ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊನೆಗೂ ರಸ್ತೆಗಿಳಿದ ಸಂಚಾರಿ ಶೌಚಾಲಯ: ವಿಶ್ವವಿದ್ಯಾಲಯ, ಜಯನಗರದ ಬಳಿ ನಿಲುಗಡೆ

Published : 18 ಸೆಪ್ಟೆಂಬರ್ 2024, 2:39 IST
Last Updated : 18 ಸೆಪ್ಟೆಂಬರ್ 2024, 2:39 IST
ಫಾಲೋ ಮಾಡಿ
Comments

ತುಮಕೂರು: ಕಳೆದ ಐದು ತಿಂಗಳಿನಿಂದ ಮಹಾನಗರ ಪಾಲಿಕೆ ಆವರಣದಲ್ಲಿ ನಿಂತಿದ್ದ ದುಬಾರಿ ‘ಸಂಚಾರಿ’ ಶೌಚಾಲಯ ಕೊನೆಗೂ ರಸ್ತೆಗೆ ಇಳಿದಿದೆ.

ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶೌಚಾಲಯ ವಾಹನಕ್ಕೆ ಮಂಗಳವಾರ ಹಸಿರು ನಿಶಾನೆ ತೋರಿದರು. ‘ರಸ್ತೆಗೆ ಇಳಿಯದ ಸಂಚಾರಿ ಶೌಚಾಲಯ’ ವರದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.

ಪಾಲಿಕೆ ₹15 ಲಕ್ಷ ವೆಚ್ಚ ಮಾಡಿ, ಮೇ ಮೊದಲ ವಾರದಲ್ಲಿ ‘ಸಂಚಾರಿ’ ಶೌಚಾಲಯ ಖರೀದಿಸಿತ್ತು. ಐದು ತಿಂಗಳಾದರೂ ಸಾರ್ವಜನಿಕರ ಬಳಕೆಗೆ ನೀಡದೆ ಪಾಲಿಕೆ ಆವರಣದಲ್ಲಿ ನಿಲ್ಲಿಸಿಕೊಳ್ಳಲಾಗಿತ್ತು. ನಿಂತಲ್ಲಿಯೇ ನಿಂತು ಮಳೆ, ಬಿಸಿಲಿಗೆ ತುಕ್ಕು ಹಿಡಿಯುವ ಹಂತ ತಲುಪಿತ್ತು. ಅಧಿಕಾರಿಗಳು ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದರು. ಬುಧವಾರದಿಂದ ಶೌಚಾಲಯ ಜನರಿಗೆ ಲಭ್ಯವಾಗಲಿದೆ.

ಪ್ರತಿ ದಿನ ಬೆಳಿಗ್ಗೆ ವಿಶ್ವವಿದ್ಯಾಲಯ ಮುಂಭಾಗ, ಮಧ್ಯಾಹ್ನದ ನಂತರ ಜಯನಗರದ ಮಿನಿ ಮಾರುಕಟ್ಟೆ ಬಳಿ ಶೌಚಾಲಯ ವಾಹನ ನಿಲ್ಲಿಸಲು ನಿರ್ಧರಿಸಲಾಗಿದೆ. ಈ ಭಾಗದಲ್ಲಿ ಶೌಚಾಲಯ ಇಲ್ಲದೆ ಸಾರ್ವಜನಿಕರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ವಾಹನ ನಿಲ್ಲಿಸುವುದರಿಂದ ಹಲವರಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ವಿವಿಧೆಡೆ ಕಾರ್ಯಕ್ರಮಗಳು ನಡೆದಾಗ ಅಲ್ಲಿ ನೆರೆದ ಜನರ ಉಪಯೋಗಕ್ಕೆ ನೀಡಲಾಗುತ್ತದೆ.

‘ಶೌಚಾಲಯ ಉದ್ಘಾಟಿಸಿ ಜನರ ಬಳಕೆಗೆ ನೀಡಿದರೆ ಸಾಲದು, ನಿರ್ವಹಣೆ ತುಂಬಾ ಮುಖ್ಯ. ವಾಹನ ರಸ್ತೆಯಲ್ಲಿ ಬಿಟ್ಟು ಅಧಿಕಾರಿಗಳು ಜಾರಿಕೊಂಡರೆ ಎರಡೇ ದಿನಗಳಿಗೆ ವಾಹನ ಮೂಲೆ ಸೇರಲಿದೆ. ಸಂಬಂಧಪಟ್ಟವರು ಶೌಚಾಲಯದ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ನಗರದ ಮನೋಜ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT