ಹುಳಿಯಾರು:ಮಳೆಯನ್ನೂ ಲೆಕ್ಕಿಸದೆ ಮಾರಾಟಕ್ಕೆ ಮುಂದಾದ ರೈತರು

ಹುಳಿಯಾರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿದ್ದು, ರೈತರು ಮಳೆಯನ್ನೂ ಲೆಕ್ಕಿಸದೆ ಕಿ.ಮೀ ಗಟ್ಟಲೇ ಸಾಲಿನಲ್ಲಿ ಟ್ರಾಕ್ಟರ್‌ಗಳನ್ನು ನಿಲ್ಲಿಸಿಕೊಂಡು ಮಾರಾಟಕ್ಕೆ ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯ ಮರಾಟ ಮಹಾ ಮಂಡಳಿ ರಾಗಿ ಖರೀದಿಯನ್ನು ಕಳೆದೆರಡು ದಿವಸಗಳಿಂದ ಆರಂಭಿಸಿದೆ. ರೈತರು ಎಸ್‌ಎಲ್‌ಆರ್ ಪೆಟ್ರೋಲ್ ಬಂಕ್ ತಿರುವಿನಿಂದ ಎಪಿಎಂಸಿವರೆಗೆ ರಾಗಿ ತುಂಬಿದ ಸುಮಾರು 80 ಟ್ರ್ಯಾಕ್ಟರ್‌ಗಳು ಪ್ರತಿದಿನ ನಿಲ್ಲುತ್ತವೆ. ಹೆದ್ದಾರಿಯಲ್ಲಿಯೇ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿಕೊಂಡು ಮಳೆ, ಚಳಿ, ಗಾಳಿಯನ್ನು ಅನುಭವಿಸುತ್ತಾ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆ ಬಂದರಂತೂ ರಸ್ತೆಯಲ್ಲಿ ರಾಗಿ ಹಾಗೂ ತಾವು ನೆನೆಯದಂತೆ ಸುರಕ್ಷತೆ ವಹಿಸುವುದೇ ದೊಡ್ಡ ಸವಾಲಾಗಿದೆ.
ಪ್ರತಿ ಬಾರಿ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಮುಂಗಡವಾಗಿ ಟೋಕನ್ ನೀಡಿ ಮಾರಾಟದ ದಿನಾಂಕವನ್ನೂ ಕೊಡಲಾಗುತ್ತಿತ್ತು. ಆದರೆ ಈ ಬಾರಿ ಸಾಲಿನಲ್ಲಿ ಮಾರಾಟ ಮಳಿಗೆ ಬಳಿ ನಿಲ್ಲುವ ಟ್ರ್ಯಾಕ್ಟರ್‌ಗಳಿಗೆ ನಂಬರ್ ನೀಡಲಾಗುತ್ತಿದೆ. ಇದರಿಂದ ರೈತರು ನಾ ಮುಂದು ತಾ ಮುಂದು ಎಂದು ಸರದಿ ಸಾಲಿನಲ್ಲಿ ಟ್ರ್ಯಾಕ್ಟರ್‌ಗಳನ್ನು ತಂದು ನಿಲ್ಲಿಸುತ್ತಾರೆ.
ಎಪಿಎಂಸಿ ಮಳಿಗಳನ್ನು ಸುತ್ತುವರೆದು ನಿಲ್ಲುವ ಅವಕಾಶ ನೀಡಿದ್ದರೆ ರಸ್ತೆಯಲ್ಲಿ ಟ್ರ್ಯಾಕ್ಟರ್ ನಿಲ್ಲಿಸುವುದು ತಪ್ಪುತ್ತಿತ್ತು. ಎಪಿಎಂಸಿಯೊಳಗೆ ಎರಡು- ಮೂರು ಸುತ್ತು ನಿಲ್ಲಿಸಿಕೊಂಡು ಮಳಿಗೆಗಳ ಮುಂದಿನ ಹಜಾರದಲ್ಲಿ ರೈತರು ರಕ್ಷಣೆ ಪಡೆಯುತ್ತಿದ್ದರು. ಆದರೆ ಈ ಬಾರಿ ಒಳಗೆ ಬರಲು ಅವಕಾಶ ನೀಡುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.