ಶುಕ್ರವಾರ, ಜೂನ್ 18, 2021
29 °C
ಅತಂತ್ರದಲ್ಲಿ ಬಿಸಿಯೂಟ ಸಿಬ್ಬಂದಿಯ ಜೀವನ; ಜಿಲ್ಲೆಯಲ್ಲಿ 3,500 ಮಂದಿ ಕಾರ್ಯನಿರ್ವಹಣೆ

‘ಐದ್ ತಿಂಗ್ಳಿಂದ ಗೌರವಧನ ಇಲ್ರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಸ್ವಾಮಿ ನಮ್ ಕಷ್ಟ ಯಾರಿಗೂ ಬರ್ಬಾರ್ದು. ಗೌರವಧನ ಸಿಗ್ದೆ ಐದ್ ತಿಂಗಳಾಯ್ತು, ಕೈಯಲ್ಲಿ ಕಾಸಿಲ್ದೆ ಜೀವನ ನಡ್ಸೋದು ಕಷ್ಟ ಆಗೈತೆ. ಮನೆ ರೇಷನ್ನು, ಬಟ್ಟೆ, ಬಾಡಿಗೆ, ಸಾಲ ಕಟ್ಟಗಾಗ್ದೆ ಜೀವನಾನೇ ಕಷ್ಟ ಅನ್ನುಸ್ಬುಟ್ಟೈತೆ’ ಎನ್ನುತ್ತಲೇ ನೊಂದುಕೊಂಡರು ಅಕ್ಷರ ದಾಸೋಹ ಬಿಸಿಯೂಟ ಸಿಬ್ಬಂದಿ ಲಕ್ಷ್ಮೀದೇವಿ ಮತ್ತು ನಾಗರತ್ನ.

‘ಯಾವುದೇ ಪರ್ಯಾಯ ಕೆಲಸಗಳು ಸಿಗುತ್ತಿಲ್ಲ. ಇದೀಗ ಸರ್ಕಾರವೂ ನಮ್ಮನ್ನು ಕಡೆಗಣಿಸುತ್ತಿದೆ. ಹೀಗಾದರೆ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಬದುಕು ನಡೆಸೋದು ಹೇಗೆ ಹೇಳಿ’ ಎಂದು ಅಳಲು ತೋಡಿಕೊಂಡರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಐದಾರು ತಿಂಗಳಿನಿಂದ ವೇತನ ದೊರೆತಿಲ್ಲ. ತುಮಕೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 6,500 ಮಂದಿ ಮುಖ್ಯ ಅಡುಗೆ ಕೆಲಸಗಾರರು ಮತ್ತು ಸಹಾಯಕರು ಕೆಲಸ ಮಾಡುತ್ತಿದ್ದಾರೆ.

ವಿಧವೆಯರು, ಆರ್ಥಿಕ ಅಶಕ್ತರು, ವಯಸ್ಸಾದವರು, ದುರ್ಬಲ ವರ್ಗದವರು ಹೆಚ್ಚಾಗಿ ಬಿಸಿಯೂಟ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಸರ್ಕಾರದಿಂದ ಸಿಗುವ ಅತ್ಯಲ್ಪ ಗೌರವಧನ ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಶಾಲೆಗಳು ನಡೆಯದ ಕಾರಣ, ಮಾರ್ಚ್‌ ತಿಂಗಳಿನಿಂದ ಈವರೆಗೆ ಗೌರವಧನ ಕೈ ಸೇರಿಲ್ಲ.

ಪಿಂಚಣಿ ಹಾಗೂ ಇತರೆ ಯಾವುದೆ ಸೌಲಭ್ಯಗಳು ಇವರಿಗೆ ಇಲ್ಲ. ಮುಖ್ಯ ಅಡಿಗೆ ಕೆಲಸಗಾರರು ತಿಂಗಳಿಗೆ ₹2,700, ಸಹಾಯಕರಿಗೆ ₹2,600 ಗೌರವ ನೀಡಲಾಗುತ್ತಿದೆ. 

‘ನಮಗೆ ಯಾವುದೇ ಆರೋಗ್ಯ ವಿಮೆಯೂ ಇಲ್ಲ. ಅನೇಕರ  ಸ್ಥಿತಿ ಚಿಂತಾಜನಕವಾಗಿದೆ’ ಎಂದು ಸಿಬ್ಬಂದಿ ನೋವು ತೋಡಿಕೊಳ್ಳುವರು.

ಕೆಲಸ ಕಳೆದು ಕೊಳ್ಳುವ ಭೀತಿ: ಕನಿಷ್ಠ ವೇತನಕ್ಕೆ ದುಡಿಯುತ್ತಿರುವ ಅಕ್ಷರ ದಾಸೋಹ ಸಿಬ್ಬಂದಿ ಕೊರೊನಾ ಪರಿಣಾಮ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಪ್ರಸಕ್ತ ವರ್ಷ ಶಾಲೆಗಳು ಆರಂಭವಾಗುವುದು ಅನಿಶ್ಚಿತವಾಗಿದೆ. ಆರಂಭವಾದರೂ ಶಾಲೆಯಲ್ಲಿ ಬಿಸಿಯೂಟ ನೀಡುವುದು ಬೇಡ ಎಂಬ ಆಗ್ರಹ ಪೋಷಕರಿಂದ ಕೇಳಿಬರುತ್ತಿದೆ. ಹೀಗಾಗಿ, ಕೆಲಸದ ಅಭದ್ರತೆ ನೌಕರರನ್ನು ತೀವ್ರವಾಗಿ ಕಾಡುತ್ತಿದೆ.

ನಮ್ಮ ವೇತನ ನಮಗೆ ನೀಡಿ

‘ಪ್ರಸ್ತುತ ದಿನಗಳಲ್ಲಿ ₹40 ಸಾವಿರಕ್ಕೂ ಹೆಚ್ಚು ಸಂಬಳ ಪಡೆಯುವವರೇ ಜೀವನ ನಡೆಸಲು ಪರದಾಡುತ್ತಿದ್ದಾರೆ. ನಾವು ಕೇವಲ ₹2700 ಯಲ್ಲಿ ಜೀವನ ನಡೆಸುತ್ತಿದ್ದೇವೆ ಎಂದರೆ ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನಮ್ಮಲ್ಲಿ ಅನೇಕರು ವಿಧವೆಯರು, ಅಂಗವಿಕಲ ಮಕ್ಕಳು ಇರುವ ಮಹಿಳೆಯರು, ನಿವೃತ್ತಿ ವಯಸ್ಸಿಗೆ ಬಂದಿರುವವರು ಇದ್ದಾರೆ. ಇವರೆಲ್ಲರೂ ಬೇರೆಡೆ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮಗೆ ವಿಶೇಷ ಪ್ಯಾಕೇಜ್ ನೀಡುವುದು ಬೇಡ, ಕನಿಷ್ಠ ಪಕ್ಷ ನಮ್ಮ ಗೌರವಧನವನ್ನಾದರೂ ನೀಡಬೇಕು’ ಎಂದು ಬಿಸಿಯೂಟ ನೌಕರರ ತಿಪಟೂರು ತಾಲ್ಲೂಕು ಕಾರ್ಯದರ್ಶಿ(ಸಿಐಟಿಯು) ಎ.ಎನ್.ಲಕ್ಷ್ಮೀದೇವಿ ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.