ಶುಕ್ರವಾರ, ನವೆಂಬರ್ 22, 2019
27 °C
ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಳ

ತುಮಕೂರು ನಗರ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನರ ಮಲಗಿಸಿದ ವೈರಲ್ ಜ್ವರ

Published:
Updated:
Prajavani

ತುಮಕೂರು: ವಾತಾವರಣ ವೈಪರೀತ್ಯ ತುಮಕೂರು ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನಾರೋಗ್ಯ ಹೆಚ್ಚಿಸಿದೆ. ಅದರಲ್ಲಿಯೂ ವೈರಲ್ ಜ್ವರ ನಾಗರಿಕರನ್ನು ಹೈರಾಣು ಮಾಡಿದೆ.

ನೆಗಡಿ, ಜ್ವರ, ಕೆಮ್ಮು, ತೀವ್ರ ಆಯಾಸ, ಮೈ ಕೈ ನೋವು, ತಲೆನೋವು, ಮೂಗು ಕಟ್ಟುವುದು, ಗಂಟಲು ಉರಿ ಪೀಡಿತರು ಚಿಕಿತ್ಸೆಗಾಗಿ ಆಸ್ಪತ್ರೆಗಳತ್ತ ಎಡತಾಕುತ್ತಿದ್ದಾರೆ.

ಜ್ವರ, ಕೆಮ್ಮು, ನೆಗಡಿ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಮ್ಮೆ ಆಸ್ಪತ್ರೆಗಳ ಅಂಗಳ ಸುತ್ತು ಹಾಕಿದರೆ ಬಹುತೇಕ ಮಂದಿ ಈ ವೈರಲ್ ರೋಗ ಪೀಡಿತರೇ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾ ಆಸ್ಪತ್ರೆಯವರೆಗೆ ಹಾಗೂ ಕ್ಲಿನಿಕ್‌ಗಳು, ಖಾಸಗಿ ನರ್ಸಿಂಗ್ ಹೋಂಗಳಲ್ಲಿ ರೋಗಿಗಳು ಸಾಮಾನ್ಯ ದಿನಗಳಿಗಿಂತ ಹೆಚ್ಚಿದ್ದಾರೆ. ಅದರಲ್ಲಿಯೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಜ್ವರಕ್ಕೆ ಬೇಗ ತುತ್ತಾಗುತ್ತಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸಾಮಾನ್ಯ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ ಒಂದು ಸಾವಿರ ರೋಗಿಗಳು ಚಿಕಿತ್ಸೆಗೆ ಚೀಟಿ ಪಡೆಯುತ್ತಿದ್ದರು. ಆದರೆ ವೈರಲ್ ಜ್ವರದ ಪರಿಣಾಮ ಆ ಸಂಖ್ಯೆ ಒಂದೂವರೆಯಿಂದ ಎರಡು ಸಾವಿರಕ್ಕೆ ಹೆಚ್ಚಿದೆ.

ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ನಗರದಲ್ಲಿ ಕಳೆದ ಕೆಲವು ದಿನಗಳಿಂದ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಇದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡದ ವಾತಾವರಣ ಇದೆ.

ಎರಡು ದಿನಗಳ ಹಿಂದೆ ನಗರದಲ್ಲಿ ತುಂತುರು ಮಳೆ ಸಹ ಸುರಿದಿತ್ತು. ಈಗಲೂ ಜಿಲ್ಲೆಯಲ್ಲಿ ಚದುರಿದಂತೆ ಸೋನೆ ಮಳೆ ಆಗುತ್ತಿದೆ. ಈ ಮಳೆ ಮತ್ತು ಮೋಡದ ವಾತಾವರಣ ವೈರಲ್ ಜ್ವರಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವುದು ತಜ್ಞ ವೈದ್ಯರ ಮಾತು.

ಮನೆಯಲ್ಲಿ ಒಬ್ಬರಲ್ಲ ಒಬ್ಬರಿಗೆ ಕೆಮ್ಮು, ಜ್ವರ ಇಲ್ಲವೆ ನೆಗಡಿ ಬಂದರೆ ಅದು ತಕ್ಷಣವೇ ಇತರರಿಗೆ ಹರಡುತ್ತಿದೆ. ಒಬ್ಬರಾದ ನಂತರ ಮತ್ತೊಬ್ಬರು ರೋಗಿಗಳಾಗಿ ಹಾಸಿಗೆ ಹಿಡಿಯುತ್ತಿದ್ದಾರೆ.

ಗಾಳಿ ಮತ್ತು ನೀರಿನ ಮೂಲಕ ವೈರಲ್ ಜ್ವರ ಹರಡುವುದರಿಂದ ನಿಯಂತ್ರಣವೂ ವೈದ್ಯರಿಗೆ ಸವಾಲಾಗಿದೆ. ಹಲವು ವೈದ್ಯರು ಕೆಮ್ಮುತ್ತಲೇ ಚಿಕಿತ್ಸೆ ನೀಡುತ್ತಿದ್ದಾರೆ! ಚಿಕಿತ್ಸೆಯ ಜತೆಗೆ ಮನೆಯಲ್ಲಿ ಅನುಸರಿಸಬೇಕಾದ ಪ್ರಾಥಮಿಕ ಕ್ರಮಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ.

‘ಮಳೆಗಾಲ ಆರಂಭದಲ್ಲಿಯೇ ನಾವು ಡೆಂಗಿ, ಚಿಕೂನ್ ಗೂನ್ಯಾ ಹೀಗೆ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಮನೆ ಸುತ್ತ ಸೊಳ್ಳೆಗಳ ಆವಾಸ ಸ್ಥಾನಗಳು ಹೆಚ್ಚಾಗದ ರೀತಿ ಕ್ರಮ ವಹಿಸಿ ಎಂದು ಸಲಹೆ ನೀಡಿದ್ದೆವು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ.

‘ಎಳೆನೀರು ಬುರುಡೆ, ಕುಂಡ, ಟೈರ್‌ಗಳು, ಬಾಟಲಿಗಳಲ್ಲಿ ಹೀಗೆ ನೀರು ಸಂಗ್ರಹವಾಗುವ ಕಡೆಗಳಲ್ಲಿ ಲಾರ್ವಾ ಬೆಳೆಯುತ್ತದೆ. ಇದನ್ನು ತಡೆಗಟ್ಟಬೇಕಾಗಿದೆ. ಅಲ್ಲದೆ ಈಗ ವೈರಲ್ ಜ್ವರವೂ ಜಿಲ್ಲೆಯಲ್ಲಿ ಹರಡಿದೆ. ನಾಗರಿಕರೇ ಸೂಕ್ತವಾಗಿ ಎಚ್ಚರವಹಿಸಿದರೆ ವೈರಲ್ ಜ್ವರ ನಿಯಂತ್ರಣ ನಿಯಂತ್ರಿಸಬಹುದು’ ಎಂದರು.

ಮಾಸ್ಕ್ ಧರಿಸಿ ಸಂಚರಿಸಿ

‘ಮಧುಮೇಹ, ಎಚ್‌ಐವಿ ಹೀಗೆ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ವೈರಲ್ ಜ್ವರ ಬೇಗ ತಗಲುತ್ತಿದೆ. ನಗರದಲ್ಲಿ ದೂಳು ಸಹ ಹೆಚ್ಚಾಗಿದೆ. ದೂಳಿನ ಕಾರಣದಿಂದಲೂ ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ. ಆದ್ದರಿಂದ ಜನರು ಮಾಸ್ಕ್ ಧರಿಸಿ ಓಡಾಡುವುದು ಉತ್ತಮ’ ಎಂದು ಸಲಹೆ ನೀಡುವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ.

‘ಹವಾನಿಯಂತ್ರಿತ ಕೊಠಡಿಗಳಲ್ಲಿ ಇದ್ದವರಿಗೂ ವೈರಲ್ ಜ್ವರ ತಗುಲುತ್ತಿದೆ. ಕೆಲವು ಮಕ್ಕಳು ಉತ್ಸಾಹದಲ್ಲಿ ಥಂಡಿಯಲ್ಲಿ ಓಡಾಡುವರು, ಸೋನೆಯಲ್ಲಿ ನೆನೆಯುವರು. ಖಂಡಿತವಾಗಿಯೂ ಇಂತಹದ್ದನ್ನು ಮಾಡಬಾರದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

‘ರೋಗಪೀಡಿತರು ಆದಷ್ಟು ಕೈ ಅಡ್ಡ ಇಟ್ಟು ಸೀನಿದರೆ ಒಳ್ಳೆಯದು. ಯೋಗ ಮಾಡುವುದರಿಂದಲೂ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು’ ಎಂದು ಹೇಳಿದರು.

ಅಕ್ಟೋಬರ್ ಕೊನೆಯವರೆಗೆ ಈ ವಾತಾವರಣ

‘ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಜುಲೈನಿಂದ ಅಕ್ಟೋಬರ್ ಕೊನೆಯವರೆಗೂ ಇದೇ ವಾತಾವರಣ ಇರುತ್ತದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ತಿಳಿಸಿದರು.

ಸಾಮಾನ್ಯವಾಗಿ 12 ವರ್ಷದ ಒಳಗಿನ ಮತ್ತು 55 ವರ್ಷದ ಮೇಲಿನವರಿಗೆ ವೈರಲ್ ಜ್ವರ ಬೇಗ ತಗುಲುತ್ತದೆ. ಅಕ್ಟೋಬರ್ ಕೊನೆಯವರೆಗೂ ಇದೇ ವಾತಾವರಣ ಇರುತ್ತದೆ. ಬಿಸಿಲು ಹೆಚ್ಚಾದ ನಂತರ ರೋಗ ಕಡಿಮೆ ಆಗುತ್ತದೆ ಎಂದರು.

ಪ್ರಾಥಮಿಕ ಮತ್ತು ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿಯೂ ರೋಗಿಗಳು ಹೆಚ್ಚುತ್ತಿದ್ದಾರೆ. ಜ್ವರ ಪೀಡಿತರು ಕಾಯಿಸಿ ಆರಿಸಿದ ನೀರನ್ನು ಹೆಚ್ಚು ಕುಡಿಯಬೇಕು. ದೂಳು, ಜನದಟ್ಟಣೆ ಪ್ರದೇಶಗಳಿಗೆ ಹೋಗ ಬಾರದು ಎಂದು ಸಲಹೆ ನೀಡಿದರು.

ಎರಡು ಪಟ್ಟು ಹೆಚ್ಚಳ

‘ಸಾಮಾನ್ಯ ದಿನಗಳಿಗಿಂತ ಕಳೆದ 10ರಿಂದ 15 ದಿನಗಳಲ್ಲಿ ಮಕ್ಕಳನ್ನು ಚಿಕಿತ್ಸೆಗೆ ಕರೆದುಕೊಂಡು ಬರುವ ಪೋಷಕರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ’ ಎನ್ನುವರು ದ್ವಿತಿ ಕ್ಲಿನಿಕ್‌ನ ಮಕ್ಕಳ ವೈದ್ಯ ಡಾ.ಅಶೋಕ್.

ಗಾಳಿಯಿಂದ ರೋಗ ಹರಡುತ್ತದೆ. ಇದನ್ನು ತಡೆಯುವುದು ತೀರಾ ಕಷ್ಟ. ಆದರೆ ಗಂಭೀರವಾದ ಕಾಯಿಲೆಗಳೇನಲ್ಲ. ನಾಲ್ಕೈದು ದಿನ ಜ್ವರ, ಕೆಮ್ಮು ನೆಗಡಿ ಇರುತ್ತದೆ. ನಂತರ ಗುಣವಾಗುತ್ತದೆ ಎಂದರು.

ಮಕ್ಕಳಿಗೆ ವೈರಲ್ ಬೇಗ ತಗುಲುತ್ತದೆ. ಆದ್ದರಿಂದ ಪೋಷಕರು ಆದಷ್ಟು ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಅಲ್ಲಿ ಯಾವುದೇ ಮಕ್ಕಳಿಗೆ ವೈರಲ್ ಜ್ವರ ಇದ್ದರೆ ಅದು ಆರೋಗ್ಯ ಪೀಡಿತ ಮಗುವಿಗೂ ತಗುಲುತ್ತದೆ ಎಂದು ಹೇಳಿದರು.

 ‘ಪ್ರತಿ ವರ್ಷದ ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಈ ರೀತಿಯ ಕಾಯಿಲೆಗಳು ಸಾಮಾನ್ಯ. ಅಕ್ಟೋಬರ್ ಅಂತ್ಯಕ್ಕೆ ಕಡಿಮೆ ಆಗಬಹುದು’ ಎಂದರು.

ಕೈಗೊಳ್ಳಬೇಕಾದ ಮುಂಜಾಗ್ರತೆ

* ಕಾಯಿಸಿ ಆರಿಸಿದ ನೀರು ಕುಡಿಯುವುದು ಉತ್ತಮ

* ಮಕ್ಕಳನ್ನು ಜನ ಹೆಚ್ಚಿರುವ ಕಡೆ ಕರೆದೊಯ್ಯದಿರುವುದು ಉತ್ತಮ

* ಈಗಾಗಲೇ ಸೋಂಕು ತಗುಲಿದವರಿಂದ ದೂರವಿರುವುದು

* ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಬೇಕು

* ಶುದ್ಧ ನೀರು ಸೇವನೆ

* ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು

*ಮನೆಯ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು

* ಕೆಮ್ಮುವಾಗ, ಸೀನುವಾಗ ಕೈ ಅಥವಾ ಬಟ್ಟೆಯನ್ನು ಅಡ್ಡ ಇಟ್ಟುಕೊಳ್ಳಬೇಕು

ಪ್ರತಿಕ್ರಿಯಿಸಿ (+)