ಮಂಗಳವಾರ, ಜೂನ್ 28, 2022
24 °C

ಮಾರುಕಟ್ಟೆ ವಿಶ್ಲೇಷಣೆ- ಸೊಪ್ಪು ಅಗ್ಗ; ಹಣ್ಣು ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದಿಂದ ಏರಿಕೆಯತ್ತ ಸಾಗಿದ್ದ ಸೊಪ್ಪಿನ ಬೆಲೆ ಈ ವಾರ ಇಳಿಕೆ ಕಂಡಿದೆ. ಕೆಲವು ತರಕಾರಿಗಳನ್ನು ಬಿಟ್ಟರೆ ಬಹುತೇಕ ತರಕಾರಿ ಹಾಗೂ ಧಾನ್ಯಗಳ ಬೆಲೆ ಸ್ಥಿರವಾಗಿದೆ. ಹಣ್ಣು ಸಾಮಾನ್ಯರ ಕೈಗೆಟುಕದಂತಾಗಿದೆ.

ಕಳೆದ ವಾರ ಕೊತ್ತಂಬರಿ ಸೊಪ್ಪು ಕೆ.ಜಿಗೆ ₹80 ಇದ್ದದ್ದು, ಈ ವಾರ ಅರ್ಧದಷ್ಟು ಇಳಿಕೆಯಾಗಿದ್ದು, ₹40–50ಕ್ಕೆ ಮಾರಾಟವಾಗಿದೆ. ಅದೇ ರೀತಿ ಸಬ್ಬಕ್ಕಿ ಸೊಪ್ಪು ಕೆ.ಜಿ ₹80ರಿಂದ ₹40ಕ್ಕೆ ತಗ್ಗಿದೆ. ಮೆಂತ್ಯ ಸೊಪ್ಪು ಕೆ.ಜಿ ₹40, ಪಾಲಕ್ ಸೊಪ್ಪು ಕೆ.ಜಿ ₹20–25ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

ಹೆಚ್ಚಳವಾಗುತ್ತಲೇ ಇದ್ದ ಬೀನ್ಸ್ ಬೆಲೆ ಈ ವಾರ ಸ್ಥಿರವಾಗಿದ್ದು, ಕೆ.ಜಿ ₹50–60ಕ್ಕೆ ಮಾರಾಟವಾಗಿದೆ. ಕ್ಯಾರೆಟ್, ಬದನೆಕಾಯಿ, ನಾಟಿ ಶುಂಠಿ ಬೆಲೆ ಸ್ವಲ್ಪ ಏರಿಕೆಯಾಗಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಗಗನಮುಖಿಯಾಗಿರುವ ಹಣ್ಣಿನ ಧಾರಣೆ, ಸ್ವಲ್ಪವೂ ಕಡಿಮೆ ಆಗದಿರುವುದು ಸಾಮಾನ್ಯರು ಹಣ್ಣು ತಿನ್ನುವುದರಿಂದ ದೂರವೇ ಉಳಿಯುವಂತೆ ಮಾಡಿದೆ. ಸೇಬು ಕೆ.ಜಿ ₹200ರ ಗಡಿಯಲ್ಲೇ ಮುಂದುವರಿದಿದೆ. ದಾಳಿಂಬೆ ಹಣ್ಣಿನ ಬೆಲೆ ಕೊಂಚ ಕಡಿಮೆಯಾಗಿದ್ದು, ಪಪ್ಪಾಯ ಕೆ.ಜಿ ₹40ರಿಂದ ₹30ಕ್ಕೆ ಕಡಿಮೆಯಾಗಿದೆ. ಉಳಿದ ಹಣ್ಣುಗಳ ಬೆಲೆ ಹಿಂದಿನ ವಾರದಂತೆ ಮುಂದುವರಿದಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಬೆಲೆಯೂ ಆಕಾಶದತ್ತಲೇ ಮುಖಮಾಡಿದೆ. ಸನ್‌ಫ್ಲವರ್ ಲೀಟರ್ ₹168, ಪಾಮಾಯಿಲ್ ಲೀಟರ್ ₹137ಕ್ಕೆ ಜಿಗಿದಿದೆ. ಧಾನ್ಯಗಳ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ನಗರದ ಪ್ರಮುಖ ದಿನಸಿ ಮಾರುಕಟ್ಟೆಯಾದ ಮಂಡಿಪೇಟೆಯಲ್ಲಿ ಕೋವಿಡ್‌ನಿಂದಾಗಿ ವಹಿವಾಟು ಮಂಕಾಗಿದೆ.

ಕೋಳಿ ಬೆಲೆ: ಕೋಳಿ ಬೆಲೆ ಬಹುತೇಕ ಸ್ಥಿರವಾಗಿದ್ದು, ಕೆ.ಜಿ ₹130ಕ್ಕೆ, ರೆಡಿ ಚಿಕನ್ ಕೆ.ಜಿ ₹180, ಮೊಟ್ಟೆ ಕೋಳಿ ಕೆ.ಜಿ ₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು