ತುಮಕೂರು: ಕೃಷಿ ಪಂಪ್‌ಸೆಟ್‌ಗಳ ಆರ್.ಆರ್ ನಂಬರ್‌ಗೆ ಆಧಾರ್ ಜೋಡಣೆ ಕೈಬಿಡುವುದು ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ಕೃಷಿ ಕೊಳವೆ ಬಾವಿಗಳಿಗೆ ಬೆಸ್ಕಾಂ ವತಿಯಿಂದ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ 2023ರಲ್ಲಿ ಈ ಸೌಲಭ್ಯವನ್ನು ಸರ್ಕಾರ ರದ್ದುಪಡಿಸಿದೆ. ವಿದ್ಯುತ್ ಸಂಪರ್ಕಕ್ಕೆ ಬೇಕಾದ ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬ, ವೈರ್‌ಗಳು, ಇತರೆ ಪರಿಕರಗಳನ್ನು ರೈತರೇ ಖರೀದಿಸುವಂತಾಗಿದೆ. ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು ದುಬಾರಿಯಾಗಿ ಪರಿಣಮಿಸಿದ್ದು, ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳಿಗೆ ಸಹಾಯ ಧನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಈ ಜವಾಬ್ದಾರಿಯನ್ನೇ ಮರೆತು ವರ್ತಿಸುತ್ತಿದೆ ಎಂದು ಆರೋಪಿಸಿದರು.
ಉಚಿತವಾಗಿ ವಿದ್ಯುತ್ ನೀಡುವ ಯೋಜನೆ ಜಾರಿ ಮಾಡಿದ ನಂತರ ಯೂನಿಟ್ ದರವನ್ನು ಹೆಚ್ಚಿಸಿದ್ದು, ಜನರಿಗೆ ಸಾಕಷ್ಟು ಹೊರೆಯಾಗಿ ಪರಿಣಮಿಸಿದೆ. ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ, ಮುಖಂಡರಾದ ಶಿವರತ್ನಮ್ಮ, ಜಿ.ವಿ.ಲೋಕೇಶ್, ಟಿ.ತೋಂಬಾರಾಧ್ಯ, ನಾಗಣ್ಣ, ಲೋಕಣ್ಣ, ಎ.ವಿ.ಪುಟ್ಟರಾಜು, ಸಿದ್ದರಾಜು ಇತರರು ಭಾಗವಹಿಸಿದ್ದರು.
* ಕೃಷಿ ಪಂಪ್‌ಸೆಟ್ ಆರ್.ಆರ್ ನಂಬರ್‌ಗೆ ಆಧಾರ್ ನಂಬರ್ ಜೊಡಿಸಿ, ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸುವ ಯೋಜನೆ ಜಾರಿ ಮಾಡಬಾರದು.
* ಕೊಳವೆ ಬಾವಿಗಳಿಗೆ 2023ರಿಂದ ಜಾರಿಗೊಳಿಸಿರುವ ನಿಯಮ ರದ್ದುಪಡಿಸಬೇಕು. ಹಿಂದಿನಂತೆ ಟ್ರಾನ್ಸ್‌ಫಾರ್ಮರ್, ಕಂಬ, ವೈರು, ಇತರೆ ಉಪಕರಣಗಳನ್ನು ಇಲಾಖೆಯಿಂದಲೇ ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ನೀಡಬೇಕು.
* ಮನೆ ಬಳಕೆಗೆ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆ ಜಾರಿಮಾಡಿದ ನಂತರ ಹೆಚ್ಚಿಸಿರುವ ಯೂನಿಟ್ ದರ ಕಡಿಮೆ ಮಾಡಬೇಕು.
* ವಿದ್ಯುತ್ ಅವಘಡಗಳಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಕೊಡಬೇಕು.
* ಸೋಲಾರ್ ಸಂಪರ್ಕ ಹೊಂದುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಆದೇಶ ಕೈಬಿಡಬೇಕು.
* ಕೃಷಿ ಚಟುವಟಿಕೆಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು. ಪ್ರಕರಣ ದಾಖಲಿಸಿ ರೈತರಿಗೆ ತೊಂದರೆ ಕೊಡಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.