ಬುಧವಾರ, ಏಪ್ರಿಲ್ 21, 2021
25 °C

ತುಮಕೂರು: ಹಾಡಹಗಲೇ ಲಾಂಗ್ ಹಿಡಿದು ನಾಲ್ವರು ವ್ಯಕ್ತಿಗಳ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಊರುಕೆರೆ: ಕೋರ ಹೋಬಳಿ ಸಮೀಪವಿರುವ ಊರುಕೆರೆ ಗ್ರಾಮದಲ್ಲಿ ರೌಡಿಗಳು ಲಾಂಗು ಮಚ್ಚು ಝಳಪಿಸಿದ್ದು, ಜನರಲ್ಲಿ ಆತಂಕ ಮೂಡಿದೆ

ಊರುಕೆರೆ ಗ್ರಾಮದ ರೌಡಿ ಶೀಟರ್ ಕೃಷ್ಣಪ್ಪ ತನ್ನ ಮನೆ ಹತ್ತಿರ ಕಾರು ಹಿಂದಕ್ಕೆ ತೆಗೆಯುವಾಗ ರಾಜಣ್ಣ ಎಂಬುವವರಿಗೆ ಟಚ್ ಆಗಿದೆ, ಇದನ್ನು ರಾಜಣ್ಣ ಪ್ರಶ್ನಿಸಿದ್ದಾರೆ. ಆಗ ರೌಡಿ ಶೀಟರ್ ಕೃಷ್ಣಪ್ಪ ಮತ್ತು ಆತನ ಹಿಂಬಾಲಕರು ಗ್ರಾಮದ ತುಂಬೆಲ್ಲಾ ಲಾಂಗ ಗಳನ್ನು ಹಿಡಿದು  ರಾಜಣ್ಣನನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ.

ರಾಜಣ್ಣನ ಜೊತೆಯಲ್ಲಿದ್ದ ರಂಗಣ್ಣ, ಪುಟ್ಟನರಸಮ್ಮ ಮತ್ತು ಸುನೀಲ್ ಎಂಬುವವರಿಗೂ ಮಚ್ಚಿನಿಂದ ಎದೆ ಮತ್ತು ಹೊಟ್ಟೆಗೆ ಹಲ್ಲೆ ಮಾಡಿದ್ದು ಗಂಭೀರವಾಗಿ ಗಾಯಗೊಂಡ ಇವರನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೌಡಿ ಶೀಟರ್ ಪಟ್ಟಿಯಲ್ಲಿರುವ ಜಗದೀಶ, ಮಂಜುನಾಥ, ಕೃಷ್ಣಪ್ಪ, ಪುರುಷೋತ್ತಮ್ ಮತ್ತು ಅವರ ಹಿಂಬಾಲಕರಾದ  ಅಕ್ಷಯ್ ಹಾಗೂ ರಘು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಲಾಂಗ್‌ಗಳನ್ನು ಹಿಡಿದು ಗ್ರಾಮದ ತುಂಬೆಲ್ಲಾ ಓಡಾಡಿಕೊಂಡು ಈ ನಾಲ್ಕು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಣ್ಣ ಜಗಳಕ್ಕೂ ಲಾಂಗ್ ತೆಗೆಯುತ್ತಾರೆ

ಊರುಕೆರೆ ಗ್ರಾಮದಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿರುವ ಕೃಷ್ಣಪ್ಪ ಆತನ ತಮ್ಮಂದಿರ ಹಾವಳಿ ಮಿತಿಮೀರಿದೆ ಎಂದು ಸಾರ್ವಜನಿಕ ವಲಯದಿಂದ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಸಣ್ಣ ಪುಟ್ಟ ಜಗಳಕ್ಕೂ ಗುಂಪು ಕಟ್ಟಿಕೊಂಡು ಲಾಂಗ್‌ಗಳನ್ನು ಹಿಡಿದು ಓಡಾಡುತ್ತಾರೆ, ಅಟ್ರಾಸಿಟಿ ಹೆಸರಿನಲ್ಲಿ ಗೂಂಡಾವರ್ತನೆ ಮಾಡುತ್ತಾರೆ. ಪೋಲೀಸರ ಭಯವೇ ಇಲ್ಲವಾಗಿದೆ. ಊರುಕೆರೆ ಗ್ರಾಮ ಮತ್ತೊಂದು ಬೆತ್ತನಗೆರೆಯಾಗುವ ಭಯ ಹುಟ್ಟುತ್ತಿದೆ ಎಂದು ಹೆಸರೇಳಲಿಚ್ಚಿಸದ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು