ಶುಕ್ರವಾರ, ಜೂಲೈ 10, 2020
25 °C
ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಮಿಕರ ದಿನ ಸರಳ ಆಚರಣೆ

ಕಾರ್ಮಿಕರಿಗೆ ಲಾಕ್‌ಡೌನ್ ತಂದಿಟ್ಟ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ವಿವಿಧ ಕಡೆಗಳಲ್ಲಿ ಸಂಘ ಸಂಸ್ಥೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಶುಕ್ರವಾರ ಕಾರ್ಮಿಕ ದಿನವನ್ನು ಸರಳವಾಗಿ ಆಚರಿಸಿದವು.

ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಹೆಚ್ಚು ಕಷ್ಟಕ್ಕೆ ಸಿಲುಕಿರುವುದು ಕಾರ್ಮಿಕರು. ಈ ವಲಯಕ್ಕೆ ನೆರವಾಗುವ ಮೂಲಕ ಅವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು ಎಂದು ಗಣ್ಯರು ಕೋರಿದರು.

ಜೆಡಿಎಸ್: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಗರ ಘಟಕ, ಕಾರ್ಮಿಕ ಘಟಕದ ಸಹಯೋಗದೊಂದಿಗೆ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ 100 ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.

ವಿಧಾನ ‍ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ‘ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಪಕ್ಷಾತೀತವಾಗಿ ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಸಹಾಯ ಚಾಚಿದ್ದಾರೆ. ಇದರಿಂದ ಸ್ವಲ್ಪ ಉಸಿರಾಡುವಂತಾಗಿದೆ’ ಎಂದರು.

ಶಾಸಕ ಡಿ.ಸಿ.ಗೌರಿಶಂಕರ್, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್ ಇದ್ದರು.

ಮನುಕುಲದ ಉಳಿವಿಗೆ ಹೋರಾಟ: ಕೊರೊನಾ ಸಂದರ್ಭದಲ್ಲಿ ಕಾರ್ಮಿಕರು ಅತಾಶರಾಗಬಾರದು. ಬದುಕು, ಮನುಕುಲದ ಉಳಿವಿಗೆ ಜಾತಿ, ಮತ– ಧರ್ಮ ಲೆಕ್ಕಿಸದೆ ಹೋರಾಟ ಮುಂದುವರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಕೆ.ದೊರೈರಾಜ್ ಹೇಳಿದರು.

ನಗರದ ಜನಚಳವಳಿ ಕೇಂದ್ರದಲ್ಲಿ ಸಿಐಟಿಯು ಹಮ್ಮಿಕೊಂಡಿದ್ದ ವಿಶ್ವಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರು, ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ, ದುಡಿಯವ ವರ್ಗದ ರಕ್ಷಣೆಯ ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದರು.

ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಸುಬ್ರಹ್ಮಣ್ಯ, ‘ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆಯೇ ಉದ್ಯೋಗ, ವೇತನ ಕಡಿತ ಮಾಡಲಾಗುತ್ತಿದೆ. ಕೆಲಸ ಉಳಿಸಿಕೊಳ್ಳಲು ಸಂಘಟಿತ ಹೋರಾಟವೇ ಮಾರ್ಗವಾಗಿದೆ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು. ವಿಮಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಂಜುಂಡಸ್ವಾಮಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಬಿ.ಉಮೇಶ್ ಮಾತನಾಡಿದರು.

ಬೋಧಕೇತರ ನೌಕರರ ಸಂಘದ ಟಿ.ಜಿ.ಶಿವಲಿಂಗಯ್ಯ, ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ, ಖಜಾಂಚಿ ಎ.ಲೋಕೇಶ್, ಟಿ.ಎಸ್.ರಾಜಶೇಖರ್, ಜಬೀನ ಸುರೇಂದ್ರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು