ಶುಕ್ರವಾರ, ಡಿಸೆಂಬರ್ 4, 2020
24 °C
ತಿಪಟೂರು ತಾಲ್ಲೂಕಿನಲ್ಲಿ ಯೋಜನೆಗಾಗಿ 1,200 ಹೆಕ್ಟೇರ್‌ ಭೂಮಿ ಬಳಕೆ

ತಿಪಟೂರು: ಎತ್ತಿನಹೊಳೆ ನೀರಿಗಾಗಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸಬೇಕು ಹಾಗೂ ಭೂ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಾಗತೀಹಳ್ಳಿ ಗೇಟ್‍ನಿಂದ ಬಿದಿರೆಗುಡಿ ಮಾರ್ಗವಾಗಿ ತಿಪಟೂರು ಉಪ ವಿಭಾಗಾಧಿಕಾರಿ ಕಚೇರಿವರೆಗೆ ಎತ್ತಿನಹೊಳೆ ಹೋರಾಟ ಸಮಿತಿ ನೇತೃತ್ವದಡಿ ಕಾಲ್ನಡಿಗೆ ಜಾಥಾ ನಡೆಯಿತು.

ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ಯೋಜನೆಯ ಪ್ರಾರಂಭದಿಂದಲೂ ರೈತರಿಗೆ ಹಸಿ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ. ಜನಪ್ರತಿನಿಧಿಗಳು ಗುತ್ತಿಗೆದಾರರ ಪರವಾಗಿದ್ದಾರೆ. ಅವರು ರೈತರ ಪರವಾಗಿಲ್ಲ ಎಂದು
ದೂರಿದರು.

ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭೂಮಿ ಕಳೆದುಕೊಂಡು ರೈತರು ಅತಂತ್ರ ಸ್ಥಿತಿಗೆ ತಲುಪಲಿದ್ದಾರೆ. ನೀರಿನ ಹಂಚಿಕೆಯಾಗದಿದ್ದರೆ ರೈತರು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ. ಭೂಮಿ ವಶಪಡಿಸಿಕೊಳ್ಳುವುದಕ್ಕೂ ಮೊದಲೇ ರೈತರಿಗೆ ಬರಬೇಕಾದಂತಹ ಪರಿಹಾರದ ಮೊತ್ತ ನೀಡಿದರೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು.

ಯೋಜನೆಯ ಕಾಮಗಾರಿ ಮುಗಿದ ನಂತರದಲ್ಲಿ ರೈತರು ಪರಿಹಾರಕ್ಕಾಗಿ ಅಲೆದಾಡುವುದು, ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಬೇಕು. ರೈತರ ಭೂಮಿಗೆ ಪರಿಹಾರ ಹಾಗೂ ತಾಲ್ಲೂಕಿನ ಕೆರೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು ಒತ್ತಾಯಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಎಸ್.ಎನ್. ಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಗಾಗಿ 1,200 ಹೆಕ್ಟೇರ್ ಭೂಮಿ ಬಳಕೆಯಾಗುತ್ತಿದ್ದು, ನೂರಾರು ರೈತರು ಸಂತ್ರಸ್ತರಾಗುತ್ತಿದ್ದಾರೆ. ಆದರೆ, ಹನಿ ನೀರು ತಾಲ್ಲೂಕಿಗೆ ಹಂಚಿಕೆಯಾಗಿಲ್ಲ. ರಾಜಕಾರಣಿಗಳು ಮಾತ್ರ ತಾಲ್ಲೂಕಿಗೆ 2 ಟಿಎಂಸಿ ನೀರು ಹಂಚಿಕೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.  

ಬಿದರೆಗುಡಿಯ ಬಳಿಗೆ ತಹಶೀಲ್ದಾರ್ ಚಂದ್ರಶೇಖರ್ ಆಗಮಿಸಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ನ. 3ರಂದು ಮಧ್ಯಾಹ್ನ 12ಗಂಟೆಗೆ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಹಾಗಾಗಿ, ರೈತರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಜಿ. ನಾರಾಯಣ್, ರೈತ ಸಂಘದ ಮುಖಂಡ ಯೋಗಣ್ಣ, ಜನಸ್ಪಂದನ ಟ್ರಸ್ಟ್‌ ಅಧ್ಯಕ್ಷ ಸಿ.ಬಿ. ಶಶಿಧರ್, ಕುಂದೂರು ತಿಮ್ಮಯ್ಯ, ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ವಿಜಯ ಕುಮಾರ್, ಮನೋಹರ್ ಪಾಟೀಲ್, ಶ್ರೀಕಾಂತ್ ಕೆಳಹಟ್ಟಿ, ಮುಖಂಡ ಚಂದ್ರೇಗೌಡ, ಡಿಎಸ್‍ಎಸ್‌ನ ಕೃಷ್ಣಮೂರ್ತಿ, ತಿಪಟೂರು ಲೈಫ್‍ನ ರೇಣುಕಾರಾಧ್ಯ, ಬಿ.ಬಿ. ಸಿದ್ದಲಿಂಗಮೂರ್ತಿ ಸೇರಿದಂತೆ ನೂರಾರು ರೈತರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.