ಶನಿವಾರ, ನವೆಂಬರ್ 16, 2019
21 °C
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ್ಧ ಸಂವಾದದಲ್ಲಿ ಆರ್ಥಿಕ ಸಲಹೆಗಾರ ಕೆ.ಜೆ.ಹೇಮಂತಕುಮಾರ್ ಸಲಹೆ

ಆರ್ಥಿಕ ಸಂಕಷ್ಟ: ಉಳಿತಾಯದತ್ತ ಗಮನ ಹರಿಸಿ

Published:
Updated:
Prajavani

ತುಮಕೂರು: ‘ದೇಶದಲ್ಲಿ ಈಗ ಆರ್ಥಿಕ ಸಂಕಷ್ಟದ ಸ್ಥಿತಿಯನ್ನು ಕಾಣುತ್ತಿದ್ದು, ಪ್ರತಿಯೊಬ್ಬರೂ ಉಳಿತಾಯದ ಕಡೆಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ’ ಎಂದು ಐಸಿಐಸಿಐ ಬ್ಯಾಂಕಿನ ಆರ್ಥಿಕ ಸಲಹೆಗಾರ ಕೆ.ಜೆ.ಹೇಮಂತ್‌ಕುಮಾರ್ ಸಲಹೆ ನೀಡಿದರು.

ತುಮಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ  ಅರ್ಥಶಾಸ್ತ್ರ ವೇದಿಕೆಯು ಈಚೆಗೆ ಆಯೋಜಿಸಿದ್ದ ‘ಬ್ಯಾಂಕಿಂಗ್ ಸುಧಾರಣೆಗಳು ಮತ್ತು ಹೂಡಿಕೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

’ನಮ್ಮ ದೇಶದಲ್ಲಿ ಉಳಿತಾಯಕ್ಕಿಂತ ಖರ್ಚು ಮಾಡುವವರೇ ಹೆಚ್ಚಾಗಿದ್ದಾರೆ. ಅಗತ್ಯಕ್ಕಿಂತ ಅನಗತ್ಯ ವಿಷಯಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಅಪಾಯ ತರಲಿದೆ. ಎಚ್ಚೆತ್ತು ಇಂದಿನಿಂದಲೇ ಉಳಿತಾಯದ ಮನೋಭಾವ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

’ತಿಂಗಳ ಆದಾಯವನ್ನು ಪರಿಗಣನೆಗೆ ತೆಗೆದುಕೊಂಡು ಅಷ್ಟು ಹಣದಲ್ಲಿ ಎಷ್ಟು ಉಳಿಸಬೇಕು ಎಂಬುದರ ಕಡೆಗೆ ಆದ್ಯತೆ ನೀಡಬೇಕು. ಆದರೆ ಹಾಗೆ ಮಾಡುತ್ತಿಲ್ಲ. ಮೊದಲು ಖರ್ಚು ಮಾಡಿ ನಂತರ ಉಳಿಕೆ ಹಣದ ಬಗ್ಗೆ ಯೋಚಿಸುತ್ತಿರುವುದರಿಂದಲೇ ನಮ್ಮ ಆರ್ಥಿಕ ವ್ಯವಸ್ಥೆ ಏರುಪೇರಾಗುತ್ತಿದೆ. ಕುಟುಂಬಗಳಲ್ಲಿಯೇ ಈ ಬಗ್ಗೆ ಪೂರ್ವ ಯೋಜಿತ ನಿರ್ಧಾರಗಳು ಬೇಕಾಗಿದೆ’ ಎಂದು ಹೇಳಿದರು.

 ‘ಷೇರು ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳು, ಬ್ಯಾಂಕಿಂಗ್ ಮತ್ತು ನಾನ್-ಬ್ಯಾಂಕಿಂಗ್ ಕ್ಷೇತ್ರದಲ್ಲಾಗುವ ಬದಲಾವಣೆಗಳು ಮತ್ತು ಸಹಕಾರಿ ಸಂಘಗಳ ಪಾತ್ರದ ಬಗ್ಗೆ ಅರಿವಿರಬೇಕು’ ಎಂದು ತಿಳಿಸಿದರು.

’ವಿದ್ಯಾರ್ಥಿಗಳು ಜನ್-ಧನ್ ಖಾತೆಯನ್ನು ತೆರೆಯಬೇಕು. ಇದರಲ್ಲಿ ಸಂಗ್ರಹಗೊಂಡ ಹಣವನ್ನು ಬಂಡವಾಳವನ್ನಾಗಿಸಿಕೊಂಡು ಭವಿಷ್ಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬಹುದು’ ಎಂದು ಸಲಹೆ ನೀಡಿದರು.

ವಕೀಲರಾದ ಸಾ.ಚಿ.ರಾಜಕುಮಾರ್ ಮಾತನಾಡಿ, ‘ದೇಶದ ಹಲವು ಕ್ಷೇತ್ರಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ. ಜನರಲ್ಲಿ ಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ. ಇವೆಲ್ಲವೂ ಒಂದಕ್ಕೊಂದು ಪೂರಕ ಅಂಶಗಳಾಗಿ ಇಡೀ ಆರ್ಥಿಕ ವ್ಯವಸ್ಥೆಯನ್ನು ಅಲುಗಾಡಿಸುತ್ತಿವೆ’ ಎಂದರು.

‘ನೋಟು ಅಮಾನ್ಯೀಕರಣ, ಜಿ.ಎಸ್.ಟಿ, ತೆರಿಗೆಯಂತಹ ಹಲವು ಅಂಶಗಳು ನಗದು ಚಲಾವಣೆ ಮೇಲೆ ದೀರ್ಘ ಪರಿಣಾಮವನ್ನುಂಟು ಮಾಡಿವೆ. ಇದರಿಂದ ಹೊರಬರಲು ಸಾಕಷ್ಟು ಕಾಲ ಬೇಕಾಗುತ್ತದೆ’ ಎಂದು ಹೇಳಿದರು.

’ಉದ್ಯೋಗ ಕಡಿತ, ನಿರುದ್ಯೋಗ ಸಮಸ್ಯೆ ಮೊದಲಾದ ಸಾಮಾಜಿಕ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಲಿವೆ. ಕೆಲವು ಸಂಸ್ಥೆಗಳು, ಕಂಪನಿಗಳು ಉದ್ದೇಶಪೂರ್ವಕವಾಗಿಯೇ ಆರ್ಥಿಕ ಹಿಂಜರಿತದ ನೆಪ ಹೇಳಿ ಉದ್ಯೋಗಿಗಳನ್ನು ಬೆದರಿಸುವ, ಕೆಲಸದಿಂದ ತೆಗೆದು ಹಾಕುವ ನಾಟಕವಾಡುತ್ತಿದ್ದಾರೆ. ಇಂತಹವುಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು’ ಎಂದರು.

ಪ್ರಾಂಶುಪಾಲ ಪ್ರೊ.ಕೆ.ಎಸ್.ಜಗದೀಶ್ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಯಲ್ಲಿಯೇ ಉಳಿತಾಯದ ಮನೋಭಾವ ಮೈಗೂಡಿಸಿಕೊಂಡರೆ ಮುಂದಿನ ಬದುಕಿಗೆ ಸಹಕಾರಿಯಾಗಲಿದೆ’ ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಟಿ.ಆರ್.ಲೀಲಾವತಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಡಾ.ಜಿ.ಕೆ.ನಾಗರಾಜ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಪ್ರಸಾದ್, ಸುರೇಶ್, ಯೋಗೀಶ್, ನಾಗರಾಜ್, ಅಶ್ವಿನಿ, ನಾರಾಯಣಪ್ಪ, ರಾಘವೇಂದ್ರ, ಮಹೇಶ್ ಇದ್ದರು.

ಪ್ರತಿಕ್ರಿಯಿಸಿ (+)