ಜಿಲ್ಲೆಯಲ್ಲಿ 337 ಮಕ್ಕಳು ತೀವ್ರ ಅಪೌಷ್ಟಿಕ: ಡಾ.ಎನ್.ಕೃಷ್ಣಮೂರ್ತಿ

7

ಜಿಲ್ಲೆಯಲ್ಲಿ 337 ಮಕ್ಕಳು ತೀವ್ರ ಅಪೌಷ್ಟಿಕ: ಡಾ.ಎನ್.ಕೃಷ್ಣಮೂರ್ತಿ

Published:
Updated:
Prajavani

ತುಮಕೂರು: ಆಯೋಗವು ಜ.2ರಿಂದ 5ರವರೆಗೆ ಜಿಲ್ಲೆಯ 8 ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಜಿಲ್ಲೆಯಲ್ಲಿ 337 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 12,633 ಮಕ್ಕಳು ಸಾಧಾರಣ ಪೌಷ್ಟಿಕವಾಗಿದ್ದಾರೆ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ವಿವರಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

‘ತೀವ್ರ ಅಪೌಷ್ಟಿಕ ಮಕ್ಕಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿರುವ ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ (ಎನ್‌ಆರ್‌ಸಿ) ದಾಖಲಿಸಲು ಶಿಫಾರಸ್ಸು ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ ಭದ್ರತಾ ಕಾಯ್ದೆ ದೇಶದಲ್ಲಿ 2013ರಲ್ಲಿ ಜಾರಿಗೆ ಬಂದಿದ್ದರೂ, ರಾಜ್ಯದಲ್ಲಿ 2017ರಲ್ಲಿ ಅನುಷ್ಠಾನಕ್ಕೆ ತರಲಾಯಿತು. ರಾಜ್ಯದಲ್ಲಿ ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆಯೋಗವು ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದೆ ಎಂದರು.

ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದಡಿ ನೇಮಕವಾಗಿರುವ ವೈದ್ಯರು ಪ್ರತಿ 2 ತಿಂಗಳಿಗೊಮ್ಮೆ ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ತಪಾಸಣೆ ಮಾಡದ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಕಲಾ ಅವರಿಗೆ ಸೂಚಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಆರ್‌ಸಿ ಕೇಂದ್ರವನ್ನು ಸುಸಜ್ಜಿತ ವಾರ್ಡಿಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಡಾ.ವೀರಭದ್ರಯ್ಯ ಅವರಿಗೆ ನಿರ್ದೇಶನ ನೀಡಿದರು.

ಆಯೋಗದ ಸದಸ್ಯ ವಿ.ಬಿ.ಪಾಟೀಲ್ ಮಾತನಾಡಿ, ‘ಆಯೋಗ ಪ್ರವಾಸ ಕೈಗೊಂಡ ನಂತರ ಸಾಕಷ್ಟು ಸುಧಾರಣೆಗಳಾಗಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳ ಸಂಖ್ಯೆ, ಹಾಜರಾತಿ, ದಾಸ್ತಾನು ವಹಿ, ಸಿಬ್ಬಂದಿಗಳ ಜವಾಬ್ದಾರಿ, ಅಪೌಷ್ಟಿಕ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲಾಗಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಜಿಲ್ಲೆಯ ಅಂಗನವಾಡಿಗಳ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. 

ಸದಸ್ಯ ಕಾರ್ಯದರ್ಶಿ ಸುಜಾತಾ ಹೊಸಮನಿ ಮಾತನಾಡಿ, ‘ಆಹಾರ ಭದ್ರತೆಗೆ ಸಂಬಂಧಿಸಿದಂತೆ ಇರುವ ಅವ್ಯವಸ್ಥೆಗಳನ್ನು ಜಿಲ್ಲಾ ಮಟ್ಟದಲ್ಲಿ ಸರಿಪಡಿಸಲು ಸಾಧ್ಯವಾಗದಿದ್ದಲ್ಲಿ ರಾಜ್ಯ ಮಟ್ಟದ ಸಭೆಯಲ್ಲಿ ಪರಿಹರಿಸಲಾಗುವುದು. ಆಯೋಗದಿಂದ ಈಗಾಗಲೇ 20 ರಾಜ್ಯಮಟ್ಟದ ಸಭೆಗಳನ್ನು ನಡೆಸಲಾಗಿದೆ’ ಎಂದರು.

ಆಯೋಗದ ಸದಸ್ಯೆ ಮಂಜುಳಾಬಾಯಿ ಮಾತನಾಡಿ, ‘ಪಾವಗಡ ತಾಲ್ಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆಗೆ ಶುದ್ಧ ನೀರು ಬಳಸದೆ ತೆರೆದ ಬಾವಿ ಹಾಗೂ ಕೊಳವೆ ಬಾವಿ ನೀರನ್ನು ಬಳಸುತ್ತಿರುವುದು ಸರಿಯಲ್ಲ. ಕೂಡಲೇ ಶುದ್ಧ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು’ ಎಂದರು.

 ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ನೈರ್ಮಲ್ಯ, ಆಹಾರದ ಗುಣಮಟ್ಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಮಾತನಾಡಿ, ಆಯೋಗದ ಕಣ್ಣಿಗೆ ಕಂಡಿರುವ ಲೋಪದೋಷಗಳನ್ನು ಮುಂದಿನ ಭೇಟಿಯ ಒಳಗೆ ಸರಿಪಡಿಸಿಕೊಂಡು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಸದಸ್ಯರಾದ ಡಿ.ಜಿ.ಹಸಬಿ, ಬಿ.ಎ.ಮಹಮ್ಮದ್ ಅಲಿ ಮಾತನಾಡಿದರು. ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಡಾ. ವೀರಭದ್ರಯ್ಯ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್ ಕುಮಾರ್, ಸಿಡಿಪಿಒಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !