ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಸಿಷನ್‌ ಶೀಟ್‌ಮೆಟಲ್‌ ಕಂ‍ಪನಿ ಪುನರಾರಂಭಕ್ಕೆ ಒತ್ತಾಯ

100ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ; ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ
Last Updated 23 ಅಕ್ಟೋಬರ್ 2018, 15:37 IST
ಅಕ್ಷರ ಗಾತ್ರ

ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಪ್ರಿಸಿಷನ್‌ ಶೀಟ್‌ಮೆಟಲ್‌ ಕಂಪನಿಯನ್ನು ಏಕಾಏಕಿ ಮುಚ್ಚಿದ್ದರಿಂದ 31 ಕಾಯಂ ನೌಕರರು ಸೇರಿದಂತೆ 100ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕೂಡಲೇ ಕಂಪನಿಯನ್ನು ಮತ್ತೆ ಆರಂಭಿಸಬೇಕು ಎಂದು ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಟೌನ್‌ಹಾಲ್‌ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಮಿಕರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

ಯಾವುದೇ ನೋಟಿಸ್ ನೀಡದೆ ಕಂಪನಿ ಮುಚ್ಚಿದ ಆಡಳಿತ ಮಂಡಳಿ ಕ್ರಮವನ್ನು ಖಂಡಿಸಿದರು. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

20 ವರ್ಷಗಳ ಹಿಂದೆ ಆರಂಭವಾದ ಕಂಪನಿಯು ಆರಂಭದಲ್ಲಿ ಕಾರ್ಮಿಕರನ್ನು ಅತಿ ಕಡಿಮೆ ವೇತನಕ್ಕೆ ದುಡಿಸಿಕೊಂಡಿದೆ. ಹೆಚ್ಚು ಲಾಭ ಮಾಡಿಕೊಂಡಿದೆ. 15 ವರ್ಷಗಳ ಹಿಂದೆ ಎಐಟಿಯುಸಿ ಕಾರ್ಮಿಕ ಸಂಘಟನೆ ಶಾಖೆ ತೆರದ ನಂತರ ಕಾರ್ಮಿಕರ ವೇತನ ಹೆಚ್ಚಿಸಿ ಅರ್ಹರನ್ನು ಕಾಯಂಗೊಳಿಸಿತು ಎಂದರು.

ಒಂದು ವರ್ಷದ ಹಿಂದೆ ಕಾರ್ಮಿಕ ಸಂಘಟನೆಯು ಆಡಳಿತ ಮಂಡಳಿಗೆ ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಹೆಚ್ಚಿಸುವಂತೆ ಹಾಗೂ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು. ಆದರೆ ಕಾರ್ಮಿಕರ ಸಣ್ಣಪುಟ್ಟ ಬೇಡಿಕೆಗಳನ್ನು ಕಂಪನಿ ಈಡೇರಿಸಲಿಲ್ಲ ಎಂದು ದೂರಿದರು.

ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅ.18 ರಂದು ಕಂಪನಿ ಪಾಲುದಾರರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದ ಆಡಳಿತ ಮಂಡಳಿ, ಅ.15ರಂದೇ ಏಕಾಏಕಿ ಕಂಪನಿಯನ್ನು ಮುಚ್ಚಿ ಎಲ್ಲ ಕಾರ್ಮಿಕರನ್ನು ತೆಗೆದುಹಾಕಿರುವ ಪತ್ರವನ್ನು ಭದ್ರತಾ ಸಿಬ್ಬಂದಿಗೆ ನೀಡಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕರಿಗೆ ವಯಸ್ಸಾಗಿದೆ. ಬೇರೆಡೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಇವರು ಜೀವನ ನಡೆಸಲು ಕಷ್ಟವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ಸಲಹೆಗಾರ ಎನ್.ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಕಂಬೇಗೌಡ, ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಹಾಗೂ ವಿವಿಧ ಕಂಪನಿಗಳ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿದರು.

ಪ್ರಿಸಿಷನ್ ಶೀಟ್‌ಮೆಟಲ್ ಎಂಪ್ಲಾಯೀಸ್ ಅಸೋಸಿಯೇಟ್ ಯೂನಿಯನ್ ಉಪಾಧ್ಯಕ್ಷ ಎಂ.ಟಿ.ವಾಸಣ್ಣ, ಸಹಕಾರ್ಯದರ್ಶಿ ರಾಜಶೇಖರಯ್ಯ, ಪಿ.ನಾರಾಯಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT