ಸೋಮವಾರ, ಸೆಪ್ಟೆಂಬರ್ 16, 2019
21 °C
ಮಹಾನಗರ ಪಾಲಿಕೆ 22ನೇ ವಾರ್ಡ್‌ ಗೆ ಉಪ ಚುನಾವಣೆ;

ಟಿಕೆಟ್‌ಗೆ ಜೆಡಿಎಸ್‌ನಲ್ಲಿ ಶುರುವಾದ ಫೈಟ್

Published:
Updated:

ತುಮಕೂರು: ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗೆ ಚುನಾವಣೆ ಹಾಗೂ ತುಮಕೂರು ಮಹಾನಗರ ಪಾಲಿಕೆಯ 22ನೇ ವಾರ್ಡಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ತುಮಕೂರು ಮಹಾನಗರ ಪಾಲಿಕೆಯ 22ನೇ ವಾರ್ಡಿನ ಜೆಡಿಎಸ್ ಸದಸ್ಯರಾಗಿದ್ದ ರವಿಕುಮಾರ್ ನಿಧನದ ಹಿನ್ನೆಲೆಯಲ್ಲಿ ಆ ವಾರ್ಡಿಗೆ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ನಲ್ಲೇ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ.

ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಡಳಿತವೇ ಇದ್ದು, ಸಚಿವ ಎಸ್.ಆರ್.ಶ್ರೀನಿವಾಸ್ ಪಾಲಿಕೆ ಆಡಳಿತದಲ್ಲಿ ಹಿಡಿತ ಹೊಂದಿದ್ದಾರೆ.

ರವಿಕುಮಾರ್ ಈ ವಾರ್ಡಿನಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸಿ, ಗೆದ್ದು ಉಪಮೇಯರ್, ಮೇಯರ್ ಆಗಿದ್ದರು. ಹೀಗಾಗಿ, ಜೆಡಿಎಸ್ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ವಾರ್ಡ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲ ರಣ ತಂತ್ರ ರೂಪಿಸಲು ಸಿದ್ಧವಾಗಿದೆ. ಆಕಾಂಕ್ಷಿಗಳಲ್ಲಿ ಯಾರೂ ಅರ್ಹರು, ಯಾರಿಗೆ ಟೆಕೆಟ್ ಕೊಟ್ಟರೆ ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ.

ಗುರುವಾರ ಚುನಾವಣಾ ದಿನಾಂಕ ಮೇ 29 ಘೋಷಣೆ ಆಗುತ್ತಿದ್ದಂತೆಯೇ ಸಚಿವ ಎಸ್.ಆರ್. ಶ್ರೀನಿವಾಸ್ ಅವರಿಗೆ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

7ನೇ ವಾರ್ಡ್‌ನಲ್ಲಿ ಹಿಂದಿನ ಅವಧಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿ, ಸದಸ್ಯನಾಗಿ, ಉಪಮೇಯರ್ ಆಗಿದ್ದ ಜೆಡಿಎಸ್ ಮುಖಂಡರಾದ ಟಿ.ಆರ್. ನಾಗರಾಜ್ ಪಾಲಿಕೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ 92ಮತಗಳ ಅಂತರದಲ್ಲಿ ಸೋಲುಂಡಿದ್ದರು. 22ನೇ ವಾರ್ಡ್‌ಗೆ ಈಗ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಇವರೂ ಪ್ರಮುಖರು ಎಂದು ಹೇಳಲಾಗಿದೆ. ಇದೇ
ವಾರ್ಡಿಗೆ ಸ್ಪರ್ಧಿಸಲು ಪಕ್ಷದ ಇನ್ನೊಬ್ಬ ಮುಖಂಡ ಬೆಳ್ಳಿ ಲೋಕೇಶ್ ಅವರು ಟಿಕೆಟ್ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಪ್ರಾಬಲ್ಯದ ವಾರ್ಡ್ ಎಂದೇ ಹೇಳಲಾಗುವ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅಂತಹ ಉತ್ಸುಕತೆ ಪಕ್ಷದ ಮುಖಂಡರಲ್ಲಿ ಸದ್ಯಕ್ಕೆ ಕಂಡಿಲ್ಲ.

Post Comments (+)