ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಯಾವ ನಾಯಕನ ಅಡಿಯಾಳೂ ಅಲ್ಲ

*ಬಿಜೆಪಿ, ಕಾಂಗ್ರೆಸ್‌ಗೆ ನಾವು ದೇಶವನ್ನು ಒತ್ತೆ ಇಟ್ಟಿಲ್ಲ *ಸ್ವಂತ ಪಕ್ಷ ಕಟ್ಟಿದ್ದೇನೆ * ದೇಶಕ್ಕೆ ಒಳಿತು
Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

* ರಾಜ್ಯ ರಾಜಕಾರಣ ರಂಗೇರಿದೆ. ಈಗಿನ ಪರಿಸ್ಥಿತಿ ನೋಡಿದರೆ ನೀವು ಒಂದಾದರೂ ಸ್ಥಾನ ಗೆಲ್ಲಬಹುದು ಅನಿಸುತ್ತಾ?
ನಮ್ಮ ಆಂತರಿಕ ಸಮೀಕ್ಷೆಯ ಪ್ರಕಾರ ಕನಿಷ್ಠ 70 ಸೀಟ್ ಗೆಲ್ಲುತ್ತೇವೆ.

* ನೀವು ಬಿಜೆಪಿಯ ‘ಟೀಂ ಬಿ’, ಅವರಿಗೆ ಅನುಕೂಲ ಮಾಡಿಕೊಡಲೆಂದೇ ಕರ್ನಾಟಕ್ಕೆ ಬಂದಿದ್ದೀರಿ ಎಂಬ ಆರೋಪಗಳಿವೆ...
ಇದು ದೊಡ್ಡ ಸುಳ್ಳು. ಬಿಜೆಪಿಗೂ ನನಗೂ ಯಾವುದೇ ಸಂಬಂಧ ಇಲ್ಲ. 2012ರಲ್ಲಿ ನಮ್ಮ ಪಕ್ಷದ ನೋಂದಣಿ ಪ್ರಕ್ರಿಯೆ ಆರಂಭವಾಯಿತು. 2017ರಲ್ಲಿ ನಮಗೆ ಗುರುತು ಸಿಕ್ಕಿತು. ನಾನು ಯಾವುದೇ ಹಂತದಲ್ಲಿ ಯಾರ ಸಹಾಯವನ್ನೂ ಕೇಳಿಲ್ಲ. ಯಾವ ಪಕ್ಷದವರೂ ನನಗೆ ಸಹಾಯ ಮಾಡಿಲ್ಲ. ನಾನು ಯಾವ ನಾಯಕನ ಅಡಿಯಾಳೂ ಅಲ್ಲ.

* ಕೋಮುವಾದ ವಿರೋಧಿ ಎಂದು ಹೇಳಿಕೊಳ್ಳುವ ನಿಮ್ಮ ಸ್ಪರ್ಧೆಯಿಂದ ‘ಜಾತ್ಯತೀತ’ ಪಕ್ಷಗಳೆಂದು ಕರೆದುಕೊಳ್ಳುವ ಕಾಂಗ್ರೆಸ್, ಜೆಡಿಎಸ್‌ಗೆ ಹಿನ್ನಡೆಯಾಗುವುದಿಲ್ಲವೇ? ಪರೋಕ್ಷವಾಗಿ ಇದು ಬಿಜೆಪಿಗೆ ಲಾಭ ಮಾಡಿಕೊಡುತ್ತದೆ ಎಂಬ ಟೀಕೆ ಇದೆಯಲ್ಲ?
ಈ ಪ್ರಶ್ನೆ ಸಂವಿಧಾನ ನಮಗೆ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನೇ ಪ್ರಶ್ನಿಸುವಂತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನಾವು ದೇಶವನ್ನು ಒತ್ತೆ ಇಟ್ಟಿಲ್ಲ. ಈ ದೇಶವನ್ನು ನಾವು ಕಾಂಗ್ರೆಸ್‌ ಅಥವಾ ಯಾವುದೇ ಪಕ್ಷಕ್ಕೆ ಬರೆದುಕೊಟ್ಟಿಲ್ಲ ಅಲ್ವಾ? ನಮಗೂ ಪಕ್ಷ ಸ್ಥಾಪಿಸುವ, ಸ್ಪರ್ಧಿಸುವ ಹಕ್ಕು ಇದೆ. ನಮ್ಮ ಪಕ್ಷವನ್ನು ಬಿಜೆಪಿ ಅಥವಾ ಕಾಂಗ್ರೆಸ್ ಪರ ಎಂದು ಬಿಂಬಿಸುವುದನ್ನು ನಾನು ಒಪ್ಪುವುದಿಲ್ಲ. ಇದು ನನ್ನ ಸ್ವಂತ ಪಕ್ಷ.

* ಕರ್ನಾಟಕದ ಚುನಾವಣೆ ಗಮನಿಸಿದರೆ ನಿಮಗೆ ಏನು ಅನಿಸುತ್ತೆ?
ಯಾವುದೇ ರಾಜಕೀಯ ಪಕ್ಷ ಎಲ್ಲ ಜಾತಿ, ಧರ್ಮದವರಿಗೂ ಅವಕಾಶ ಕೊಡಬೇಕು. ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಗಮನಿಸಿ. ಒಬ್ಬರಾದರೂ ಮುಸ್ಲಿಂ ಇದ್ದಾರಾ? ಅವರು ಎಷ್ಟು ಜಾತ್ಯತೀತರು ಅಂತ ಅದರಲ್ಲೇ ಗೊತ್ತಾಗುತ್ತೆ. ಯಾರು ಕೋಮುವಾದಿಗಳೋ ಅವರನ್ನು ಕೋಮುವಾದಿ ಅನ್ನುವುದರಲ್ಲಿ ಯಾವುದೇ ತಪ್ಪು ಇಲ್ಲ. ‘ನಾವು ಜಾತ್ಯತೀತ ಮನೋಭಾವ ಹೊಂದಿದ್ದೇವೆ’ ಎಂದು ಬಾಯಿಬಿಟ್ಟು ಹೇಳಬೇಕಿಲ್ಲ. ನಮ್ಮ ವರ್ತನೆಯಿಂದಲೇ ನಾವು ಎಂಥವರು ಎಂದು ಅರ್ಥ ವಾಗಬೇಕು. ನಮ್ಮ ಪಕ್ಷದ ಉಮೇದುವಾರರ ಪಟ್ಟಿ ನೋಡಿ. ನಾವು ಎಂಥವರು ಎಂದು ಗೊತ್ತಾಗುತ್ತೆ.

* ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದರೆ, ನೀವು ಒಂದಿಷ್ಟು ಸೀಟುಗಳನ್ನು ಗೆದ್ದರೆ ನಿಮ್ಮ ಬೆಂಬಲ ಯಾರಿಗೆ?
ಒಂದು ವೇಳೆ ಅಂಥ ಸಮಯ ಬಂದರೆ, ನಮ್ಮ ಪ್ರಣಾಳಿಕೆ ಒಪ್ಪುವ ಪಕ್ಷವನ್ನು ನಾವು ಆರಿಸಿಕೊಳ್ಳುತ್ತೇವೆ. ನಮ್ಮ ಶಾಸಕರು ಒಪ್ಪಿದ ಪಕ್ಷಕ್ಕೆ ಬೆಂಬಲ ಕೊಡ್ತೀವಿ.

* ರಾಜಕೀಯಕ್ಕೆ ಬರಬೇಕು ಎಂದು ನಿಮಗೆ ಏಕೆ ಅನಿಸಿತು?
ನಾನು ಕೇವಲ ಉದ್ಯಮಿಯಷ್ಟೇ ಅಲ್ಲ; ಸಮಾಜ ಸೇವಕಿಯೂ ಹೌದು. ದೇಶದ ನೂರಾರು ಜಿಲ್ಲೆಗಳಲ್ಲಿ ನಮ್ಮ ಸಂಸ್ಥೆ ಸಮಾಜ ಸೇವೆ ಮಾಡುತ್ತಿದೆ. ಲಕ್ಷಾಂತರ ಮಹಿಳೆಯರಿಗೆ ತಮ್ಮ ಕಾಲ ಮೇಲೆ ನಿಲ್ಲುವ ಅವಕಾಶ ಕಲ್ಪಿಸಿದ್ದೇನೆ. ಅಸಹಾಯಕರ ಪರವಾಗಿ ದನಿ ಎತ್ತಿದಾಗ, ಅವರಿಗೆ ನ್ಯಾಯ ಕೊಡಿಸಲು ಮುಂದಾದಾಗ ರಾಜಕೀಯ ಅಡ್ಡ ಬರುತ್ತಿತ್ತು. ಎಲ್ಲರಿಗೂ ನ್ಯಾಯ ಕೊಡಿಸುವುದು ರಾಜಕಾರಣ. ರಾಜಕಾರಣ ಅಂದ್ರೆ ಸಾಮಾಜಿಕ ನ್ಯಾಯ. ಆದರೆ ಅದು ಗೂಂಡಾಗಿರಿ, ಕೊಲೆ, ಅನ್ಯಾಯ ಮಾಡಲು ಅನುಕೂಲ ಮಾಡಿಕೊಡುತ್ತಿರುವುದನ್ನು ಗಮನಿಸಿದೆ. ದೇಶಕ್ಕೆ ಒಳ್ಳೇದು ಮಾಡಬೇಕು, ರಾಜಕಾರಣಕ್ಕೆ ಒಳ್ಳೆಯ ನಾಯಕರನ್ನು ತರಬೇಕು ಅಂತ ರಾಜಕೀಯಕ್ಕೆ ಬಂದೆ.

* ನಿಮ್ಮ ಪ್ರಕಾರ ಮಹಿಳಾ ಪರ ರಾಜಕಾರಣ, ಮಹಿಳಾ ಸ್ವಾತಂತ್ರ್ಯ ಎಂದರೇನು?
ಹೆಣ್ಣು ಹೊರೆಯಲ್ಲ ಎಂದು ಪ್ರತಿ ಕುಟುಂಬಕ್ಕೆ ಅನಿಸುವಂತೆ ಮಾಡುವುದು ಮಹಿಳಾ ಪರ ರಾಜಕಾರಣ. ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳರಿಮೆ ಹೆಚ್ಚು. ಇದು ತಪ್ಪಬೇಕು. ಮಹಿಳೆ ತಾನು ಹುಟ್ಟಿದ ಕುಟುಂಬದ ಸಂಪ್ರದಾಯವನ್ನು ಗೌರವಿಸಬೇಕು, ಅನುಸರಿಸಬೇಕು. ಅದರ ಜೊತೆಗೆ ಸ್ವಾವಲಂಬಿಯೂ ಆಗಿರಬೇಕು. ತುಂಡು ಬಟ್ಟೆ ಹಾಕಿಕೊಂಡು ಬೀದಿಬೀದಿ ಅಲೆಯುವುದನ್ನೇ ಮಹಿಳಾ ಸ್ವಾತಂತ್ರ್ಯ ಎಂದು ನಾನು ಪ್ರತಿಪಾದಿಸುವುದಿಲ್ಲ. ಸಮಾಜಕ್ಕೆ ಒಳಿತು ಮಾಡಲು ಅವಕಾಶ, ವ್ಯಾಪಾರ– ವ್ಯವಹಾರಗಳಲ್ಲಿ ಮುಂದಕ್ಕೆ ಬರಲು ಅವಕಾಶ ಮಹಿಳೆಯರಿಗೂ ಇರಬೇಕು. ಅದನ್ನು ನಾನು ಮಹಿಳಾ ಸ್ವಾತಂತ್ರ್ಯ ಎನ್ನುತ್ತೇನೆ.

* ಮಹಿಳೆಯರಿಗಾಗಿ ಪ್ರತ್ಯೇಕ ರಾಜಕೀಯ ಪಕ್ಷದ ಅಗತ್ಯವಿದೆಯೇ?
ಖಂಡಿತಾ ಅಗತ್ಯವಿದೆ. ಮಹಿಳೆಯರಿಗಾಗಿ ಯಾವ ನಾಯಕನೂ ಮಾತನಾಡ್ತಿಲ್ಲ. ಶೇ 33ರಷ್ಟು ಸ್ಥಾನಗಳನ್ನು ಖಾತರಿಪಡಿಸುವ ಮಸೂದೆ 16 ವರ್ಷಗಳಿಂದ ಪಾಸ್ ಆಗಿಲ್ಲ. ನಾವು ಈ ದೇಶದ ಜನಸಂಖ್ಯೆಯಲ್ಲಿ ಶೇ 49ರಷ್ಟು ಇದ್ದೇವೆ. ಆದರೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡಲು ಹಿಂಜರಿಕೆ ಏಕೆ? ಕರ್ನಾಟಕದಲ್ಲಿ ಅಧಿಕಾರ ಮಾಡಿದ ಕಾಂಗ್ರೆಸ್ ಪಕ್ಷದಲ್ಲಿ 40ಕ್ಕೂ ಹೆಚ್ಚು ಸಚಿವರು ಇದ್ದರು. ಇವರಲ್ಲಿ ಮಹಿಳೆಯರ ಸಂಖ್ಯೆ ಎಷ್ಟು? ನೆನಪಿಡಿ, ಇದೇ ಕಾಲ ಹೀಗೆಯೇ ಇರುವುದಿಲ್ಲ.

*

ಉದ್ಯಮಿ, ಸಮಾಜ ಸೇವಕಿ
‘ಮಹಿಳೆಯರ ಪರ ರಾಜಕಾರಣ ಮಾಡುತ್ತೇನೆ’ ಎಂದು ಘೋಷಿಸಿ ರಾಜಕಾರಣಕ್ಕೆ ಬಂದವರು ನೌಹೀರಾ ಶೇಖ್‌. ಆಂಧ್ರ ಪ್ರದೇಶದ ಚಿತ್ತೂರು ಮೂಲದ ನೌಹೀರಾ ವೃತ್ತಿಯಿಂದ ಉದ್ಯಮಿ, ಪ್ರವೃತ್ತಿಯಲ್ಲಿ ಸಮಾಜ ಸೇವಕಿ. ಹೀರಾ ಗ್ರೂಪ್‌ನ ಸಿಇಒ ಆಗಿ 20ಕ್ಕೂ ಹೆಚ್ಚು ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.

ಚಿನ್ನಾಭರಣ ವ್ಯಾಪಾರವೂ ಇದರಲ್ಲಿ ಸೇರಿದೆ. ಹೈದರಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹೀರಾ ಗ್ರೂಪ್‌, ಭಾರತದ ವಿವಿಧ ರಾಜ್ಯಗಳು ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ವ್ಯವಹಾರ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT