ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಅಂಬು ಕಡಿದ ಮೊದಲ ಮಹಿಳೆ

Last Updated 8 ಅಕ್ಟೋಬರ್ 2019, 19:32 IST
ಅಕ್ಷರ ಗಾತ್ರ

ಶಿರಾ: ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬನ್ನಿಮಂಟಪದಲ್ಲಿ ಮಹಿಳೆಯೊಬ್ಬರು ಅಂಬು ಕಡೆಯುವ ಮೂಲಕ ವಿಜಯದಶಮಿ ಆಚರಣೆಗೆ ಚಾಲನೆ ನೀಡಿದರು.

ಮುಸ್ಲಿಂ ಧರ್ಮಕ್ಕೆ ಸೇರಿದ ನಹಿದಾ ಜಮ್‌ಜಮ್ ಶಿರಾ ತಾಲ್ಲೂಕು ತಹಶೀಲ್ದಾರ್ ಆಗಿದ್ದು, ಅವರು ದಸರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದು ಜನರ ಮೆಚ್ಚುಗೆ ಗಳಿಸಿತು.

ನಗರದ ಬನ್ನಿನಗರದಲ್ಲಿರುವ ಬನ್ನಿಮಂಟಪದಲ್ಲಿ ದಸರಾ ಸಡಗರದ 10ನೇ ದಿನವಾದ ಮಂಗಳವಾರ ವಿಜಯದಶಮಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ನಗರದ ಗ್ರಾಮ ದೇವತೆ ದುರ್ಗಮ್ಮ, ನಾರಾಯಣಸ್ವಾಮಿ, ಆಂಜನೇಯ, ಅಂಬಾ ಭವಾನಿ ಮೊದಲಾದ ದೇವರ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬನ್ನಿಮಂಟಪಕ್ಕೆ ಕರೆತರಲಾಯಿತು. ತಹಶೀಲ್ದಾರ್ ನಹಿದಾ ಜಮ್‌ಜಮ್ ಅಂಬು ಕಡಿಯುವ ಮೂಲಕ ಬನ್ನಿಮಂಟಪದಲ್ಲಿ ವಿಜಯದಶಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಂಡೋಪ ತಂಡವಾಗಿ ಇಲ್ಲಿಗೆ ಬಂದ ನಾಗರಿಕರು ಉತ್ಸವ ಕಂಡು ಪುಳಕಿತರಾದರು. ದೇವರುಗಳಿಗೆ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ವಿನಿಯಯ ಮಾಡಿಕೊಂಡು ಶುಭ ಕೋರಿದರು.

ತಹಶೀಲ್ದಾರ್ ನಹಿದಾ ಜಮ್‌ಜಮ್ ಮಾತನಾಡಿ, ವಿಜಯದಶಮಿ ಹಬ್ಬದ ದಿನ ಪೂಜೆ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದು, ತಾಲ್ಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಜನತೆಗೆ ದೇವಿ ಒಳ್ಳೆಯದನ್ನು ಮಾಡಲಿ ಎಂದರು.

ಪ್ರತಿ ವರ್ಷದಂತೆಯೇ ಈ ವರ್ಷವೂ ದಸರಾ ಆಚರಣೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ನಿತ್ಯ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಕಣ್ಮನ ತಣಿಸಿತು. ಜೊತೆಗೆ ನವರಾತ್ರಿ ಅಂಗವಾಗಿ ಮಾಡಿದ್ದ ದೀಪಾಲಂಕಾರ ಜನರನ್ನು ಆಕರ್ಷಿಸಿತು. ದಸರಾ ಆಚರಣೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು. ದುರ್ಗಮ್ಮ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT