಡೆಸುವ ಕಂಪನಿಯನ್ನು 21ನೇ ಬ್ಲಾಕ್‌ನಿಂದ ಹೊರಗಿಡಬೇಕು. ಬಾಡಿಗೆ ಹಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಶ್ರೀಕಾಂತ್, ಅಮರೇಂದ್ರ, ನಾಗರಾಜು, ಮಾರುತಿ, ಅರುಣ್, ರಾಮಾಂಜಿ, ಶ್ರೀಧರ್, ಅಕ್ಕಲಪ್ಪ, ಪೂಜಾರಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.