ಬಂಟ್ವಾಳ ಸಿಪಿಐ ಕಚೇರಿಗೆ ಬೆಂಕಿ: ಪ್ರತಿಭಟನೆ

7

ಬಂಟ್ವಾಳ ಸಿಪಿಐ ಕಚೇರಿಗೆ ಬೆಂಕಿ: ಪ್ರತಿಭಟನೆ

Published:
Updated:
Prajavani

ತುಮಕೂರು: ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಬಂಟ್ವಾಳ ಕಚೇರಿಗೆ ಬೆಂಕಿ ಇಟ್ಟು, ಧ್ವಂಸಗೊಳಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಎಡಪಕ್ಷಗಳು ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.

ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಸಿಪಿಐ ಮತ್ತು ಸಿಪಿಎಂ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಪ್ರಾಂತ ರೈತ ಸಂಘ, ಕೃಷಿಕಸಮಾಜ, ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಶನ್ (ಎಐಎಸ್‌ಎಫ್) ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಪ್ರತಿಭಟಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಶಿವಣ್ಣ, ‘ಕಮ್ಯುನಿಸ್ಟ್ ಪಕ್ಷವು ಈ ದೇಶದ ಬಡವ ರೈತ, ಕಾರ್ಮಿಕರ ಪರವಾಗಿ ದುಡಿಯುವವರ ಪಕ್ಷವಾಗಿದೆ. ಇದನ್ನು ಸಹಿಸದ ಕೆಲವರು ಕೋಮುವಾದದ ಪ್ರಚೋದನೆಯಿಂದ ಇಂತಹ ಕೃತ್ಯವನ್ನು ಮಾಡಿ, ಬಡವರ ರಕ್ತ ಹೀರಲು ಹೊರಟಿರುವುದು ಖಂಡನೀಯ’ ಎಂದರು.

ಈ ಕೂಡಲೇ ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಾತ್ಯತೀತ ಪಕ್ಷಗಳೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಸಂಘ ಪರಿವಾರದ ಈ ನೀತಿಗಳಿಂದ ಜಾತ್ಯತೀತ ಸ್ವರೂಪವನ್ನು ಅಳಿಸಲು ಸಾಧ್ಯವಿಲ್ಲ. ದೇವರು, ಧರ್ಮ ಮತ್ತು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವವರು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ, ಪ್ರತಿಭಟನೆಯನ್ನುದ್ದೇಶಿಸಿ ಪ್ರಾಂತ ರೈತ ಸಂಘದ ಬಿ.ಉಮೇಶ್, ಕೃಷಿಕ ಸಮಾಜದ ಸುರೇಶ್ ಮಾತನಾಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೀರೀಶ್, ಸಹಕಾರ್ಯದರ್ಶಿ ಕಾಂತರಾಜು, ಖಜಾಂಚಿ ಕಂಬೇಗೌಡ, ವಿವಿಧ ಸಂಘಟನೆಯ ಮುಖಂಡರಾದ ಸೈಯದ್ ಮುಜೀಬ್, ರಾಘವೇಂದ್ರ, ಸತ್ಯನಾರಾಯಣ್, ನಾಗಣ್ಣ, ವೇಣುಗೋಪಾಲ್, ಗಂಗಾಧರ್, ಶಶಿಕಾಂತ್, ಜ್ಯೋತಿ, ದೇವರಾಜ್, ನಾಗರತ್ನಮ್ಮ ಹಾಗೂ ವೆಂಕಟೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !